24.5 C
Udupi
Friday, October 16, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 672

ಭರತೇಶ್ ಶೆಟ್ಟಿ ,ಎಕ್ಕಾರು

ಧೃತರಾಷ್ಟ್ರನು ಗಾಂಧಾರಿಯನ್ನು ಕರೆದು ಏಕಾಂತವಾಗಿ “ಪ್ರಿಯೆ! ನೀನು ನನ್ನ ಧರ್ಮಪತ್ನಿ. ನಾನು ಹುಟ್ಟು ಕುರುಡ, ನೀನು ಹಾಗಲ್ಲ, ನಿನ್ನ ಬಗ್ಗೆ ನಮ್ಮ ವಿವಾಹ ಪೂರ್ವದಲ್ಲಿ ಸಾಕಷ್ಟು ವಿಶೇಷಗಳನ್ನು ನಾನು ಕೇಳಿ ತಿಳಿದಿದ್ದೆ. ಆ ಕಾಲದಲ್ಲಿ ಆರ್ಯಾವರ್ತದಲ್ಲಿ ಅತಿ ಸುಂದರಿಯಾದ ಕನ್ಯೆಯರಲ್ಲಿ ನೀನು ಅಗ್ರಗಣ್ಯೆಯಾಗಿದ್ದೆ. ವಿಶೇಷ ದೈವ ಭಕ್ತಿ ಹೊಂದಿದ್ದ ನೀನು ಸದಾ ಸಾಮ್ರಾಜ್ಯದ ಹಿತ ಚಿಂತಕಿಯಾಗಿ ಧರ್ಮ ಕಾರ್ಯ ನಿರತಳಾಗಿರುತ್ತಿದ್ದೆಯಂತೆ. ಮಾತ್ರವಲ್ಲ ಪರಶಿವನನ್ನು ಪ್ರಸನ್ನೀಕರಿಸಿ ನೂರು ಪುತ್ರರ ವರಬಲವನ್ನೂ ಪಡೆದಿದ್ದೆ ಎಂದು ಕೇಳಿ ತಿಳಿದಿದ್ದೆನು. ಆ ನಿನ್ನ ವರ ಬೇಡಿಕೆ ನಿನ್ನ ಪ್ರಬುದ್ಧ ಚಿಂತನೆಯನ್ನು ತೋರಿಸುತ್ತದೆ. ಯಾಕೆಂದರೆ ರಾಜಕುಮಾರಿಯಾದ ನೀನು ಕರಗ್ರಹಣ ಮಾಡಿ ಸೇರುವ ಪತಿಗ್ರಹ ರಾಜನ ಅರಮನೆ ಆಗಿರುವ ಸಾಧ್ಯತೆ ಹೆಚ್ಚಿತ್ತು. ಹಾಗಾಗಿ ಅರಸನಾಗಿರಬಹುದಾದ ನಿನ್ನ ಪತಿಯ ಉತ್ತರದಾಯಿತ್ವಕ್ಕೆ ಗಂಡು ಮಕ್ಕಳು ಅನಿವಾರ್ಯ ಎಂಬ ನಿನ್ನ ಯೋಚನೆ ನನಗೆ ಅದ್ಬುತವಾಗಿ ಕಂಡಿತ್ತು. ಮಾತ್ರವಲ್ಲ ಮಾತಾಪಿತರ ಸದ್ಗತಿಗೆ ಪುತ್ರ ಸಂತಾನವೂ ಅಗತ್ಯ ಎಂಬ ಧಾರ್ಮಿಕ ಚಿಂತನೆಗೂ ಪೂರಕವಾಗಿತ್ತು. ಆದರೇನು ಮಾಡೋಣ ಹೇಳು! ನೀನೆಷ್ಟೇ ಯೋಚಿಸಿ ಭಾಗ್ಯ ಪಡೆದಿದ್ದರೂ ದುರ್ದೈವವಶಾತ್ ನೀನು ವರಿಸಿದ್ದು ಓರ್ವ ಅಂಧ ಕಾರ್ಯಕಾರಿಣಿ ರಾಜ ಪ್ರತಿನಿಧಿಯನ್ನು. ಆದರೂ ವಿವೇಕಿಯಾಗಿ, ಪತಿವ್ರತೆಯಾಗಿ ನೀನು ನನ್ನ ಗಂಡನಿಗೆ ಕಾಣದ ಈ ಜಗತ್ತನ್ನು ನಾನೂ ನೋಡಲಾರೆ ಎಂದು ಕಣ್ಣಿಗೆ ಬಟ್ಟೆ ಕಟ್ಟಿ ವೈವಾಹಿಕ ಜೀವನವನ್ನು ಈ ತನಕ ಪಾಲಿಸುತ್ತಾ ಬಂದ ಆದರ್ಶ ಪತ್ನಿಯಾಗಿರುವೆ. ನನ್ನ ದುರಾದೃಷ್ಟವೋ! ದೌರ್ಭಾಗ್ಯವೋ! ಅಲ್ಲ ಯಾವ ಜನ್ಮದ ಪ್ರಾರಾಬ್ಧವೋ ನನಗರಿಯದು. ಸುಶೀಲೆಯೂ, ಸುಗುಣೆಯೂ ಆದ ನಿನ್ನಂತಹ ಧರ್ಮಪತ್ನಿ ನನ್ನ ಒಡನಾಡಿಯಾಗಿದ್ದರೂ ಅದೃಷ್ಟ ಬದಲಾಗಲಿಲ್ಲ. ನೀನೇನೋ ನೂರು ಮಕ್ಕಳನ್ನು ಹೆತ್ತು ಮನೆ ಮನ ತುಂಬಿಸಿದೆ. ಮಕ್ಕಳು ಮೊಮ್ಮಕ್ಕಳಿಂದ ಹಸ್ತಿನೆಯ ಅರಮನೆ ತುಳುಕಾಡುತ್ತಿತ್ತು. ಆ ಸಂಭ್ರಮ ಸ್ಥಿರವಾಗಿ ಉಳಿಯದೇ ಹೋಯಿತಲ್ಲ. ಅದನ್ನರಿತಿರುವ ಭಗವಂತ ನಮ್ಮಿಬ್ಬರಿಗೂ ನೋಡುವ ದೌರ್ಭಾಗ್ಯ ಬೇಡವೆಂದು ಈ ಸ್ಥಿತಿ ಒದಗಿಸಿದನೋ ಏನೋ!. ಮಕ್ಕಳು, ಮೊಮ್ಮಕ್ಕಳು ಎಲ್ಲರೂ ರಣ ಧಾರುಣಿಯಲ್ಲಿ ಮಾರಿಗೌತಣವಾಗಿ ಹೋದರಲ್ಲಾ! ಮುದಿ ಪ್ರಾಯದಲ್ಲಿ ಮೊಮ್ಮಕ್ಕಳ ತುಂಟಾಟದಿಂದ ಸಂಭ್ರಮ ಪಡಬೇಕಾದ ನಾವು ಮತಿ ವಿಭ್ರಮಕ್ಕೆ ಒಳಗಾಗಿ ಬದುಕುವಂತಾಯಿತಲ್ಲಾ! ಇನ್ನೂ ಎಷ್ಟು ಕಾಲ ಈ ವೇದನೆ ಸಹಿಸಿ ಬದುಕಬಲ್ಲೆವು ಹೇಳು? ದಿನ ಹೋದಂತೆಲ್ಲಾ ಮನಸ್ಸು ಗಟ್ಟಿತನ ಕಳಕೊಳ್ಳುತ್ತಿದೆ. ದಿನೇ ದಿನೆ ದುರ್ಬಲಗೊಳ್ಳುತ್ತಿದೆ. ಸಹನೆಯ ಶಕ್ತಿಯೂ ಸಾಕಾಗುತ್ತಿಲ್ಲ. ಹಿಂದಿನದೆಲ್ಲವೂ ನೆನಪಾಗಿ ರಾತ್ರಿ ಹಗಲು ವ್ಯತ್ಯಾಸವಿಲ್ಲದೆ ಎಚ್ಚರವಾಗಿದ್ದು ಕಳೆಯುವಂತಾಗಿದೆ. ಮನಸ್ಸಿಗೆ ಎಷ್ಟು ಸಂಕಟವಾಗುತ್ತಿದೆ ಎಂದರೆ ಒಂದೊಂದು ಕ್ಷಣಗಳೂ ಮುಂದೆ ಸಾಗುವಾಗ ಸಮಯ ಎಷ್ಟು ದೀರ್ಘವಾಗಿದೆ, ಕ್ರೂರಿಯಾಗಿದೆ ಎಂದು ಭಾಸವಾಗುತ್ತಿದೆ. ಮಕ್ಕಳೇನೋ ರಣರಂಗದಲ್ಲಿ ವೀರಾವೇಶದಿಂದ ಹೋರಾಡಿ, ಪವಿತ್ರ ಕುರುಕ್ಷೇತ್ರದಲ್ಲಿ ಆಯುಧಾಘಾತಗಳಿಂದ ಹತಪ್ರಾಣರಾದ ಕಾರಣ ಖಂಡಿತವಾಗಿಯೂ ವೀರಸ್ವರ್ಗ ಪಡೆದಿರುತ್ತಾರೆ. ಆದರೆ ಅಂದಿನಿಂದ ಈ ತನಕ ಕಳೆದ ಹದಿನೈದು ವರ್ಷಗಳಿಂದ ನಾವು ಸಾಯದೆ ಬದುಕುಳಿದು ಭೂಮಿಯಲ್ಲಿದ್ದು ನರಕಯಾತನೆ ಅನುಭವಿಸುತ್ತಿದ್ದೇವಲ್ಲಾ? ನನ್ನ ಮನಸ್ಸಿಗೆ ಯಾವುದೂ ಬೇಡವಾಗಿದೆ. ಯಾವುದರಲ್ಲೂ ಆಸಕ್ತಿಯಿಲ್ಲ. ತೀರಾ ಬಡವರು ಉಣ್ಣುವುದಕ್ಕಿಲ್ಲದೆ ಹಸಿದು ಬದುಕುವುದು ವಾಸ್ತವ ಸತ್ಯ. ಆದರೆ ನಮಗೆ ಮೃಷ್ಟಾನ್ನ ಭೋಜನ, ರಾಜೋಚಿತ ಆಹಾರಗಳಿದ್ದರೂ, ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ವಿಧ ವಿಧ ಭಕ್ಷ್ಯ ಭೋಜ್ಯಗಳಿದ್ದರೂ ತಿನ್ನುವ ಮನಸ್ಸು ಇಲ್ಲದೆ ಒಪ್ಪೊತ್ತು ಒಂದು ತುತ್ತೂ ಉಣ್ಣದೆ, ಅತ್ತ ಸಾವೂ ಬಾರದೆ ಇತ್ತ ಬದುಕಲೂ ಆಗದೆ, ಜೀವಂತ ಶವವಾಗಿ ಹೆಣಗಾಟ ಅನುಭವಿಸುತ್ತಿದ್ದೇನೆ. ನಡೆಯಲು ಕೂಡದೆ ಮಲಗೋಣವೆಂದರೆ ಹಂಸತೂಲಿಕ ತಲ್ಪವೂ ಚುಚ್ಚಿದಂತೆ, ಉಸಿರುಗಟ್ಟಿಸಿದಂತೆ ಪೀಡನೆಯ ಅನುಭವವಾಗುತ್ತದೆ. ನೆಲದಲ್ಲಿ ಕೃಷ್ಣಾಜಿನವನ್ನು ಹಾಸಿ ಬಿದ್ದುಕೊಂಡರೂ ನಿದ್ದೆ ಆವರಿಸುವುದಿಲ್ಲ. ಕೇವಲ ಆಹಾರ ಸೇವಿಸದೆ ದೌರ್ಬಲ್ಯ ಆವರಿಸಿದೆ ಎಂದುಕೊಂಡರೆ, ಇಲ್ಲ ನನಗೆ ವಯಸ್ಸೂ ಆಗಿದೆ. ಇನ್ನೆಲ್ಲಿಯ ಚೈತನ್ಯ? ಯಾವ ಸುಖವುಣ್ಣಲು ತಾರುಣ್ಯ ಬೇಕಾಗಿದೆ ಹೇಳು? ಹಾಗಾಗಿ ಬಹಳಷ್ಟು ಯೋಚಿಸಿ ಒಂದು ತೀರ್ಮಾನಕ್ಕೆ ಬಂದಿದ್ದೇನೆ. ನಿನ್ನ ಅಭಿಪ್ರಾಯ ಕೇಳುವುದಕ್ಕೋಸ್ಕರ ಬಳಿ ಕರೆದಿದ್ದೇನೆ. ನನಗಾಗಿ ಬಹಳಷ್ಟು ತ್ಯಾಗ ಮಾಡಿ ತಪಸ್ಸಿನಂತಹ ಬದುಕು ಸಾಗಿಸಿದ ನಿನ್ನ ಬಗ್ಗೆ ನನಗೆ ಹೇಳಿಕೊಳ್ಳಲಾಗದಷ್ಟು ಗೌರವವೂ, ಮನೋವೇದನೆಯೂ ಮನಸ್ಸು ತುಂಬಿ ಕೊಂಡಿದೆ. ನನ್ನ ಅಂತ್ಯಕಾಲದಲ್ಲಿ ಸಂಬಂಧಿಕರು, ಹಿತೈಷಿಗಳು ಅನೇಕರು ಇದ್ದರೂ, ಪತ್ನಿಯಾದ ನೀನೊಬ್ಬಳು ಮಾತ್ರ ನನ್ನವಳು, ನನ್ನ ಬಗ್ಗೆ ಯೋಚಿಸುವವಳು ಎಂದು ತಿಳಿದು ಕೇಳುತ್ತಿದ್ದೇನೆ. ಹೇ ಗಾಂಧಾರಿ! ನಮಗಿನ್ನು ಉಳಿದಿರುವ ಶೇಷಾಯುಷ್ಯ ತೀರಾ ಸ್ವಲ್ಪ ಸಮಯವಷ್ಟೇ. ಅದನ್ನು ಯಾಕಾಗಿ ಈ ಯಾತನೆಯಲ್ಲಿ ಕಳೆಯಬೇಕು ಹೇಳು? ಅದರ ಬದಲಾಗಿ ವಾನಪ್ರಸ್ಥ ಸ್ವೀಕರಿಸಿ, ತಪೋವನ ಸೇರಿ ಸತ್ಸಂಗ ನಿರತರಾಗಿ ಮನಸ್ಸನ್ನು ಈ ದುಃಖದಿಂದ ವಿಮುಖಗೊಳಿಸೋಣವೆ? ನನ್ನ ಅಭಿಮತಕ್ಕೆ ನಿನ್ನ ಅಭಿಪ್ರಾಯವೇನು ತಿಳಿಸುವೆಯಾ?” ಎಂದು ದೀನನಾಗಿ ನಿವೇದಿಸಿಕೊಂಡನು.

ಗಾಂಧಾರಿ ಸಹಧರ್ಮಿನಿಯಲ್ಲವೇ? ಗಂಡನ ಮನದ ಕನ್ನಡಿಯಂತೆ ಆಗಿ “ಸ್ವಾಮೀ! ಇಂದು ನೀವಾಗಿ ಕೇಳಿದ್ದೀರಿ. ಅದೆಷ್ಟೋ ಕಾಲದಿಂದ ನನಗೂ ಇದೇ ರೀತಿಯ ಅನುಭವವಾಗುತ್ತಿದೆ. ಇಲ್ಲಿದ್ದುಕೊಂಡು ಅರಮನೆಯಲ್ಲಿ ಒಂದೊಂದು ಹೆಜ್ಜೆ ನಡೆದರೂ ಪ್ರತಿ ಮೂಲೆಯಲ್ಲೂ ಒಂದೊಂದು ನೆನಪುಗಳು, ನಮ್ಮ ಮಕ್ಕಳು ಅಂಬೆಗಾಲಿಕ್ಕುತ್ತಾ ಓಡಾಡಿದ ಸ್ಥಳಗಳು, ಅವರಿಗೆ ತುತ್ತನ್ನ ತಿನಿಸಲು ಸುತ್ತಾಡಿದ ಕೋಣೆಗಳು, ಅವರು ಬೆಳೆಯುತ್ತಿದ್ದಂತೆ ತುಂಟಾಟಗಳಿಗೆ ವೇದಿಕೆಯಾದ ಪ್ರಾಂಗಣಗಳು, ಒಮ್ಮೆಲೆ ಗುಂಪಾಗಿ ಓಡೋಡುತ್ತ ಬಂದು ತಬ್ಬಿಕೊಂಡು ಪರಸ್ಪರ ನಗು, ದೂರು, ಅಂದಿನ ದಿನದ ಪುಂಡಾಟಿಕೆಯ ಕಥೆ ಕೇಳಿದ ಜಾಗಗಳು, ಅವರ ಮದುವೆ, ಮೊಮ್ಮಕ್ಕಳು, ಊಟ ಮಾಡಲು ಭೋಜನಗೃಹಕ್ಕೆ ಹೋದರೆ ಅವರುಣ್ಣುತ್ತಿದ್ದ ನೆನಪುಗಳು ಒಂದೇ ಎರಡೇ…. ಅರಮನೆಯ ಇಂಚು ಇಂಚುಗಳೂ ಮಕ್ಕಳು ಮೊಮ್ಮಕ್ಕಳ ಕಥೆಯನ್ನು ಕರೆದು ಕರೆದು ಹೇಳುತ್ತಿವೆ. ತಾಯಿಯಾಗಿ ನಾನು ಎಷ್ಟೆಂದು ಸಹಿಸಿಕೊಳ್ಳಬಲ್ಲೆ. ಇದು ಅರಮನೆಯಲ್ಲ ಸೆರೆಮನೆಯಾಗಿ ಘೋರ ಯಾತನೆ ನೀಡುತ್ತಿದೆ. ಒಮ್ಮೆ ಇಲ್ಲಿಂದ ಮುಕ್ತಿ ಪಡೆಯಲು ಎಲ್ಲಾದರು ಹೋಗಬೇಕು ಎಂದು ಬಹುಕಾಲದಿಂದ ನನಗೂ ಅನಿಸುತ್ತಿತ್ತು. ಆದರೆ ನಿಮ್ಮನ್ನು ಬಿಟ್ಟು ನಾನು ಹೋಗಲಾದೀತೇ? ಅದಕ್ಕಾಗಿ ಎಲ್ಲವನ್ನೂ ನನ್ನೊಳಗೆ ಅದುಮಿಟ್ಟು ಉಸಿರಾಡುವ ಶವದಂತೆ ಇಲ್ಲಿದ್ದೇನೆ. ನಿಮ್ಮ ಆಸೆಗೆ ನನ್ನ ಪೂರ್ಣ ಸಹಮತವಿದೆ‌. ನಾವು ವಾನಪ್ರಸ್ಥ ಸ್ವೀಕರಿಸಿ ತಪೋವನ ಸೇರೋಣ” ಎಂದಳು.

ಧೃತರಾಷ್ಟ್ರನು ಈ ವಿಚಾರದ ಕುರಿತಾಗಿ ಸಮಾಲೋಚನೆ ಮಾಡಲು ಸೋದರನಾದ ವಿದುರ ಮತ್ತು ಮಂತ್ರಿಯಾದ ಸಂಜಯನನ್ನು ಕರೆಸಿ ತನ್ನ ಮನದಿಂಗಿತವನ್ನು ಪ್ರಸ್ತಾಪಿಸಿದನು. ಅಣ್ಣನ ಮಾತು ಕೇಳಿ ವಿದುರನು “…..

ಮುಂದುವರಿಯುವುದು….

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page