24.2 C
Udupi
Wednesday, November 4, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 680

ಭರತೇಶ ಶೆಟ್ಟಿ,ಎಕ್ಕಾರು

ಕುಂತಿಯ ಮಾತುಗಳು ಕಹಿ ಸತ್ಯಗಳಾಗಿದ್ದವು. ಧರ್ಮರಾಯನನ್ನು ಕರೆದು “ಮಗನೇ! ನಿನ್ನ ತಾಯಿ ಕಷ್ಟ ಪಟ್ಟಿರುವುದನ್ನು ನೆನೆದು ದುಃಖಿಸುತ್ತಿರುವೆ. ಅದು ನಿಜವಾಗಿಯೂ ಹೌದು. ಹಾಗಂದ ಮಾತ್ರಕ್ಕೆ ನಿನ್ನ ತಾಯಿ ಒಬ್ಬಳೇ ಕಷ್ಟ ದುಃಖ ಅನುಭವಿಸಿರುವುದಲ್ಲವಲ್ಲ‌. ನನ್ನ ಮಕ್ಕಳಾದ ನಿಮ್ಮ ಜೀವನವೂ ಕಷ್ಟ ಕಾರ್ಪಣ್ಯಗಳ ಸಾಗರವನ್ನು ಈಜಿ ಬಂದಿರುವುದನ್ನು ಮರೆಯುವ ಹಾಗಿಲ್ಲ‌. ನಮಗಾಗಿರುವ ಕಷ್ಟಗಳು ಸ್ವಯಂ ನಮ್ಮ ಅನುಭವಕ್ಕೆ ಬಂದಿದೆ. ನಮ್ಮ ಜೊತೆಗೆ ಅದೆಷ್ಟೋ ಜನರಿಗೂ ಕಷ್ಟ ಒದಗಿದೆ. ಆ ಕುರಿತೂ ನಾವು ಯೋಚಿಸಬೇಕು. ವತ್ಸಾ! ನನಗೆ ನನ್ನದ್ದೇ ಆದ ಕರ್ತವ್ಯಗಳಿವೆ. ನಾನು ಅವುಗಳಿಂದ ವಿಮುಖಳಾಗಬಾರದು. ನೂತನ ಮದುಮಗಳಾಗಿ ಚಂದ್ರವಂಶದ ಕುಲವಧುವಾಗಿ ಹಸ್ತಿನೆಗೆ ಬಂದವಳು ನಾನು. ನನ್ನ ಅತ್ತೆ ಮಾವಂದಿರ ಸೇವೆ ಮಾಡುವುದು ನನ್ನ ಆದ್ಯ ಕರ್ತವ್ಯವಾಗಿತ್ತು. ಆದರೆ ಅವರ ಸೇವೆ ಮಾಡುವ ಭಾಗ್ಯ ನನಗೊದಗಲಿಲ್ಲ. ಆದರೆ ಈಗ ಈ ಇಬ್ಬರು ನನ್ನ ಪಾಲಿಗೆ ಅತ್ತೆ ಮಾವನಂತೆ ಸಮಾನ ಸ್ಥಾನಿಗಳು ಎಂದು ಭಾವಿಸಿ ಇವರೀರ್ವರ ಸೇವೆ ಮಾಡುತ್ತಾ ನನ್ನ ಪಾಪ ತೊಳೆದುಕೊಳ್ಳಬೇಕು. ಮಗಾ ಯುಧಿಷ್ಠಿರಾ! ನೀವೈವರು ನನ್ನ ಜೊತೆ ಬೆಳೆದ ಮಕ್ಕಳು. ಆದರೆ ಜೇಷ್ಠ ಪುತ್ರ ಕರ್ಣನ ಬಗ್ಗೆ ಯಾರಿಗೂ, ಎಲ್ಲೂ, ಏನೂ ಹೇಳದೆ ಮಹಾಪರಾಧವನ್ನು ಮಾಡಿ ಬಿಟ್ಟಿದ್ದೇನೆ. ತತ್ಪರಿಣಾಮವಾಗಿ ಆತನನ್ನು ಕಳೆದುಕೊಳ್ಳಬೇಕಾಯಿತು. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ. ದೈವೇಚ್ಚೆಯಂತೆ ಏನೇನೊ ಆಗಿ ಹೋಯಿತು. ಆದರೆ ಆತನ ತಮ್ಮಂದಿರಾದ ನೀವು ಅಣ್ಣ ಕರ್ಣನನ್ನು ಮರೆಯದಿರಿ. ದಾನ ಶೂರನಾಗಿ ತನ್ನ ಮೈದೊಗಲಾಗಿದ್ದ ರಕ್ಷಾಕವಚವನ್ನು ಸೀಳಿ ದೇವರಾಜ ಇಂದ್ರನಿಗೆ ದಾನ ಮಾಡಿದ ಮಹಾದಾನಿ ಅವನು. ಆತನ ಅಂತ್ಯಕ್ಷಣದವರೆಗೂ ದಾನ ಮಾಡುತ್ತಾ ಬದುಕಿದ್ದನು. ಸ್ವಾಮಿ ದ್ರೋಹ ಮಾಡ ಬಾರದು, ಅದು ಮಹಾಪಾಪ ಎಂದು ತಿಳಿದು ಕೌರವನ ಮೇಲಿನ ನಿಷ್ಠೆಯನ್ನು ಮರೆಯದೆ ಪ್ರಾಣಾರ್ಪಣೆ ಮಾಡಿದ ಪುಣ್ಯಜೀವಿ ಅವನು. ಎಳವೆಯಲ್ಲಿ ಆತ ಪಟ್ಟ ಪಾಡು ಅಷ್ಟಿಷ್ಟಲ್ಲ. ಕ್ಷಾತ್ರ ವಿದ್ಯೆ ಕಲಿಯಲು ಯಾರ ಯಾರ ಕಾಲಿಗೆ ಬಿದ್ದು ಬೇಡಿದ್ದಾನೊ ಅದು ಅವನಿಗೆ ಮಾತ್ರ ಗೊತ್ತಿರುವ ವಿಚಾರ. ಆತ ಅನುಭವಿಸಿದ ಅಪಮಾನಗಳೆಷ್ಟು. ಬಾಲ್ಯದಲ್ಲಿ ಆತನಿಗೆ ರಕ್ಷಣೆ, ವಿದ್ಯೆ, ಸಂಸ್ಕಾರ, ಸಂಮಾನ ದೊರೆತಿದ್ದರೆ ಆತನೂ ಸುಖ ಜೀವನ ಪಡೆಯುತ್ತಿದ್ದನು. ಕಾಲ ಮಿಂಚಿ ಹೋದ ಮೇಲೆ ಒಂದು ದಿನ ನಾನು ಅವನ ತಾಯಿ, ನೀವೈವರು ಅವನ ಸೋದರರು ಎಂದು ಹೇಳಿದರೂ, ಮನ ಬದಲಾಯಿಸದೆ ಸ್ವಾಮಿ ನಿಷ್ಠೆಯನ್ನು ತೋರಿದ ಆತನನ್ನು ನೆನೆದರೆ ನನ್ನ ಕರುಳು ಹಿಂಡಿದಂತಾಗುತ್ತದೆ. ಆತನ ಸದ್ಗತಿಗಾಗಿ ಬಹುರೀತಿಯ ದಾನ ಧರ್ಮಗಳನ್ನು ಮಾಡುತ್ತಿರಿ. ಇಂತಹ ನಿಷ್ಠಾವಂತ, ದಾನಶೂರ ಮಗನನ್ನು ಹೆತ್ತು ಆ ವಿಚಾರವನ್ನು ಗುಪ್ತವಾಗಿಟ್ಟ ಅಪರಾಧಕ್ಕೆ ಪ್ರಾಯಶ್ಚಿತ್ತವಾಗಬೇಕು. ನನ್ನ ಮಗ ಕರ್ಣ ಯಾವ ದುರ್ಯೋಧನನ್ನು ಪರಮಮಿತ್ರ, ತನ್ನ ಸ್ವಾಮಿ ಎಂದು ಆರಾಧಿಸಿದ್ದನೋ, ಆ ದುರ್ಯೋಧನನ ವೃದ್ಧರಾಗಿರುವ ತಂದೆ ತಾಯಿಯರ ಸೇವೆ ಮಾಡಿಯಾದರೂ ಕರ್ಣನಿಗೆ ನಾನು ಎಸಗಿದ ಅಪರಾಧಕ್ಕೆ ಕಿಂಚಿತ್ ಶಾಂತಿ ಮಾಡಿಕೊಳ್ಳುತ್ತೇನೆ. ಮಗಾ ಧರ್ಮರಾಯಾ! ನಾನು ಕಳಕೊಂಡದ್ದು ಓರ್ವ ಮಗನನ್ನು, ಈ ತಾಯಿ ಗಾಂಧಾರಿಗೆ ನೂರು ಮಕ್ಕಳಿದ್ದರೂ ಒಬ್ಬರೂ ಉಳಿದಿಲ್ಲ. ನನಗೆ ಒಬ್ಬನ ಮರಣ ಇನ್ನಿಲ್ಲದಂತೆ ಬಾಧಿಸುತ್ತಿದೆ. ಹಾಗಿರುವಾಗ ಈಕೆಯ ದುಃಖ ನನಗಿಂತಲೂ ನೂರ್ಮಡಿ ಅಧಿಕ ಇರಬಹುದಲ್ಲವೆ? ಆಕೆಗೆ ಸಾಂತ್ವಾನ ಹೇಳಲಿಕ್ಕಾದರೂ ನಾನು ಜೊತೆಯಿರುತ್ತೇನೆ. ನೀನು ನನ್ನ ಕಷ್ಟದ ಜೀವನ, ದುಃಖದ ಕ್ಷಣಗಳನ್ನು ಹೇಳಿದೆ. ಈಗ ಈ ವೃದ್ಧ ದಂಪತಿಗಳು ದುಃಖತಪ್ತರಾದವರು, ಏನನ್ನೂ ನೋಡಲಾರದವರು ತಪೋವನದಲ್ಲಿ ಬದುಕುವುದಾದರೂ ಹೇಗೆ? ಗಾಂಧಾರಿ ಒಬ್ಬಾಕೆ ಹೆಣ್ಣು. ಆಕೆಯ ಜೊತೆಗಿದ್ದು ಸೇವೆ ಮಾಡುತ್ತಾ ನನ್ನ ದೋಷಗಳನ್ನಾದರೂ ತೊಳೆದುಕೊಳ್ಳುವ ಅವಕಾಶ ನನಗೆ ಅನಿವಾರ್ಯವಾಗಿದೆ. ಮಕ್ಕಳೇ! ನಿಮಗೆ ತಾಯಿ ಇಲ್ಲ ಎಂಬ ಕೊರಗು ಬಾಧಿಸದು. ಪರಮಾತ್ಮ ವಾಸುದೇವ ನಿಮಗೆ ತಂದೆಯೂ ತಾಯಿಯೂ ಆಗಿ ಸಂರಕ್ಷಿಸುತ್ತಾನೆ. ಆತನ ಮಾತನ್ನು ಮೀರದೆ, ಧರ್ಮ ಮಾರ್ಗದಲ್ಲಿ ಮುಂದುವರಿಯಿರಿ. ಹಾ ಧರ್ಮಜಾ! ನಕುಲ ಸಹದೇವರು ಎಳೆಯರು. ಮೃದು ಸ್ವಭಾವದವರು. ಅವರಿಬ್ಬರನ್ನು ನೋಯಿಸದಿರಿ. ಭೀಮ ನೇರ ನಿಷ್ಠುರ ಗುಣದವನು, ಆತನನ್ನು ಕೆರಳಿಸದಿರಿ. ಕೆರಳದೆ ಇರುವ ಭೀಮ ಮುದ್ದು ಮಗುವಿನಂತೆ. ಇನ್ನು ಅರ್ಜುನ ತುಂಬಾ ಸೂಕ್ಷ್ಮ ಸ್ವಭಾವದವನು. ಏನು ಹೇಳದಿದ್ದರೂ ಪರಿಸ್ಥಿತಿಗನುಗುಣವಾಗಿ ಅರಿತುಕೊಳ್ಳಬಲ್ಲವನು. ನಿನಗೆ ಸಹಕರಿಸುವನೆಂಬ ವಿಶ್ವಾಸವಿದೆ. ಎಲ್ಲರೂ ಒಮ್ಮತದಿಂದ ಬಾಳುತ್ತಾ ಒಗ್ಗಟ್ಟಿನಿಂದಿರಿ. ಮಗಾ! ದ್ರೌಪದಿ ನಮ್ಮ ಮನೆಗೆ ಬಂದ ಮಗಳು. ಅಮಾನವೀಯ ಶೋಷಣೆಗೊಳಗಾಗಿ ಮರೆಯಲಾಗದ ದುಃಖವುಂಡವಳು. ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಿ. ಅವಳಿಗೆ ಪ್ರಿಯವಾಗುವಂತೆ ನಡೆದುಕೊಳ್ಳಿ. ನಿಮಗೆಲ್ಲರಿಗೂ ಶ್ರೇಯಸ್ಸಾಗಲಿ” ಎಂದು ಹರಸಿ ದ್ರೌಪದಿಯತ್ತ ತಿರುಗಿದ ಕುಂತಿ “ಮಗಳೇ ದ್ರೌಪದಿ! ನಿನಗೆ ಯಾರೋ ಹೇಳಿ ತಿಳುವಳಿಕೆ ಬರ ಬೇಕಾದುದಿಲ್ಲ. ಪ್ರಬುದ್ಧೆಯಾದ ನೀನು ಗಂಡಂದಿರ ಜೊತೆ ಹೇಗೆ ಬದುಕಬೇಕೆಂದು ಈಗಾಗಲೆ ತೋರಿಸಿರುವೆ. ಆದರ್ಶ ಪತಿವ್ರತೆಯಾದ ನಿನಗೆ ನಾನು ಹೆಚ್ಚೇನೂ ಹೇಳಬೇಕಾಗಿಲ್ಲ. ಆದರೂ ಒಂದು ಮಾತು, ತಾಯಿ ಇಲ್ಲದ ನನ್ನ ಮಕ್ಕಳಿಗೆ ನೀ‌ನು ತಾಯಿಯಾಗಿ ಪೋಷಿಸಬೇಕು. ಅವರು ತಬ್ಬಲಿಗಳಾದೆವೆಂದು ಅರೆ ಕ್ಷಣವೂ ಭಾವಿಸದಂತೆ ನೋಡಿಕೊಂಡರೆ ಅಷ್ಟೇ ಸಾಕು” ಎಂದು ಹೇಳಿ ಕೈ ಮುಗಿದಳು. ನಂತರ ಸುಭದ್ರೆಯನ್ನು ಕರೆದು “ಅಮ್ಮಾ! ನೀನು ಶ್ರೀಕೃಷ್ಣ ಪರಮಾತ್ಮನ ತಂಗಿಯಲ್ಲವೇ? ಆ ಭಗವಂತನ ಸೋದರಿಯಾಗಿ ಜನಿಸಿ ನಮ್ಮ ಮನೆ, ವಂಶ ಬೆಳಗುವ ಯೋಗ ಪಡೆದವಳು. ನಿನ್ನ ಮಗ ಅಭಿಮನ್ಯುವಿನಿಂದ ನಮ್ಮ ಮುಂದಿನ ವಂಶವೃಕ್ಷಕ್ಕೆ ಮಗುವೊಂದು ಪ್ರದತ್ತವಾಗಿದೆ. ಉತ್ತರೆಯನ್ನೂ, ನಮ್ಮ ವಂಶದ ಕುಡಿ ಪರೀಕ್ಷಿತನನ್ನೂ ಸಾಕಿ ಸಲಹುವ ಹೊಣೆಗಾರಿಕೆ ನಿನ್ನದಮ್ಮಾ. ನಮ್ಮ ವಂಶಾಕುರದ ಪಾಲನೆಯ ಗುರುತರ ಜವಾಬ್ದಾರಿ ಮಹತ್ತರವಾದುದು. ಅದು ಈಗ ನಿನ್ನದ್ದಾಗಿದೆ” ಎಂದು ಹೇಳಿದಳು. ಮತ್ತೊಮ್ಮೆ ಎಲ್ಲರನ್ನೂ ಕಣ್ತುಂಬಾ ನೋಡಿ ಎರಡೂ ಕೈಯೆತ್ತಿ ಹರಸಿ, ಕರಜೋಡಿಸಿ ಎಲ್ಲರಿಗೂ ಕೈ ಮುಗಿದಳು. ತಕ್ಷಣ ತಿರುಗಿ ಗಾಂಧಾರಿಯ ಕೈ ಹಿಡಿದು ಒಂದು ಹೆಜ್ಜೆ ಮುಂದಿಟ್ಟಳು.

ಧರ್ಮರಾಯ “ಏನಮ್ಮಾ…. ಇದು…

ಮುಂದುವರಿಯುವುದು….

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page