
ಹೊಸದಿಲ್ಲಿ: ಆರೋಪಿಯನ್ನು ಪೊಲೀಸರು ಅಧಿಕೃತವಾಗಿ ಬಂಧಿಸಿದ ಸಮಯದಿಂದಲ್ಲ, ಮೊದಲ ಬಾರಿಗೆ ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಅವಧಿ ಲೆಕ್ಕ ಹಾಕಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸಂವಿಧಾನದ 22(2)ನೇ ವಿಧಿಯ ಪ್ರಕಾರ, ವಶಕ್ಕೆ ಪಡೆದ ವ್ಯಕ್ತಿಯನ್ನು 24 ಗಂಟೆಗಳೊಳಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವುದು ಕಡ್ಡಾಯ. ಅಧಿಕೃತ ಬಂಧನದ ಸಮಯದಿಂದ ಲೆಕ್ಕ ಆರಂಭಿಸುವುದು ಸಂವಿಧಾನದ ಆಶಯಕ್ಕೆ ವಿರುದ್ಧ ಎಂದು ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಅತುಲ್ ಎಸ್. ಚಂದೂರ್ಕರ್ ಅವರ ಪೀಠ ಸ್ಪಷ್ಟಪಡಿಸಿದೆ.
ಬಂಧನ ಮತ್ತು ವಶಕ್ಕೆ ಪಡೆಯುವ ಪ್ರಕ್ರಿಯೆಗಳ ನಡುವೆ ಕೃತಕ ವ್ಯತ್ಯಾಸ ಮಾಡಲು ಸಾಧ್ಯವಿಲ್ಲ. ವ್ಯಕ್ತಿಯ ಸ್ವಾತಂತ್ರ್ಯವನ್ನು ನಿರ್ಬಂಧಿಸಿದ ಕ್ಷಣದಿಂದಲೇ ಆತನ ಮೂಲಭೂತ ಹಕ್ಕುಗಳು ಅನ್ವಯಿಸುತ್ತವೆ ಎಂದು ನ್ಯಾಯಾಲಯ ಹೇಳಿದೆ. ಇನ್ನು ಮುಂದೆ ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವಾಗ, ಪೊಲೀಸರು ವಶಕ್ಕೆ ಪಡೆದ ನಿಖರ ದಿನಾಂಕ ಮತ್ತು ಸಮಯವನ್ನು ದಾಖಲಿಸಬೇಕು. ಅಲ್ಲದೆ, 24 ಗಂಟೆಗಳ ಗಡುವು ಪಾಲನೆಯಾಗಿದೆಯೇ ಎಂಬುದನ್ನು ಮ್ಯಾಜಿಸ್ಟ್ರೇಟ್ ಪರಿಶೀಲಿಸಬೇಕು ಎಂದು ಸೂಚಿಸಿದೆ.
ತ್ರಿಪುರಾ ಹೈಕೋರ್ಟ್ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ಈ ತೀರ್ಪು ಹೊರಬಿದ್ದಿದೆ. ಎನ್‌ಡಿಪಿಎಸ್ ಕಾಯ್ದೆಯ ಪ್ರಕರಣದಲ್ಲಿ 2025ರ ಸೆಪ್ಟೆಂಬರ್ 29ರಂದು ಮಧ್ಯಾಹ್ನ 2 ಗಂಟೆಗೆ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ, ಮರುದಿನ ಬೆಳಿಗ್ಗೆ 11 ಗಂಟೆಗೆ ಅಧಿಕೃತ ಬಂಧನ ದಾಖಲಿಸಲಾಗಿತ್ತು. ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಲೆಕ್ಕ ಆರಂಭವಾಗಬೇಕಿದ್ದರಿಂದ, ಸುಮಾರು 18 ಗಂಟೆಗಳ ಕಾಲ ನ್ಯಾಯಾಂಗದ ಮೇಲ್ವಿಚಾರಣೆಯಿಲ್ಲದೆ ಇರಿಸಿದ್ದು ಸಂವಿಧಾನದ ಉಲ್ಲಂಘನೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹೀಗಾಗಿ, ನಾಲ್ವರು ಆರೋಪಿಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿದೆ.
ಬಂಧನದಲ್ಲಿರುವವರ ಮೇಲಿನ ಹಿಂಸಾಚಾರ ತಡೆಯಲು ವ್ಯಕ್ತಿಯನ್ನು ವಶಕ್ಕೆ ಪಡೆದ ಕ್ಷಣದಿಂದಲೇ ನ್ಯಾಯಾಂಗದ ಮೇಲ್ವಿಚಾರಣೆ ಇರಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಬಂಧನಕ್ಕೂ ಮುನ್ನದ ವಶದಲ್ಲಿದ್ದ ಅವಧಿಯನ್ನು 24 ಗಂಟೆಗಳ ಲೆಕ್ಕದಿಂದ ಹೊರಗಿಡಬಹುದು ಎಂಬ ಒಡಿಶಾ, ಕೇರಳ ಮತ್ತು ಮದ್ರಾಸ್ ಹೈಕೋರ್ಟ್‌ಗಳ ಹಿಂದಿನ ನಿಲುವನ್ನೂ ಒಪ್ಪಿಲ್ಲ. ವ್ಯಕ್ತಿಯ ಸ್ವಾತಂತ್ರ್ಯಕ್ಕೆ ನಿರ್ಬಂಧ ವಿಧಿಸಿದ ಕ್ಷಣದಿಂದಲೇ 24 ಗಂಟೆಗಳ ಅವಧಿ ಆರಂಭವಾಗುತ್ತದೆ ಎಂಬ ತತ್ವವನ್ನು ನ್ಯಾಯಾಲಯ ಎತ್ತಿಹಿಡಿದಿದೆ.

























