
ನವದೆಹಲಿ: ಮೊದಲ ವರ್ಷದ ಎಂಬಿಬಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಅರ್ಹ ವಿದ್ಯಾರ್ಥಿಗಳಿಗೆ ಐದನೇ ಬಾರಿ ಪರೀಕ್ಷೆ ಬರೆಯಲು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ವಿಶೇಷ ಅವಕಾಶ ನೀಡಿದೆ. ಕೋವಿಡ್-19 ಸಾಂಕ್ರಾಮಿಕ ಸೇರಿದಂತೆ ವಿವಿಧ ಕಾರಣಗಳಿಂದ ಪರೀಕ್ಷೆ ಪೂರ್ಣಗೊಳಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಈ ನಿರ್ಧಾರದಿಂದ ಅನುಕೂಲವಾಗಲಿದೆ.
ಈ ಕುರಿತು ಅಕ್ಟೋಬರ್ 15ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿರುವ ಎನ್ಎಂಸಿ, ಸೆಪ್ಟೆಂಬರ್ 23ರಂದು ನಡೆದ ಆಯೋಗದ 18ನೇ ಸಭೆಯಲ್ಲಿ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದೆ.
ಈ ಹಿಂದೆ ಮೊದಲ ವರ್ಷದ ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಗರಿಷ್ಠ ನಾಲ್ಕು ಪ್ರಯತ್ನಗಳಿಗೆ ಮಾತ್ರ ಅವಕಾಶವಿತ್ತು. ಇದೀಗ ನಿಗದಿತ ನಾಲ್ಕು ವರ್ಷಗಳ ಅವಧಿ ಮೀರಿದ ಅರ್ಹ ವಿದ್ಯಾರ್ಥಿಗಳಿಗೂ ಐದನೇ ಪ್ರಯತ್ನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ವಿದ್ಯಾರ್ಥಿಗಳ ಪ್ರವೇಶವನ್ನು ಕಾಲೇಜು ಅಥವಾ ವಿಶ್ವವಿದ್ಯಾಲಯ ರದ್ದುಗೊಳಿಸಿರಬಾರದು ಎಂಬ ಷರತ್ತಿದೆ.
2019–20ನೇ ಶೈಕ್ಷಣಿಕ ವರ್ಷದಲ್ಲಿ ಅಥವಾ ಅದರ ನಂತರ ಎಂಬಿಬಿಎಸ್ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯಬಹುದು. ಆದರೆ, ಹಿಂದಿನ ಎನ್ಎಂಸಿ ನಿರ್ಧಾರ ಅಥವಾ ನ್ಯಾಯಾಲಯದ ಆದೇಶದ ಮೂಲಕ ಈಗಾಗಲೇ ಐದನೇ ಪ್ರಯತ್ನಕ್ಕೆ ಅವಕಾಶ ಪಡೆದವರಿಗೆ ಮತ್ತೊಮ್ಮೆ ಈ ವಿನಾಯಿತಿ ಅನ್ವಯಿಸುವುದಿಲ್ಲ.
ಎಂಬಿಬಿಎಸ್ ಶಿಕ್ಷಣ ಮತ್ತು ಕಡ್ಡಾಯ ವೈದ್ಯಕೀಯ ಇಂಟರ್ನ್ಶಿಪ್ ಸೇರಿದಂತೆ ಸಂಪೂರ್ಣ ಕೋರ್ಸ್ ಅನ್ನು ಪ್ರವೇಶ ಪಡೆದ ದಿನದಿಂದ ಗರಿಷ್ಠ 10 ವರ್ಷಗಳೊಳಗೆ ಪೂರ್ಣಗೊಳಿಸಬೇಕು ಎಂದು ಆಯೋಗ ಷರತ್ತು ವಿಧಿಸಿದೆ.
ಕೋವಿಡ್-19 ಕಾರಣದಿಂದ ಉಂಟಾದ ಶೈಕ್ಷಣಿಕ ಅಡಚಣೆಗಳನ್ನು ಗಮನದಲ್ಲಿಟ್ಟುಕೊಂಡು ಎನ್ಎಂಸಿ 2023ರಲ್ಲಿಯೂ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಪ್ರಯತ್ನಕ್ಕೆ ಅವಕಾಶ ನೀಡಿತ್ತು. ಇದೀಗ ಪ್ರಕಟಿಸಿರುವ ನಿರ್ಧಾರವು ಅರ್ಹ ವಿದ್ಯಾರ್ಥಿಗಳ ಬಾಕಿ ಪ್ರಕರಣಗಳಿಗೆ ಸಂಬಂಧಿಸಿದ ತಾತ್ಕಾಲಿಕ ಕ್ರಮವಾಗಿದ್ದು, ಭವಿಷ್ಯದಲ್ಲಿಯೂ ಇದೇ ವಿನಾಯಿತಿ ಸಿಗಲಿದೆ ಎಂದು ಭಾವಿಸಬಾರದು ಎಂದು ಆಯೋಗ ಸ್ಪಷ್ಟಪಡಿಸಿದೆ.






















