ಭಾಗ – 675
ಭರತೇಶ್ ಶೆಟ್ಟಿ, ಎಕ್ಕಾರು

ದೊಡ್ಡಪ್ಪನ ಅಪೇಕ್ಷೆಯಂತೆ ಧರ್ಮರಾಯ ಪ್ರಜಾಪರಿವಾರ, ಆಸ್ಥಾನ ಪ್ರಮುಖರ ಸಭೆಯನ್ನು ಏರ್ಪಡಿಸಿದನು. ಧೃತರಾಷ್ಟ್ರನು ಹಸ್ತಿನೆಯ ಸಾಮ್ರಾಜ್ಯ ವಾಸಿಗಳನ್ನು ಉದ್ದೇಶಿಸಿ “ನನ್ನ ಸೋದರ ಪಾಂಡು ಈ ಹಸ್ತಿನಾವತಿಯ ಸಾಮ್ರಾಜ್ಯದ ಮಹಾರಾಜನಾಗಿದ್ದನು. ಅಣ್ಣನಾಗಿ ಆತನಿಗಿಂತ ಜೇಷ್ಠ ನಾನಿದ್ದರೂ ದೃಷ್ಟಿ ಹೊಂದಿರದೆ ಹುಟ್ಟು ಕುರುಡನಾದ ನನಗೆ ರಾಜ್ಯಾಧಿಕಾರ ವಹಿಸಿಕೊಳ್ಳುವುದು ಅಸಾಧ್ಯವಾಗಿತ್ತು. ಆದರೆ ಕಾಲಾಂತರದಲ್ಲಿ ಪಾಂಡು ದಿಗ್ವಿಜಯಗೈದು ಚಕ್ರವರ್ತಿಯೂ ಆಗಿ ಪ್ರಜಾರಂಜಕನಾಗಿ ಆಡಳಿತ ನಡೆಸಿರುವುದಕ್ಕೆ ನೀವೆಲ್ಲರೂ ಸಾಕ್ಷಿಯಾಗಿದ್ದೀರಿ. ಆದರೆ ದುರ್ವಿಧಿ ಅಕಾಲದಲ್ಲಿ ಪಾಂಡು ತಪೋವನ ಸೇರುವಂತಾಯಿತು. ಆ ಸಮಯದಲ್ಲಿ ಅರಾಜಕತೆ ಉಂಟಾಗಬಾರದು ಎಂಬ ಕಾರಣಕ್ಕೆ ರಾಜ ಪ್ರತಿನಿಧಿಯಾಗಿ, ಕಾರ್ಯಕಾರಿಣಿ ರಾಜನಾಗಿ ನಾನು ಸಿಂಹಾಸನ ಏರಬೇಕಾಯಿತು. ಸಮರ್ಥ ಉತ್ತರಾಧಿಕಾರಿ ಹಸ್ತಿನೆಯ ಚಂದ್ರವಂಶದಲ್ಲಿ ಹುಟ್ಟಿ ಸಮರ್ಥನಾಗಿ ಬರುವವರೆಗೆ ನನಗೆ ಈ ಅಧಿಕಾರ ವಹಿಸಲಾಗಿತ್ತು. ಭೀಷ್ಮಾಚಾರ್ಯರು ಇದ್ದ ಕಾರಣ ಪ್ರಜಾಪರಿಪಾಲನೆ, ಶತ್ರು ಬಾಧೆಯ ವ್ಯಥೆ ನನಗಿರಲಿಲ್ಲ. ವಿದುರನು ಸೂಕ್ತ ಚಿಂತನೆ, ಯೋಜನೆಗಳಿಂದ ಹಸ್ತಿನೆಯಲ್ಲಿ ಯಾವ ಕೊರತೆಯೂ ಆಗದಂತೆ, ಧರ್ಮ ಪರಿಪಾಲನೆಯಾಗುವಂತೆ ನೋಡಿಕೊಳ್ಳಲು ಸಹಕಾರಿಯಾಗಿದ್ದನು. ಕಾಲಾಂತರದಲ್ಲಿ ಪಾಂಡುವಿಗೂ, ನನಗೂ ಮಕ್ಕಳು ಹುಟ್ಟಿದರು. ಬೆಳೆದು ವಿದ್ಯಾಭ್ಯಾಸವೂ ಆಯಿತು. ಆದರೆ ದುರ್ಬುದ್ಧಿಯಿಂದ ನನ್ನ ಮಕ್ಕಳು ಏನೇನೊ ಮಾಡ ತೊಡಗಿದರು. ಮಕ್ಕಳನ್ನು ನಿಯಂತ್ರಿಸಿ ಸರಿದಾರಿ ತೋರಬೇಕಾಗಿದ್ದ ನನ್ನಿಂದಲೂ ಮಹಾಪರಾಧವಾಗಿ ಹೋಯಿತು. ಮೊದಲೆ ದೃಷ್ಟಿಹೀನನಾದ ನನ್ನ ಬುದ್ಧಿಯೂ ಪುತ್ರ ವ್ಯಾಮೋಹದಲ್ಲಿ ಸಿಲುಕಿ ಕುರುಡಾಗಿ ಹೋಗಿತ್ತು. ಅವರು ಕೇಳಿದ್ದಕ್ಕೆ, ಹೇಳಿದ್ದಕ್ಕೆ ತಲೆಯಾಡಿಸುತ್ತಾ, ಅವರ ಮನ ನೋಯಿಸಬಾರದು ಎಂದು ಅತಿ ವಾತ್ಸಲ್ಯ ತೋರಿದ ಕಾರಣ ದೌಷ್ಟ್ಯತನವನ್ನು ತೋರುತ್ತಾ ನನ್ನ ಮಕ್ಕಳು ಬೆಳೆಯುವಂತಾದದ್ದು ದುರಾದೃಷ್ಟ ಅಥವಾ ವಿಧಿಸಂಕಲ್ಪ. ಹೆತ್ತವರು ಯಾರೇ ಇರಲಿ, ತಮ್ಮ ಮಕ್ಕಳ ಮೇಲೆ ಪ್ರೀತಿ ಇರಬೇಕು. ಆದರೆ ಅತಿ ಮುದ್ದು ಮಾಡುತ್ತಾ ಮಕ್ಕಳು ಮಾಡಿದ್ದೆಲ್ಲಾ ಸರಿ ಎಂದು ಭ್ರಮಿಸ ಬಾರದು. ನಿಯಂತ್ರಿಸುವಲ್ಲಿ ನಿರ್ಣಯಗಳು ಕಠೋರವಾಗಿರ ಬೇಕು ಹಾಗೆ ಮಾಡದಿದ್ದರೆ ಏನಾಗುತ್ತದೆ ಎಂಬುವುದಕ್ಕೆ ನಾನು ಪ್ರತ್ಯಕ್ಷ ನಿದರ್ಶನವಾಗಿದ್ದೇನೆ. ಮುಂದೆ ಏನೆಲ್ಲ ಆಯಿತೋ ಎಲ್ಲವೂ ನಿಮಗೆ ತಿಳಿದಿದೆ. ನನ್ನ ಮಕ್ಕಳಿಂದಾಗಿ ತಮ್ಮ ಪಾಂಡುವಿನ ಮಕ್ಕಳು ವಿಪರೀತ ಕಷ್ಟಪಟ್ಟರು, ನೊಂದರು, ಬಳಲಿದರು. ಆದರೂ ಅವರು ಧರ್ಮವನ್ನು ಬಿಡದೆ ಪಾಲಿಸಿದರು. ಪರಿಣಾಮ ದೈವಾನುಗ್ರಹ ಹೊಂದುತ್ತಾ ಯಶಸ್ಸನ್ನು ಸಂಪಾದಿಸಿದರು. ರಣಕ್ಷೇತ್ರದಲ್ಲಿ ಹತರಾದ ನನ್ನ ಮಕ್ಕಳು ಪಾಂಡುಪುತ್ರರ ಬದ್ಧ ವೈರಿಗಳಾಗಿದ್ದರೂ ಮರಣದಲ್ಲಿ ವೈರ ತೋರದೆ ಅಂತ್ಯ ಸಂಸ್ಕಾರ, ಸದ್ಗತಿ ಕರ್ಮಗಳೆಲ್ಲವನ್ನೂ ವಿಧಿವತ್ತಾಗಿ ನೆರವೇರಿಸಿದ್ದಾರೆ. ಈಗಲೂ ಈ ಪಾಂಡು ಪುತ್ರರು ಧರ್ಮಪರಾಯಣರಾಗಿ ಬದುಕುತ್ತಿದ್ದಾರೆ. ಇಷ್ಟೆಲ್ಲಾ ತೊಂದರೆಗಳು ನನ್ನಿಂದ, ನನ್ನ ಮಕ್ಕಳಿಂದ ಅವರಿಗಾಗಿದ್ದರೂ ಯಾವುದನ್ನೂ ಪರಿಗಣಿಸದೆ ವೃದ್ಧ ದಂಪತಿಗಳಾದ ನಮ್ಮನ್ನು ಸುದೀರ್ಘ ಹದಿನೈದು ಸಂವತ್ಸರ ಕಾಲ ಸ್ವಂತ ಮಾತಾಪಿತರಂತೆ ಪ್ರೀತಿ, ಗೌರವಾದರ, ಅಧಿಕಾರ, ಧರ್ಮಕಾರ್ಯಗಳ ಜೊತೆಯಲ್ಲಿ ಯಾವ ದೋಷವೂ ಆಗದಂತೆ ಪ್ರೀತಿಯಿಂದ ಸಾಕಿ ಸಲಹುತ್ತಿದ್ದಾರೆ. ಪ್ರಜಾಜನರೇ! ನಾನು ಈ ಎಲ್ಲಾ ವಿಚಾರಗಳನ್ನು ನಿಮಗೆ ತಿಳಿಸಿ ಗೊತ್ತಾಗಬೇಕಿಲ್ಲ. ಯಾಕೆಂದರೆ ಅಂದಿನಿಂದ ಎಲ್ಲವನ್ನೂ ನೋಡಿಕೊಂಡು ಇಲ್ಲಿಯೆ ಇದ್ದವರು ನೀವು. ಆದರೆ ಕೃತ ಪಾಪಕ್ಕೆ ಪಶ್ಚಾತ್ತಾಪವೇ ಪ್ರಾಯಶ್ಚಿತ್ತ ಎಂದು ಶಾಸ್ತ್ರ ಹೇಳಿದೆ. ನೀವೆಲ್ಲರೂ ಧರ್ಮರಾಯನ ಪ್ರಜೆಗಳಾಗಿದ್ದು ಸುಖ ಸಮೃದ್ಧಿಯ, ಸುಶಾಂತ ಜೀವನ ಸಾಗಿಸುತ್ತಿದ್ದೀರಿ. ನಿಮ್ಮೆಲ್ಲರ ಎದುರಲ್ಲಿ ನನ್ನ ಮನಸ್ಸನ್ನು ಕೊರೆಯುತ್ತಿರುವ ಪಾಪ ಪ್ರಜ್ಞೆಯನ್ನು ಹೊರ ಹಾಕಲೇಬೇಕೆಂಬ ಮನಸ್ಸು ನನಗಾದ ಕಾರಣ ಮನಸ್ಪೂರ್ವಕವಾಗಿ ಹೇಳಿಕೊಂಡಿದ್ದೇನೆ. ಇಲ್ಲಿ ನನಗೆ ನಿಮಗೆ ಮಾತ್ರವಲ್ಲ ಸಮಸ್ತ ಲೋಕಕ್ಕೆ ಒಂದು ಪಾಠವಾಗಿದೆ. ಸುಖವಾಗಿ ಇದೆ ಎಂದು ಅಧರ್ಮದ ಪಥ ಹಿಡಿಯಬಾರದು. ಧರ್ಮ ಮಾರ್ಗ ಕಷ್ಟಕರವಾಗಿದೆಯೆಂದು ತೊರೆಯಬಾರದು. ಯಾಕೆಂದರೆ ಅಂತಿಮ ಜಯ ಧರ್ಮಕ್ಕೆ ಮಾತ್ರ ಎಂಬುವುದು ಸರ್ವತಾ ಸಾಬೀತಾಗಿದೆ. ಯಾವತ್ತಿದ್ದರೂ “ಸತ್ಯಮ್ ಏವ ಜಯತೇ” ಎಂಬ ಶಾಸ್ತ್ರ ವಚನ ಸುಳ್ಳಾಗದು. ಹಾಗಾಗಿ ನೀವು ಸತ್ಪ್ರಜೆಗಳಾಗಿ ಧರ್ಮಿಷ್ಠರಾಗಿ ಬಾಳಿ ಬದುಕಿರಿ. ನನ್ನನ್ನು ಹಾಗೂ ನನ್ನ ಮಕ್ಕಳ ಅಪರಾಧಕ್ಕೆ ಕ್ಷಮೆ ನೀಡಿ ಮನ್ನಿಸಬೇಕು ಎಂದು ಬೇಡಿಕೊಳ್ಳುತ್ತೇನೆ. ಈಗ ಕಾಲ ಕೂಡಿ ಬಂದಿದ್ದು ನಿಮ್ಮ ಅನುಮತಿಗಾಗಿ ಕೈ ಚಾಚಿ ನಿಂತಿದ್ದೇನೆ. ಕ್ಷತ್ರಿಯ ರಾಜರಿಗೆ ಅನುಸರಣೀಯ ಧರ್ಮವೊಂದಿದೆ. ವಾರ್ಧಕದಲ್ಲಿ ರಾಜ್ಯಾಧಿಕಾರವನ್ನು ಮಗನಿಗೆ/ ಸಮರ್ಥ ಉತ್ತರಾಧಿಕಾರಿಗೆ ವಹಿಸಿಕೊಟ್ಟು ವಾನಪ್ರಸ್ಥ ಸ್ವೀಕರಿಸಿ ತಪೋವನ ಸೇರಬೇಕು. ಅಂತಹ ಸಮಯ ಯಾವಾಗಲೊ ನನಗೆ ಒದಗಿದೆ. ಆದರೆ ಧರ್ಮಾತ್ಮರಾದ ಈ ಮಕ್ಕಳ ಜೊತೆ ಕೆಲಕಾಲ ನೆಮ್ಮದಿಯಿಂದ ಕಳೆದು, ನನ್ನ ಪಾಪವನ್ನು ಧರ್ಮ ಕಾರ್ಯದಿಂದ ಕಿಂಚಿತ್ ತೊಳೆದುಕೊಂಡು ನಂತರ ವಾನಪ್ರಸ್ಥಾಶ್ರಮ ಸೇರುವ ಯೋಚನೆ ಮಾಡಿದ್ದೆ. ಇನ್ನು ತಡ ಮಾಡಲು ಸಾಧ್ಯವಿಲ್ಲ ಕೃಪೆಯಿಟ್ಟು ನಮಗೆ ವಾನಪ್ರಸ್ಥ ಸ್ವೀಕರಿಸಿ ತಪೋವನ ಸೇರಲು ಸಮ್ಮತಿ ನೀಡಬೇಕು” ಎಂದು ಕೈ ಮುಗಿದು ಬೇಡಿಕೊಂಡನು.
ಧೃತರಾಷ್ಟ್ರನು ಈ ರೀತಿ ಮನದಾಳದ ಮಾತುಗಳನ್ನಾಡುತ್ತಾ ಬೇಡಿಕೊಂಡಾಗ ಅಲ್ಲಿ ನೀರವ ಮೌನ ಆವರಿಸಿತು. ಎಲ್ಲರ ಕಂಗಳೂ ಮಂಜಾಗಿ ತುಂಬಿಕೊಂಡವು. ಯಾರೊಬ್ಬರೂ ಏನೂ ಹೇಳುವ ಸ್ಥಿತಿಯಲ್ಲಿರಲಿಲ್ಲ. ಆಗ ಓರ್ವ ವೃದ್ಧ ಬ್ರಾಹ್ಮಣ ಮುಂದೆ ಬಂದು ಧೃತರಾಷ್ಟ್ರನನ್ನು ಉದ್ದೇಶಿಸಿ “……..
ಮುಂದುವರಿಯುವುದು….
























