
ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಮನೆ ಸಮೀಕ್ಷೆ ಅಕ್ಟೋಬರ್ 31ಕ್ಕೆ ಅಂತ್ಯಗೊಳ್ಳಲಿದೆ. ಈ ಗಡುವನ್ನು ಮತ್ತೆ ವಿಸ್ತರಿಸುವುದಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಸಮೀಕ್ಷೆ ಪೂರ್ಣಗೊಳಿಸದ ಫಲಾನುಭವಿಗಳು ನಿಗದಿತ ದಿನಾಂಕದೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಈವರೆಗೆ ಪರಿಶೀಲನೆಗೆ ಒಳಪಡದವರು ತಮ್ಮ ಸಮೀಪದ ಬೆಸ್ಕಾಂ ಉಪವಿಭಾಗ ಕಚೇರಿಗೆ ಭೇಟಿ ನೀಡಿ ದಾಖಲೆಗಳನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಕಳೆದ ಮೂರೂವರೆ ತಿಂಗಳಿಂದ ಸಮೀಕ್ಷೆ ನಡೆಯುತ್ತಿದ್ದು, ಮನೆಗೆ ಬೀಗ ಹಾಕಿದ್ದರಿಂದ ಅಥವಾ ಸಿಬ್ಬಂದಿ ಭೇಟಿ ನೀಡಿದಾಗ ಲಭ್ಯವಿರದ ಕಾರಣ ಪರಿಶೀಲನೆ ಬಾಕಿ ಉಳಿದವರು ಕಚೇರಿಗೆ ತೆರಳಿ ತಮ್ಮ ವಿವರಗಳನ್ನು ಸಲ್ಲಿಸಬಹುದು. ಅರ್ಹ ಫಲಾನುಭವಿಗಳು ಯೋಜನೆಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಸರ್ಕಾರ ಅಂತಿಮ ಅವಕಾಶ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೇ.98.49ರಷ್ಟು ಸಮೀಕ್ಷೆ ಪೂರ್ಣ
ಬೆಸ್ಕಾಂ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ 22ರ ವೇಳೆಗೆ ಎಂಟು ಜಿಲ್ಲೆಗಳ ವ್ಯಾಪ್ತಿಯ 74.29 ಲಕ್ಷ ನೋಂದಾಯಿತ ಫಲಾನುಭವಿಗಳ ಪೈಕಿ 73.17 ಲಕ್ಷ ಗ್ರಾಹಕರ ಪರಿಶೀಲನೆ ಪೂರ್ಣಗೊಂಡಿದೆ. ಈ ಮೂಲಕ ಶೇ.98.49ರಷ್ಟು ಸಮೀಕ್ಷೆ ಮುಗಿದಿದ್ದು, ಉಳಿದ ಗ್ರಾಹಕರ ಪರಿಶೀಲನೆ ಬಾಕಿಯಿದೆ.
ಬೀಗ ಹಾಕಿದ ಮನೆಗಳಿಗೆ ಮೂರು ಬಾರಿ ಭೇಟಿ
ಸಮೀಕ್ಷೆಯ ವೇಳೆ ಮನೆಗೆ ಬೀಗ ಹಾಕಿರುವುದು ಅಥವಾ ಮನೆ ಖಾಲಿ ಇರುವುದು ಕಂಡುಬಂದಲ್ಲಿ ಬೆಸ್ಕಾಂ ಸಿಬ್ಬಂದಿ ಹಾಗೂ ಮೀಟರ್ ರೀಡರ್ಗಳು ಮೂರು ಬಾರಿ ಭೇಟಿ ನೀಡಿದ್ದಾರೆ. ಅಲ್ಲದೆ, ನೋಂದಾಯಿತ ಮೊಬೈಲ್ ಸಂಖ್ಯೆಗಳಿಗೂ ಎಸ್ಎಂಎಸ್ ಮೂಲಕ ಸಂದೇಶ ಕಳುಹಿಸಿದ್ದಾರೆ.
ಅಕ್ಟೋಬರ್ 31 ಸಮೀಕ್ಷೆಗೆ ಅಂತಿಮ ದಿನವಾಗಿದ್ದು, ಗಡುವು ವಿಸ್ತರಣೆ ಇರುವುದಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ. ಹೀಗಾಗಿ, ಪರಿಶೀಲನೆ ಬಾಕಿ ಇರುವ ಫಲಾನುಭವಿಗಳು ಕೊನೆಯ ಕ್ಷಣದವರೆಗೆ ಕಾಯದೆ ಆದಷ್ಟು ಬೇಗ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.






















