ಭಾಗ – 670
ಭರತೇಶ ಶೆಟ್ಟಿ,ಎಕ್ಕಾರು

ಪ್ರಮೀಳೆ ಸ್ತ್ರೀ ರಾಜ್ಯದ ರಾಣಿಯಾದರೂ ಆಕೆ ವಿಷಕನ್ಯೆ. ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿ, ಬಳಿಕ ಅಶರೀರವಾಣಿಯ ಮುಖೇನ ಸಂಧಾನವಾದ ಬಳಿಕ ಕಪ್ಪ ಕಾಣಿಕೆಗಳಿಂದ ಹಸ್ತಿನಾವತಿಗೆ ಬಂದವಳು. ಅಂದಿನಿಂದ ತನ್ನ ವಿಷವನ್ನು ಕಳಕೊಂಡು ಸಾಮಾನ್ಯ ಸ್ತ್ರೀಯಾಗುವ ಪ್ರಯತ್ನದಲ್ಲಿ ತಪಸ್ಸನ್ಬಾಚರಿಸಿ ದೇವತಾನುಗ್ರಹದಿಂದ ಆ ಯೋಗ್ಯತೆಯನ್ನು ಸಾಧಿಸಿಕೊಂಡಿದ್ದಾಳೆ. ಈಗ ಅರ್ಜುನನಿಗೆ ಎದುರಾಗಿ ಬಂದವಳು ವಂದಿಸಿ ನಿಂತು, ತನಗಿತ್ತ ವಾಗ್ದಾನದಂತೆ ವಿವಾಹವಾಗುವ ಪ್ರಸ್ತಾಪವನ್ನು ನೆನಪಿಸಿದಳು. ಅಂತೆಯೆ ಶ್ರೀಕೃಷ್ಣ ಪರಮಾತ್ಮ ಮತ್ತು ಅವನ ಅಷ್ಟಾಂಗನೆಯರು, ದ್ರೌಪದಿ, ಸುಭದ್ರಾ ಸಹಿತ ಧರ್ಮರಾಯಾದಿ ಪಾಂಡವರೆಲ್ಲರ ಸಮಕ್ಷದಲ್ಲಿ ಪ್ರಮೀಳಾರ್ಜುನರ ಕಲ್ಯಾಣ ವಿಧಿವತ್ತಾಗಿ ನೆರವೇರಿತು. ಆ ಬಳಿಕ ಕೆಲ ದಿನ ಸತಿಪತಿಯರಾಗಿದ್ದು ಅರ್ಜುನನ ಅನುಮತಿ ಪಡೆದು ಪ್ರಮೀಳೆ ತನ್ನ ರಾಜ್ಯಕ್ಕೆ ಹಿಂದಿರುಗಿದಳು. ಮಹಾರಾಣಿಯಾಗಿ ರಾಜ್ಯವಾಳುವ ಹೊಣೆಗಾರಿಕೆ ಆಕೆಯದ್ದಾಗಿತ್ತು
ಇತ್ತ ಯಾಗಕ್ಕಾಗಿ ಬಂದ ಮಯೂರಧ್ವಜ, ತಾಮ್ರಧ್ವಜ, ಚಂದ್ರಹಾಸ, ಹಂಸಧ್ವಜ, ನೀಲಕೇತ, ಯವನಾಶ್ವ, ಅನುಸಾಲ್ವಾದಿಗಳೂ ಯಥೋಚಿತ ಗೌರವಾದರಗಳನ್ನು ಸ್ವೀಕರಿಸಿ ತಮ್ಮ ತಮ್ಮ ರಾಜ್ಯಗಳಿಗೆ ತೆರಳಿದರು. ಉಲೂಪಿ, ಚಿತ್ರಾಂಗದೆ ಹಾಗು ಬಬ್ರುವಾಹನ ಹೊರಟು ನಿಂತಾಗ ಸುಭದ್ರೆ ಓಡಿ ಬಂದು ಮಗ ಬಬ್ರವಾಹನನ್ನು ಮನಸಾರೆ ಮುದ್ದಿಸಿ ಅಭಿಮನ್ಯುವನ್ನು ನೆನೆದು ಕಣ್ಣೀರ್ಗರೆದಳು. ಬಬ್ರುವಾಹನನು ತಾಯಿ ಸುಭದ್ರೆಯನ್ನು ಸಂತೈಸಿ ಸಮಯ ಅನುಕೂಲವಾದಾಗ ಮಣಿಪುರಕ್ಕೆ ಬರಬೇಕೆಂದು ಆಮಂತ್ರಿಸಿ ಎಲ್ಲರಿಗೂ ವಂದಿಸಿ ಹೊರಟರು. ಹಾಗೆಯೆ ಯಾದವ ವೀರರಾದ ಕೃತವರ್ಮ, ಸಾತ್ಯಕಿ, ಅನಿರುದ್ಧ, ಪ್ರದ್ಯುಮ್ನಾದಿಗಳು ವಾಸುದೇವ ದೇವಕಿಯರೊಂದಿಗೆ ಸೇನಾ ಸಮೇತರಾಗಿ ದ್ವಾರಕೆಗೆ ಹೋದರು. ನಂದಗೋಕುಲದಿಂದ ಬಂದಿದ್ದ ಯಶೋದೆ ನಂದ ಗೋಪರು ಹಾಗು ಗೋಕುಲವಾಸಿಗಳೂ ಮರಳಿದರು. ಹೀಗೆ ಅಶ್ವಮೇಧ ಯಾಗಕ್ಕಾಗಿ ಬಂದವರೆಲ್ಲರೂ ಅವರವರ ರಾಜ್ಯಗಳಿಗೆ ಹೊರಟು ಹೋದರು.
ಇತ್ತ ಗಂಗಾತೀರದ ಯಾಗ ಶಾಲೆಯಿಂದ ಧರ್ಮರಾಯ, ಪಾಂಡವರು ಹಾಗು ಹಿರಿಯರಾದ ಕುಂತಿ, ಗಾಂಧಾರಿ ಧೃತರಾಷ್ಟ್ರಾದಿಗಳು, ದ್ರೌಪದಿ, ಸುಭದ್ರೆಯರು ಶ್ರೀಕೃಷ್ಣ ಹಾಗು ಧೌಮ್ಯರ ನಿರ್ದೇಶನದಂತೆ ಹಸ್ತಿನಾವತಿಯ ಪುರ ಪ್ರವೇಶಕ್ಕೆ ಸಿದ್ಧರಾದರು. ವೈಭವೋಪೇತವಾದ ಮೆರವಣಿಗೆಯಲ್ಲಿ ಧರ್ಮರಾಯ ಹಸ್ತಿನೆಯ ಅರಮನೆ ಪ್ರವೇಶಿಸಿದನು.
ಧರ್ಮರಾಯ ಚಕ್ರವರ್ತಿಯಾಗಿ ಸಿಂಹಾಸನವೇರುವ ಸಂಭ್ರಮದ ವಿಧಿಗಳು, ವೈಭವಗಳು ವರ್ಣನಾತೀತ. ಹಸ್ತಿನೆಯ ನಗರ ಭೂ ಸ್ವರ್ಗದಂತಾಗಿದೆ. ಎಲ್ಲೆಲ್ಲೂ ಸಂಭ್ರಮ, ಪ್ರಜೆಗಳೆಲ್ಲರೂ ಹೊಸ ವಸನ ಭೂಷಣ ಧರಿಸಿ ಉಲ್ಲಾಸದಿಂದ ಯುಧಿಷ್ಠಿರನಿಗೆ ಜಯಕಾರ ಘೋಷಣೆ ಮಾಡುತ್ತಿದ್ದಾರೆ. ಹಸ್ತಿನೆಯ ಸಾಮ್ರಾಟ ಧರ್ಮರಾಯನು ಸಿಂಹಾಸನವೇರಿ ರಾಜ್ಯಭಾರವನ್ನು ಕೈಗೊಂಡನು. ಇನ್ನು ಧರ್ಮರಾಯನ ಸ್ವತಂತ್ರ ಆಡಳಿತ. ಹಳೆ ಬೇರು ಹೊಸ ಚಿಗುರು ಸೇರಿ ಮರ ಸೊಬಗು ಎಂಬಂತೆ ಪ್ರಧಾನ ಮಂತ್ರಿಗಳಾಗಿ ವಿದುರ ಮತ್ತು ಸಂಜಯರು, ರಾಜತಾಂತ್ರಿಕ ನಿರ್ಣಯಗಳ ಚರ್ಚೆಗೆ ದೊಡ್ಡಪ್ಪ ಧೃತರಾಷ್ಟ್ರ, ಸೇನಾಧ್ಯಕ್ಷನಾಗಿ ಭೀಮಸೇನ, ಸಂಪೂರ್ಣ ಮೇಲ್ವಿಚಾರಣೆಯ ಹೊಣೆಗಾರಿಕೆಯಲ್ಲಿ ಅರ್ಜುನ, ನಕುಲ ಸಹದೇವರು. ಮೇಲಾಗಿ ಧೌಮ್ಯರು ರಾಜಗುರುಗಳಾಗಿಯೂ, ಶ್ರೀಕೃಷ್ಣ ಪರಮಾತ್ಮ ಪಾಂಡವರ ಹಿತರಕ್ಷಕನಾಗಿಯೂ ಇರುವಾಗ ಚಂದ್ರವಂಶ ಗಜಪುರದಲ್ಲಿ ನೂತನ ಶಕೆ ಆರಂಭಗೊಂಡಂತಾಗಿದೆ.
ಎಲ್ಲವೂ ವ್ಯವಸ್ಥಿತವಾಗಿ ಸಿದ್ದಗೊಂಡ ಬಳಿಕ ಶ್ರೀಕೃಷ್ಣ ಪರಮಾತ್ಮ ಧರ್ಮರಾಯನ ಜೊತೆ ಸಾಕಷ್ಟು ಸಮಾಲೋಚನೆ ನಡೆಸಿ, ಹೇಳಬೇಕಾದುದೆಲ್ಲವನ್ನೂ ಹೇಳಿ ಹೊರಡಲು ಸಿದ್ಧನಾದನು. ಅರ್ಜುನನ ಪುತ್ರ ಅಭಿಮನ್ಯುವಿನ ಕುಮಾರ ಪರೀಕ್ಷಿತನೀಗ ಮಗು. ಶ್ರೀಕೃಷ್ಣ ಮಗು ಪರೀಕ್ಷಿತನನ್ನು ಮುದ್ಧಿಸಿ ವಿರಾಟ ಪುತ್ರಿ ಉತ್ತರೆಯನ್ನು ಹರಸಿ ಆಶೀರ್ವದಿಸಿದನು. ಅತ್ತೆ ಕುಂತಿ ಮಾತೆಗೆ ವಂದಿಸಿದನು. ಎಲ್ಲರಲ್ಲೂ ಮಾತನಾಡಿ ಹರಸಿ ದ್ವಾರಕೆಗೆ ಮರಳಲು ರಥವೇರಿದನು. ಧರ್ಮರಾಜ ಮತ್ತು ಆತನ ಸೋದರರಿಗೆ ಶ್ರೀಕೃಷ್ಣ ಹಸ್ತಿನೆ ಬಿಟ್ಟು ಹೋಗುವಾಗ ಮನಸ್ಸು ಬಹಳಷ್ಟು ವೇದನೆ ನೀಡುತ್ತಿದೆ, ಭಾರವೂ ಆಗಿದೆ. ಆದರೂ ಅನ್ಯ ಮಾರ್ಗವಿಲ್ಲದೆ ತುಸು ದೂರದವರೆಗೆ ಜೊತೆಯಾಗಿ ಗಂಗಾ ತೀರದವರೆಗೂ ಸಾಗಿ ಬೀಳ್ಕೊಟ್ಟು ಅರಮನೆಗೆ ಮರಳಿದರು. ಧರ್ಮರಾಯನ ರಾಜ್ಯಭಾರ ಆಡಳಿತ ನಿರಾತಂಕವಾಗಿ ಯಾವ ಕುಂದು ಕೊರತೆಗಳೂ ಇಲ್ಲದೆ, ಪ್ರಜೆಗಳ ಹಿತಚಿಂತನೆಯೊಂದಿಗೆ ಮುಂದುವರಿಯುತ್ತಿದೆ.
ಮುಂದುವರಿಯುವುದು…






















