26 C
Udupi
Monday, November 2, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 678

ಭರತೇಶ ಶೆಟ್ಟಿ ,ಎಕ್ಕಾರು

ತಪೋವನಕ್ಕೆ ಹೊರಟು ನಿಂತ ಕಣ್ಣು ಕಾಣದ ಧೃತರಾಷ್ಟ್ರ ಗಾಂಧಾರಿಯರ ಮುಂದೆ ಕುಂತಿ ದೇವಿಯಿದ್ದಾಳೆ. ಅದೂ ಹೇಗೆಯೆಂದರೆ ಕುಂತಿದೇವಿಯ ಹೆಗಲ ಮೇಲೆ ಗಾಂಧಾರಿಯ ಕೈ ಇದೆ. ಗಾಂಧಾರಿಯ ಹೆಗಲ ಮೇಲೆ ಧೃತರಾಷ್ಟ್ರನ ಕೈ. ಪಾಂಡವರು ಇವರು ಮೂವರ ಹಿಂದೆ ಇದ್ದಾರೆ. ಅನುಸರಿಸಿ ದ್ರೌಪದಿ ಸುಭದ್ರೆ, ವಿದುರ ಸಂಜಯಾದಿಗಳೂ ಇದ್ದಾರೆ. ದಾರಿಯುದ್ದಕ್ಕೂ ಕಂಬನಿ ಮಿಡಿಯುತ್ತಿರುವ ಪ್ರಜೆಗಳ ದುಃಖ ನೋಡಿದರೆ ದ್ಯೂತದಲ್ಲಿ ಸೋತು ವನವಾಸಕ್ಕೆ ತೆರಳುವ ಪಾಂಡವರು ಅಂದು ಪುರ ತೊರೆದು ಹೋದ ಕ್ಷಣವನ್ನು ಪುನರಪಿ ಸ್ಮರಿಸುತ್ತಿದೆ. ಪ್ರಜಾ ಜನರು ಗುಂಪಾಗಿ ರಾಜ ಬೀದಿಯಲ್ಲಿ ಮೆರವಣಿಗೆಯಂತೆ ಅನುಸರಿಸಿ ಬಂದು ಪುರದ ಹೆಬ್ಬಾಗಿಲು ದಾಟುವವರೆಗೆ ಮುಟ್ಟಿದ್ದಾರೆ. ಈ ಸಮಯ ಧೃತರಾಷ್ಟ್ರನಿಗೆ ಹಿಂಬಾಲಿಸಿ ಬರುತ್ತಿರುವ ಶೋಕಾರ್ತಿ ಪ್ರಜೆಗಳ ಬಗ್ಗೆ ತಿಳಿದು ಹೆಬ್ಬಾಗಿಲ ಬಳಿಯಲ್ಲಿ ನಿಂತು ಹಿಂದಿರುಗಿ ಕೈ ಮುಗಿದನು. “ಪ್ರಜೆಗಳೇ! ನೀವು ಇದ್ದರೆ ಹಸ್ತಿನೆಯ ಸಾಮ್ರಾಜ್ಯ. ಪ್ರಜೆಗಳಿದ್ದರೆ ಅವರನ್ನು ಆಳುವ ಅರಸ. ಪ್ರಜೆಗಳು ಶಾಸನ ಪಾಲಿಸಿದರೆ ಮಾತ್ರ ನೆಮ್ಮದಿಯ ಜೀವನ. ಪ್ರಜೆಗಳು ದುಡಿದರೆ ಮಾತ್ರ ರಾಜ್ಯದ ಸಮೃದ್ಧಿ. ಹಾಗಾಗಿ ನೀವೇ ಪ್ರಮುಖವಾಗಿರುವ ರಾಜ್ಯದ ಶ್ರೇಯಸ್ಸಿನ ಕುರಿತು ಚಿಂತಿಸಿ ಮರಳಿ ನಿಮ್ಮ ನಿಮ್ಮ ಮನೆಗೆ ಹೋಗಬೇಕು. ಧರ್ಮಾನುಸಾರ ತಪೋವನ ಸೇರಲು ಹೊರಟಿರುವ ನಮಗೆ ಅನುಮತಿ ನೀಡಬೇಕು.” ಎಂದು ಶಿರಬಾಗಿ ಕೈ ಮುಗಿದು ಬೇಡಿಕೊಂಡನು. “ಮಹಾರಾಜಾ! ನಿಮ್ಮ ಆಜ್ಞೆ ಪಾಲಿಸುತ್ತಾ ಬದುಕಿದವರು ನಾವು. ಈಗಲೂ ನಿಮ್ಮ ಆಜ್ಞಾನುವರ್ತಿಗಳೇ ಆಗಿದ್ದೇವೆ” ಎಂದು ಪ್ರಣಾಮಗಳನ್ನು ಸಲ್ಲಿಸಿ ಪ್ರಜೆಗಳು ಹಿಂದಿರುಗಿದರು.

ಈಗ ಪಾಂಡವರ ಜೊತೆಯಲ್ಲಿ ವಿದುರ ಸಂಜಯ ಕುಂತಿದೇವಿ ಇದ್ದಾರೆ. ರಾಜ್ಯದ ದ್ವಾರದಲ್ಲಿ ವಿದುರ ಹಾಗು ಸಂಜಯ ಧರ್ಮರಾಯನನ್ನು ಕರೆದು ನಾವೂ ಕೂಡ ವೃದ್ಧರಾಗಿದ್ದೇವೆ. ಇನ್ನು ನಮಗೂ ತಪೋವನ ಸೇರುವ ಅವಕಾಶ ನೀಡಬೇಕು. ಈಗ ತಪೋವನಕ್ಕೆ ಹೊರಟಿರುವ ಧೃತರಾಷ್ಟ್ರ ಮತ್ತು ಗಾಂಧಾರಿ ಇಬ್ಬರು ಏನನ್ನೂ ನೋಡಲಾರರು. ಅವರ ಸಹಾಯಕ್ಕೆ ಮತ್ತು ನಮ್ಮ ಇಚ್ಚೆಯ ಈಡೇರಿಕೆಗೆ, ಸದ್ಧರ್ಮ ಪಾಲನೆಗೆ ಇದು ಸನ್ಮಾರ್ಗವಾಗಿದೆ. ಈ ನಿರ್ಧಾರವನ್ನು ಬಹು ದಿನಗಳಿಂದ ಯೋಚಿಸಿ, ತರ್ಕಿಸಿ ಕೈಗೊಳ್ಳುತ್ತಿದ್ದೇವೆ. ನಮ್ಮ ಹುಟ್ಟಿನಿಂದ ಇಂದಿನ ದಿನದವರೆಗೆ ಹಸ್ತಿನೆಯ ಸಿಂಹಾಸನಕ್ಕೆ ನಿಷ್ಠೆಯಿಂದ ಕರ್ತವ್ಯವೆಸಗಿದ್ದೇವೆ. ಧರ್ಮವನ್ನು ಎಲ್ಲೂ ಅರಿತು ಮೀರಿ ನಡೆಯುವ ಪ್ರಯತ್ನವನ್ನು ಮಾಡಿದವರಲ್ಲ. ಇಂದು ಕೂಡ ನಾವು ಕೈಗೊಂಡಿರುವುದು ಧರ್ಮಸಮ್ಮತ ನಿರ್ಧಾರವಾಗಿದೆ. ಅನ್ಯಥಾ ಭಾವಿಸದೆ, ನಮ್ಮ ಇಚ್ಚೆಗೆ ಯಾವ ರೀತಿಯ ಅಡ್ಡಿ ಮಾಡದೆ ಅನುಮತಿ ನೀಡಬೇಕು ಎಂದು ಬೇಡಿಕೊಂಡರು.

ಧರ್ಮರಾಯನಿಗೆ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಯಿತು. ದೊಡ್ಡಪ್ಪ ದೊಡ್ಡಮ್ಮ ತಪೋವನ ಸೇರುವುದನ್ನು ಮನಸ್ಸು ಒಪ್ಪದೆ ತೊಳಲಾಡುತ್ತಿರುವ ಈ ಸಮಯದಲ್ಲಿ ಮಾರ್ಗದರ್ಶನ ಮಾಡುವ ಅನುಭವಿ ಮಂತ್ರಿಗಳೀರ್ವರೂ ವಾನಪ್ರಸ್ಥದ ಬಗ್ಗೆ ತಿಳಿಸಿ, ಅಡ್ಡಿ ಪಡಿಸಬಾರದು ಎಂಬ ನಿರ್ಬಂಧದ ಬೇಡಿಕೆಯನ್ನು ಮುಂದಿರಿಸಿದ್ದಾರೆ. ಈರ್ವರೂ ಹಿರಿಯರು, ಅನುಭವಿಗಳು, ರಾಜ್ಯದ ಹಿತಚಿಂತಕರು. ಇವರ ನಿರ್ದೇಶನವಿಲ್ಲದೆ ತನಗೆ ರಾಜ್ಯದ ಆಡಳಿತ ಕಷ್ಟ ಆಗಲಿದೆ ಎಂದು ಧರ್ಮರಾಯ ಸ್ಪಷ್ಟವಾಗಿ ಯೋಚಿಸತೊಡಗಿದನು. ಅದೇ ಸಮಯ ಮನಸ್ಸು ಮತ್ತೊಂದು ಮಗ್ಗುಲಿನಿಂದ ತರ್ಕ ನಿರತವಾಗಿ – ದೃಷ್ಟಿ ಇಲ್ಲದ ಧೃತರಾಷ್ಟ್ರ ಗಾಂಧಾರಿಯರ ಸಹಾಯಕ್ಕೆ ಇವರೀರ್ವರು ಅವರ ಜೊತೆಗಿದ್ದರೆ ಒಳ್ಳೆಯದಾದೀತು. ನನಗೂ ಇವರ ಅಗತ್ಯವಿದೆ, ಆದರೆ ವೃದ್ಧರಾದ ದೊಡ್ಡಪ್ಪ ದೊಡ್ಡಮ್ಮನಿಗೆ ಅನಿವಾರ್ಯತೆಯಿದೆ. ಹಾಗಾಗಿ ನಾನು ಹೇಗಾದರೂ ಸುಧಾರಿಸಿ ಕೊಳ್ಳಬಹುದು. ಮಂತ್ರಿಗಳಾದ ವಿದುರ ಮತ್ತು ಸಂಜಯರು ಅವರ ಇಚ್ಚೆಯೂ ಇದೇ ಆಗಿದೆ ಎಂದು ಹೇಳಿರುವ ಕಾರಣ ಮರು ಮಾತನಾಡಲಾಗದೆ ಧರ್ಮರಾಯ ಒಪ್ಪಿಗೆಯನ್ನು ನೀಡಬೇಕಾಯಿತು.

ನಾಲ್ವರು ತಪೋವನ ಸೇರುವ ನಿರ್ಣಯವಾದಾಗ ಧೃತರಾಷ್ಟ್ರ ಏನೂ ಮಾತನಾಡದೆ ಸುಮ್ಮನಿದ್ದನು. ಕುಂತಿದೇವಿಯನ್ನು ಕರೆದು “ಕುಂತಿ! ನೀನು ನಿನ್ನ ಸೊಸೆಯಂದಿರನ್ನು ಕರೆದು ಕೊಂಡು ಅರಮನೆಗೆ ಹಿಂದಿರುಗು. ರಾಜಮಾತೆಯಾಗಿ ಮಹಾರಾಣಿಯರಿಗೆ ಸೂಕ್ತ ಮಾರ್ಗದರ್ಶನ, ಜೊತೆಗೆ ರಾಜ ಯುವರಾಜರಿಗೂ ಸೂಕ್ತ ಕಾಲದಲ್ಲಿ ಅನುಭವದ ನುಡಿಗಳನ್ನು ಆಡುತ್ತಾ ನೋಡಿಕೊಳ್ಳಬೇಕು. ಇಂದಿನ ದಿನದ ತನಕ ಒಂದರ ಮೇಲೊಂದು ಕಷ್ಟಗಳನ್ನು ಸಹಿಸುತ್ತಾ ಬದುಕಿದ ನಿನಗೆ ಒಳ್ಳೆಯ ದಿನಗಳನ್ನು ಅನುಭವಿಸುವ ಭಾಗ್ಯ ಒದಗಲಿ. ದೇವರು ಎಲ್ಲರನ್ನೂ ಸಂರಕ್ಷಿಸಲಿ” ಎಂದು ಹರಸಿದನು.

ಆದರೆ ಕುಂತಿ ಗಾಂಧಾರಿಯ ಕೈಯನ್ನು ಹಿಡಿದುಕೊಂಡು ಒಂದು ಹೆಜ್ಜೆ ಮತ್ತೂ ಮುಂದಕ್ಕೆ ಹೋಗಿ “….

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page