ಭಾಗ ,- 682
ಭರತೇಶ ಶೆಟ್ಟಿ,ಎಕ್ಕಾರು

ಕುಂತಿ ಮಂಡಿಯೂರಿ ಕುಳಿತಿದ್ದ ಧರ್ಮರಾಯನತ್ತ ನೋಡಿ “ಮಗನೇ! ನಾವು ಕ್ಷತ್ರಿಯರು. ನಮ್ಮ ಬಾಳಿಗೂ, ಬಾಳೆಯ ಬದುಕಿಗೂ ಸಾಮ್ಯತೆಯಿದೆ. ಬಾಳೆಯ ಗಿಡವೊಂದು ಬೆಳೆದು ದೊಡ್ಡದಾಗುತ್ತಾ ಅದರ ಜೀವನದ ಕರ್ತವ್ಯವಾಗಿ ಗೊನೆ ಹಾಕುತ್ತದೆ. ಅದೇ ಸಮಯದಲ್ಲಿ ಬುಡದಲ್ಲಿ ತನ್ನ ಮರಿ ಗಿಡವನ್ನೂ ಹುಟ್ಟಿಸಿ ಬೆಳೆಸುತ್ತದೆ. ಅದು ಎಲ್ಲಿಯ ತನಕ ನಿಲ್ಲುವ ಪ್ರಯತ್ನ ಮಾಡುತ್ತದೆ ಎಂದರೆ ತನ್ನ ಗೊನೆಯ ಬಾಳೆಕಾಯಿಗಳು ಬಲಿಯುವ ತನಕ ಮತ್ತು ತನ್ನ ಬುಡದಲ್ಲಿ ಮರಿ ಗಿಡ ಬೆಳೆಯುವವರೆಗೆ. ಅದೇ ರೀತಿ ಕ್ಷತ್ರಿಯಾನಿಯಾದ ನಾನು ನನ್ನ ಕರ್ತವ್ಯವಾದ ಗೊನೆ ಬಲಿಯುವ ತನಕ ನಿಂತಿದ್ದೆ. ಜೊತೆಗೆ ನನ್ನ ಗಿಡಗಳಾದ ನೀವು ಬೆಳೆಯುವವರೆಗೂ ನಿಂತಿದ್ದೆನು. ಅಂದರೆ ಪಾಂಡು ಚಕ್ರವರ್ತಿಗಳ ಪಟ್ಟದ ರಾಣಿಯಾಗಿ ನನಗೊಂದು ಹೊಣೆಗಾರಿಕೆಯಿತ್ತು. ಅವರ ವಂಶವಲ್ಲರಿಯಾದ ನಿಮ್ಮನ್ನು ಬೆಳೆಸಿ ಸ್ವತಂತ್ರರಾಗುವವರೆಗೆ ಪಾಲಿಸಬೇಕಾದುದು ನನಗೆ ವಿಹಿತ ಧರ್ಮವಾಗಿತ್ತು. ಜೊತೆಗೆ ಸತ್ಕರ್ಮಗಳೆಂಬ ಪುಣ್ಯ ಫಲವಾದ ಗೊನೆಯನ್ನು ಬೆಳೆಸುವ ಜವಾಬ್ದಾರಿಯೂ ಇತ್ತು. ಅವೆರಡನ್ನೂ ಮಾಡಿ ಪೂರೈಸಿದ ನನ್ನ ಬಾಳ್ವೆಯೂ, ಗೊನೆ ಹಾಕಿ ಮಾಗಿದ ಬಾಳೆಯ ಬದುಕೂ ಒಂದೇ ತೆರನಾದುದು. ಗೊನೆ ಕಡಿಯುವಾಗ ಬಾಳೆಯನ್ನೂ ಕಡಿಯುವಂತೆ ನಾನೂ ಸಂಬಂಧಗಳನ್ನು ಕಡಿದು ತಪೋವನ ಸೇರುವುದು ಧರ್ಮವಾಗುತ್ತದೆ. ಇನ್ನು ನನಗೆ ಇಲ್ಲಿ ಮಾಡುವಂತಹುದು ಏನೂ ಉಳಿದಿಲ್ಲ. ಇನ್ನೇನಿದ್ದರೂ ನನ್ನ ಕವಲುಗಳಾಗಿ ಬೆಳೆದಿರುವ ನೀವು ಮಾಡುವುದ್ದಕ್ಕಿದೆಯಷ್ಟೆ. ಮಗನೇ! ನೀವೆಲ್ಲಾ ನಿಮ್ಮ ಆಸೆ, ಯೋಚನೆಗನುಗುಣವಾಗಿ ಹೇಳಿಕೊಂಡಿದ್ದೀರಿ. ನಿಮ್ಮ ದೃಷ್ಟಿಯಲ್ಲಿ ನಿಮಗದು ಸರಿ ಎಂದು ಕಂಡಿರಲೂ ಬಹುದು. ಆದರೆ ನಾನೂ ಒಬ್ಬಳು ಹೆಣ್ಣು ಹೆಂಗಸು. ಮಾತೃ ಹೃದಯ ಎನ್ನುವುದು ನನಗೂ ಇದೆ. ನೀವು ದುಃಖಿಸಿದರೆ ನನಗೂ ಅಸಹನೀಯ ವೇದನೆಯಾಗುತ್ತದೆ. ನೀವೂ ದುಃಖ ಪಡದಿರಿ, ನನಗೂ ದುಃಖ ನೀಡದಿರಿ. ಅದರ ಬದಲಾಗಿ ನೀವು ಯೋಚಿಸಬೇಕು – ಸತ್ಯವೇನು? ಧರ್ಮವೇನು? ಜೀವನವೇನು? ಆಚಾರಗಳೇನು? ಅದಷ್ಟನ್ನು ಅರಿತು ನನ್ನನ್ನು ಧರ್ಮಮಾರ್ಗದಲ್ಲಿ ಮುಂದುವರಿಯಲು ಮುಕ್ತಳಾಗಿ ಬಿಡಬೇಕು. ಓರ್ವ ಮಾತೆಯಾಗಿ ತನ್ನ ಮಕ್ಕಳನ್ನು ಒಂದು ನೆಲೆಗೆ ತಂದು ನಿಲ್ಲಿಸುವ ಕನಸು ಕಾಣಬೇಕಿತ್ತು. ಅದನ್ನು ನನಸಾಗಿಸುವ ಪ್ರಯತ್ನ ಮಾಡಬೇಕಿತ್ತು. ಆ ಕರ್ತರ್ವ್ಯ ನಿರ್ವಹಿಸಿದ್ದೇನೆ. ನಿಮಗಾಗಿ ಏನೇನು ಸಾಧುವೊ, ಸಾಧ್ಯವೊ ಅದೆಲ್ಲವನ್ನು ಮಾಡಿದ್ದೇನೆ. ನನ್ನಿಂದಾಗುವಷ್ಟು ಶಕ್ತಿ ಮೀರಿ ತ್ಯಾಗ, ಸಹನೆ, ಶ್ರಮ, ಭಕ್ತಿ, ಪ್ರಾರ್ಥನೆ ಹೀಗೆ ಎಲ್ಲವನ್ನೂ ವಿನಿಯೋಗಿಸಿದ್ದೇನೆ. ಭಗವಂತನ ಅನುಗ್ರಹವೂ ನಮಗೊದಗಿತು. ನೀವೂ ಅದಕ್ಕೆ ಪೂರಕರಾಗಿ ಸಾಧನೆ ಮಾಡಿದ್ದೀರಿ. ಈಗ ನನ್ನ ಮಕ್ಕಳು ಗೆದ್ದು ಸಾಮ್ರಾಜ್ಯವಾಳುವ ಉನ್ನತ ಸ್ಥಿತಿಗೇರಿದ್ದಾರೆ. ಆ ವಿಚಾರದ ಕೃತಾರ್ಥತೆಯ ಸಂತೋಷವಷ್ಟೆ ನನಗೆ ಬೇಕಾದುದು ಹೊರತು ಅಂತಹ ಸುಖವನ್ನು ಅನುಭವಿಸಿ ಬದುಕುವ ಅಗತ್ಯ ನನಗಿಲ್ಲ. ನಾನು ಮಾಡ ಬೇಕಾಗಿದ್ದ ಆದ್ಯ ಕರ್ತವ್ಯ ಮಾಡಿ ಪೂರೈಸಿಯಾಗಿದೆ. ಇನ್ನು ಇಲ್ಲಿ ನನ್ನ ಮಕ್ಕಳಾದ ನಿಮ್ಮ ಜೊತೆ ಉಳಿಯಲು, ನಾನು ಮಾಡಬೇಕಾದ ಕರ್ತವ್ಯಗಳೇನೂ ಉಳಿದಿಲ್ಲವಲ್ಲ! ಅಂತಹ ನಿರುದ್ಯೋಗದ ಸ್ಥಿತಿಯಲ್ಲಿ ನನ್ನ ಮಕ್ಕಳು ನೀವಾಗಿದ್ದರೂ ನೀವು ನೀಡುವ ಅನ್ನ ಆಹಾರವನ್ನು ಉಣ್ಣುತ್ತಾ ಬದುಕುವುದು ಚಕ್ರವರ್ತಿಯ ಪತ್ನಿ – ಸಾಮ್ರಾಜ್ಞಿಯಾದ ನನಗೆ ಭೂಷಣವಲ್ಲ. ನಿಮ್ಮನ್ನು ಸಾಕಿ ಸಲಹುವ ಏಕೈಕ ಕಾರಣಕ್ಕಾಗಿ ಈ ನನ್ನ ಉಸಿರನ್ನು ಎರವಲಾಗಿ ಉಳಿಸಿಕೊಂಡು ಇಷ್ಟು ಕಾಲ ಬದುಕಿದ್ದೆ. ಅದಲ್ಲದೆ ಹೋಗಿದ್ದರೆ ಅಂದು ನನ್ನ ಪತಿ ಪಾಂಡು ಚಕ್ರವರ್ತಿಗಳ ಜೊತೆ ಸಹಗಮನ ಮಾಡಿ ಆಗಿರುತ್ತಿತ್ತು. ಅಂದು ಸಾಯದೆ ಇಂದಿನ ತನಕ ಬದುಕುವಲ್ಲಿ ಸಂಕಲ್ಪ ಇದ್ದುದು ಮಕ್ಕಳಾದ ನಿಮ್ಮ ಏಳಿಗೆ. ಈಗ ನಾನು ಮಾಡಬೇಕಾಗಿದ್ದ ಕರ್ತವ್ಯ ಮಾಡಿ ಆಯಿತಲ್ಲವೆ? ಅಂದು ಸಾಯಬೇಕಾಗಿದ್ದ ಈ ಕಾಯವನ್ನು ಕಾರ್ಯಕಾರಣ ಪೂರೈಸಿದ ಬಳಿಕವೂ ಉಳಿಸುವುದು ಧರ್ಮವಾದೀತೆ? ನ್ಯಾಯವಾದೀತೆ? ಸ್ವಾರ್ಥವಾಗದೆ? ಮಗನೇ! ಇನ್ನು ನನಗುಳಿದಿರುವುದು ಒಂದೇ ಒಂದು ಅಂತಿಮ ಕಾರ್ಯ ಸಾಧನೆ ಮಾತ್ರ. ಅದೇನೆಂದರೆ ನನ್ನ ಪತಿಯ ಗತಿಯನ್ನು ಸೇರಿಕೊಳ್ಳುವುದು. ಅದನ್ನುಳಿದು ಅನ್ಯ ವಿಚಾರದೆಡೆ ನನ್ನ ಮನಸ್ಸು ವಿಚಲಿತಗೊಳ್ಳದು. ಆ ಸ್ಥಿತಿ ನನಗೆಂದು ಪ್ರಾಪ್ತವಾಗುವುದೊ ಆ ತನಕ ಈ ಈರ್ವರು ವೃದ್ಧರ ಸೇವೆ ಮಾಡಬೇಕು. ಯಾವಾಗ ಕಾಲ ಕರೆಯುತ್ತದೊ ಅಂದು ನಿಮ್ಮ ತಂದೆ ಇರುವ ಲೋಕವನ್ನು ಸೇರಿಕೊಳ್ಳುತ್ತೇನೆ. ನೀನು ನನ್ನ ಮಗ – ನೀನು ಏನು, ನಿನ್ನ ತಿಳುವಳಿಕೆ, ಧರ್ಮ ಬುದ್ದಿ ಎಷ್ಟು ಎಂದು ಮಾತೆಯಾದ ನನಗೆ ಚೆನ್ನಾಗಿ ತಿಳಿದಿದೆ. ಈ ತನಕದ ಜೀವನದಲ್ಲಿ, ಅದೂ ತೀರಾ ಅನಿವಾರ್ಯ ಸ್ಥಿತಿಯಲ್ಲಿ ನಿನ್ನ ಸರ್ವಸ್ವವನ್ನು ತ್ಯಾಗ ಮಾಡಿರುವೆ. ಆದರೆ ಎಂತಹ ನಿಕೃಷ್ಟ ಸ್ಥಿತಿ ಒದಗಿದರೂ ಧರ್ಮ ಒಂದನ್ನು ತೊರೆಯದೆ ಅನುಸರಿಸಿದ ಕೀರ್ತಿವಂತ ಮಹಾತ್ಮ ನೀನಾಗಿರುವೆಯಲ್ಲವೆ? ನಿನಗದು ಭೂಷಣ. ಈಗಲೂ ಯುಕ್ತ ಧರ್ಮ ಯಾವುದೆಂದು ನಿನಗೆ ಅರ್ಥವಾಗಿದೆ. ಹಾಗಾಗಿ ಇನ್ನೇನೂ ಹೇಳಲಾರೆ, ಕೇಳಲಾರೆ ಎಂಬ ನಂಬಿಕೆ ನನಗಿದೆ. ಮಗನೇ! ನಿನಗೇನು ಅಪ್ಪಣೆ ಎಂದು ಕೇಳಿರುವೆ! ನಾನು ಹೇಳಿ ತಿಳಿಯಬೇಕಾದುದು ಯಾವುದೂ ಉಳಿದಿಲ್ಲ. ಸ್ವಯಂ ಧರ್ಮಮೂರ್ತಿಯ ಪ್ರತಿರೂಪದಂತಿರುವ ನಿನ್ನಲ್ಲಿ ನನ್ನದೊಂದು ಕೋರಿಕೆ! ಇವರನ್ನೆಲ್ಲಾ ಸಮಾಧಾನ ಪಡಿಸಿ ಹಿಂದಕ್ಕೆ ಕರೆದುಕೊಂಡು ಹೋಗು. ನಿಮಗೆಲ್ಲರಿಗೂ ಇನ್ನೂ ನಿಭಾಯಿಸಬೇಕಾದ ಕರ್ತವ್ಯಗಳು ಉಳಿದಿವೆ. ನಿನ್ನ ಬುದ್ಧಿ ಪ್ರತಿಕ್ಷಣವೂ ಧರ್ಮದಲ್ಲಿ ಸ್ಥಿತವಾಗಿರಲಿ. ಮನಸ್ಸು ಬಹಳಷ್ಟು ವಿಶಾಲವಾಗಿರಲಿ, ಜೊತೆಗೆ ತಿಳಿಯಾಗಿರಲಿ. ನಿಮ್ಮಲ್ಲಿ ವಿದ್ಯೆಯಿದೆ – ವಿವಾದವಾಗದಂತೆ,
ಬಲವಿದೆ – ಮನಸ್ಸಿಗೆ ಮದವೇರದಂತೆ,
ಸಂಪತ್ತು ಇದೆ – ದುರ್ವ್ಯಯವಾಗದಂತೆ ಜಾಗ್ರತೆ ವಹಿಸಿಕೊಳ್ಳಿ. ದಕ್ಷ ಆಡಳಿತ ನಿನ್ನದಾಗುತ್ತದೆ. ಇದಿಷ್ಟು ನನಗೆ ಹೇಳಲಿಕ್ಕಿದ್ದದ್ದು. ಮತ್ತೇನಿದ್ದರೂ ವಾಸುದೇವನ ಕೃಪೆ ರಕ್ಷಾಕವಚವಾಗಿ ನಿಮ್ಮನ್ನು ಕಾಪಾಡುತ್ತಾ ಸಂರಕ್ಷಿಸುತ್ತಿರಲಿ ಎಂಬ ಹಾರೈಕೆ ನನ್ನದು. ಎಲ್ಲರಿಗೂ ಸನ್ಮಂಗಲವಾಗಲಿ” ಎಂದು ಹರಸಿ ಆಶೀರ್ವದಿಸಿದ ಕುಂತಿದೇವಿ ತಿರುಗಿ ತಾನು ಸೇರಬೇಕಾದ ಗಮ್ಯದತ್ತ ಹೆಜ್ಜೆ ಹಾಕುತ್ತಾ ಸಾಗ ತೊಡಗಿದಳು.
ಪಾಂಡವರಿಗಾಗಲಿ, ಇತರರಿಗಾಗಲಿ ತುಟಿ ಪಿಟಿಕ್ಕೆನ್ನಲಾಗಲಿಲ್ಲ. ಕುಂತಿಯ ಮಾತುಗಳು ಎಲ್ಲರನ್ನೂ ಬ್ರಹ್ಮಾಸ್ತ್ರದಂತೆ ಬಂಧಿಸಿತ್ತು. ಕುಂತಿಯ ಧೃಡ ಸಂಕಲ್ಪ, ಜೀವನದ ಉದ್ದೇಶ, ಸತ್ಯ ಸಂದೇಶದ ಮಧ್ಯೆ ಯಾವ ವಾದ ಸಂವಾದಕ್ಕೂ ಎಡೆ ಉಳಿಸಿರಲಿಲ್ಲ. ಕುಂತಿ ನಡೆದು ದೂರ ಸಾಗುತ್ತ ಮುಂದೆ ಮುಂದೆ ಹೋಗುತ್ತಾ ಇದ್ದಾಳೆ. ಪಾಂಡವರ ದುಃಖ ಮುಗಿಲು ಮುಟ್ಟುತ್ತಿದೆ. ಭೀಮಾರ್ಜುನರು, ನಕುಲ ಸಹದೇವರು ಎಷ್ಟು ಅತ್ತರೆಂದರೆ ನಿಂತ ಕಾಲಡಿಯ ನೆಲ ತೋಯ್ದು ಹೋಯಿತು. ದ್ರೌಪದಿ ಸುಭದ್ರೆಯರು ಸಂತೈಸುವ ಸ್ಥಿತಿಯಲ್ಲಿಲ್ಲ. ಧರ್ಮರಾಯನು ಮಾತ್ರ ಧರ್ಮ ಸಂಕಟಕ್ಕೆ ಸಿಲುಕಿದ್ದಾನೆ. ಅಮ್ಮ ಹೇಳಿದ ಅಕ್ಷರ ಅಕ್ಷರಗಳೂ ಧರ್ಮದ ತಿಲಕದಂತಿವೆ. ಧರ್ಮಾನುವರ್ತಿಯಾದ ಅಮ್ಮನ ನಡೆಗೆ ನಾನು ಸಂತೋಷದಿಂದ ಪ್ರೋತ್ಸಾಹಿಸಬೇಕು ಎಂದು ಬುದ್ದಿ ಹೇಳುತ್ತಿದ್ದರೆ, ಮಗನಾಗಿ ಮನಸ್ಸು ಮಾತೆಯ ಪ್ರೀತಿಯನ್ನು ಹಂಬಲಿಸಿ ಮಮ್ಮಲ ಮರುಗುತ್ತಿದೆ. ಜೀವನ ಎಂಬ ಯುದ್ಧವನ್ನು ಸ್ಥಿರತೆಯಿಂದ ಹೋರಾಡಬಲ್ಲ ಕ್ಷಮತೆಯುಳ್ಳವನಲ್ಲವೆ ಯುಧಿಷ್ಠಿರ! ಸ್ಥಿತಪ್ರಜ್ಞೆಯ ಸಾಕಾರ ಮೂರ್ತಿಯಲ್ಲವೆ? ಎಚ್ಚೆತ್ತು ಜಾಗ್ರತನಾಗಿ ತಮ್ಮಂದಿರನ್ನೂ, ಪ್ರಜಾಪರಿವಾರವನ್ನೂ ಸಂತೈಸಿ ಹಸ್ತಿನೆಯ ಅರಮನೆಯತ್ತ ಮುಖ ಮಾಡಿಸಿ ಹಿಂದಕ್ಕೆ ಕರೆತಂದನು. ಆದರೆ ಭೀಮ ಅಣ್ಣನ ಮಾತಿಗೆ ಒಡಂಬಟ್ಟು ಹತ್ತಾರು ಹೆಜ್ಜೆ ಮುಂದೆ ಬಂದನಾದರೂ…. ಅಮ್ಮಾ……… ಎಂದು ಬೊಬ್ಬಿರಿಯುತ್ತಾ ವಾಯುವೇಗದಲ್ಲಿ ಕುಂತಿ ಹೋದತ್ತ ಓಡಿದನು. ಆಗ ಭೀಮಾ… ಎಂಬ ಅಣ್ಣ ಧರ್ಮಜನ ಕೂಗು ಮೇಯಲು ಗೂಟ ಹಾಕಿ ಕಟ್ಟಿದ ದನದ ಹಗ್ಗದಂತೆ ತಡೆದೆಳೆದು ಮುಂದೆ ಓಡದಂತೆ ಜಗ್ಗಿ ನಿಲ್ಲಿಸಿತು. ಎಳೆ ಮಗುವಿನಂತೆ ಗಲ್ಲದಿಂದಿಳಿದು ಎದೆ ತೋಯಿಸುತ್ತಾ ಪಾದಕ್ಕಿಳಿಯುತ್ತಿರುವ ಕಣ್ಣೀರಧಾರೆಯೊಂದಿಗೆ ಭಾರವಾದ ಹೆಜ್ಜೆ ಹಾಕುತ್ತಾ ಹಿಂದಿರುಗಿ ಬಂದನು. ಹಸ್ತಿನೆಯ ಅರಮನೆ ಸ್ವರ್ಗದ ಅಮರಾವತಿಯಂತೆ ವೈಭವ ಸಡಗರ ತುಂಬಿರುತ್ತಿತ್ತು. ಇಂದು ಮಾತ್ರ ಸ್ಮಶಾನ ಸದೃಶವಾಗಿ ನೀರವ ಮೌನವನ್ನಷ್ಟೆ ಉಳಿಸಿಕೊಂಡಿದೆ.
ಕುಂತಿ, ಗಾಂಧಾರಿ, ಧೃತರಾಷ್ಟ್ರ, ವಿದುರ, ಸಂಜಯರು ತಪೋವನದತ್ತ ಹೋಗುತ್ತಲಿದ್ದಾರೆ. ಸಾಗುತ್ತಾ ಗಂಗಾ ತೀರ ಸೇರಿದ್ದಾರೆ. ಅಲ್ಲಿ ಶುಚಿರ್ಭೂತರಾಗಿ ಭಾಗೀರಥಿ ತೀರದ ತಪೋವನವನ್ನು ಹೊಕ್ಕರು.
ಮುಂದುವರಿಯುವುದು…

























