
ಶ್ರೀ ಭುವನೇಂದ್ರ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ ಸ್ವಾಮೀ ವಿವೇಕಾನಂದ ಅಧ್ಯಯನ ಮತ್ತು ಯೋಗ ಕೇಂದ್ರದ ವತಿಯಿಂದ ಐವತ್ತೆರಡನೇ ವರ್ಷದ ನೈತಿಕ ಮತ್ತು ಆಧ್ಯಾತ್ಮಿಕ ಶಿಬಿರವು ಕಾಲೇಜಿನ ಶ್ರೀ ರಾಮಕೃಷ್ಣ ಸಭಾಂಗಣದಲ್ಲಿ ನೆರವೇರಿತು.
ಕಾಲೇಜಿನ ವಿದ್ಯಾರ್ಥಿಗಳ ಭಜನಾ ಕಾರ್ಯಕ್ರಮದಿಂದ ಆರಂಭಗೊಂಡ ಈ ಕಾರ್ಯಕ್ರಮವನ್ನು ಶ್ರೀ ರಾಮಕೃಷ್ಣ ಆಶ್ರಮ , ಮಂಗಳೂರು ಇಲ್ಲಿನ ಪೂಜ್ಯ ಸ್ವಾಮೀ ಯುಗೇಶಾನಂದ ಜೀಯವರು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಅನುಗ್ರಹ ಸಂದೇಶವನ್ನು ನೀಡಿದರು.
ಅವರು ಮಾತನಾಡುತ್ತಾ, ಪ್ರತಿಯೊಂದು ದೇಶಕ್ಕೂ ಕೂಡಾ ಒಂದು ಸ್ಪೂರ್ತಿಸೆಲೆ ಇದೆ. ಉಳಿದ ದೇಶಗಳಲ್ಲಿ ಆರ್ಥಿಕತೆಯ ಜೀವಸೆಲೆಯಾದರೆ ಭಾರತದಲ್ಲಿ ಸಂಪೂರ್ಣವಾಗಿ ಆಧ್ಯಾತ್ಮಿಕ ಜೀವಸೆಲೆ ಇದೆ. ಇದು ನಮ್ಮ ದೇಶದ ವಿಶೇಷತೆ. ಇದು ಸ್ವಾಮೀ ವಿವೇಕಾನಂದರ ಈ ಮಾತನ್ನು ಸದಾ ಅನುಕರಿಸುವವರು ನಾವೆಲ್ಲ. ಅದರಂತೆ, ಮನುಷ್ಯ ಬುದ್ಧಿಯ ನೆಲೆಯಲ್ಲಿ ಪ್ರಾಣಿಗಳಿಗಿಂತ ಭಿನ್ನವಾದವನು. ಪೂಜೆ, ನೈತಿಕತೆ, ಆಧ್ಯಾತ್ಮಿಕತೆ ಇವೆಲ್ಲವೂ ವ್ಯಕ್ತಿತ್ವವನ್ನು ಬೆಳೆಸಿಕೊಂಡು ದೈವತ್ವವನ್ನು ಪ್ರಕಾಶ ಮಾಡುವ ಕೆಲಸವನ್ನು ಮಾಡುತ್ತದೆ. ನಾವು ಬೇರೆಯವರಿಂದ ಕಲಿಯುವುದನ್ನು ರೂಢಿಸಿಕೊಳ್ಳಬೇಕು. ನಾನೇ ಶ್ರೇಷ್ಠ ಅನ್ನುವ ಅಹಂ ನಮ್ಮ ಕಲಿಕೆಯನ್ನು ನಿಲ್ಲಿಸಿ ನಮ್ಮ ಅವನತಿಗೆ ಕಾರಣವಾಗುತ್ತದೆ. ಸ್ವಾಮಿ ವಿವೇಕಾನಂದರು ಹೇಳಿದಂತೆ, ಇಡೀ ಭಾರತದ ನಾಡಿಮಿಡಿತ ಆಧ್ಯಾತ್ಮ.
ಈ ಸತ್ಯವನ್ನು ಸ್ವಾಮಿ ವಿವೇಕಾನಂದರು ಕಂಡುಕೊಂಡಿದ್ದರಿಂದಲೇ ಅವರ ಹಿಂದೆ ಜನ ಸಾಗರದಂತೆ ಮುತ್ತಿಕೊಳ್ಳುತ್ತಿದ್ದರು. ಆತ್ಮದ ಶಕ್ತಿ ಅನಂತ ಮತ್ತು ಅಪಾರ. ಅದು ಕೆಲವೊಮ್ಮೆ ಕುಗ್ಗಬಹುದು. ಆದರೆ ನಾಶವಾಗಲಾರದು.ಈ ಮೂಲ ಶಕ್ತಿಯಿಂದ ನಾವು ಕಲಿಯುವಂಥದ್ದು ಬಹಳಷ್ಟಿದೆ.
ವಿದ್ಯಾರ್ಥಿಗಳು ಆಧ್ಯಾತ್ಮಿಕ ಮೌಲ್ಯಗಳನ್ನು ಅರಿತಿರಬೇಕು. ಏಕತೆಯ ಪ್ರೀತಿಯ ಏಕಮಾತ್ರ ಸಂದೇಶವನ್ನು ಕೊಡುವ ಭಾರತದ ನೈತಿಕ ಮತ್ತು ಆಧ್ಯಾತ್ಮಿಕ ಅಂಶಗಳನ್ನು ಗಮನಿಸಬೇಕು. ಇಲ್ಲಿ ಆಧ್ಯಾತ್ಮಿಕತೆ ಅಂದರೆ, ಒಬ್ಬ ವ್ಯಕ್ತಿಯ ಬೆಳವಣಿಗೆಯೇ ಆಗಿದೆ.
ಸತ್ಯದ ಆಧಾರದ ಮೇಲೆ ನಮ್ಮ ಸಂಪೂರ್ಣ ಸಮಾಜ ನಿಂತಿದೆ. ನಮ್ಮ ವ್ಯಕ್ತಿತ್ವಕ್ಕೆ ಸತ್ಯ ಬೇಕೇ ಬೇಕು. ಇದರಿಂದ ಧೈರ್ಯ, ನಿರ್ಭರತೆ ಬಂದೇ ಬರುತ್ತದೆ. ಇಂದ್ರಿಯ ನಿಗ್ರಹ ಮಾಡಿದವರಿಗೆ ಸಾಧನೆ ಮಾಡಿ ವ್ಯಕ್ತಿತ್ವ ವನ್ನು ಬೆಳೆಸಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಇದನ್ನ ಅರಿತಿರಬೇಕು.ಈ ಜಗತ್ತಿನಲ್ಲಿ ಸುಲಭವಾಗಿ ಸಿಗುವುದು ದುಃಖ ಮಾತ್ರ. ಸುಖ ಪಡಬೇಕಾದರೆ ಕಷ್ಟ ಬರಲೇಬೇಕು. ಪೂಜೆ, ಜಪ, ತಪ, ಪಾರಾಯಣಗಳನ್ನು ನಿತ್ಯವೂ ಅಭ್ಯಾಸ ಮಾಡುವುದರಿಂದ ಮನಸ್ಥಿತಿ ನಿಯಂತ್ರಣಕ್ಕೆ ಬಂದು ಜೀವನವನ್ನು ಸ್ಥಿರವಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳುತ್ತಾ, ವಿದ್ಯಾರ್ಥಿಗಳಿಗೆ ಶುಭಾಶಂಸನೆಗೈದರು.
ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಮೋಹನ ಪಡಿವಾಳ್, ವೆಂಕಟೇಶ ಪ್ರಭು, ನರೇಂದ್ರ ಕಾಮತ್, ಪ್ರಾಕ್ತನ ವಿದ್ಯಾರ್ಥಿನಿ ಕಸ್ತೂರಿ ಕಾರಂತ್, ಐಕ್ಯುಎಸಿ ಸಂಯೋಜಕರಾದ ಲಕ್ಷ್ಮೀನಾರಾಯಣ ಕೆ. ಎಸ್., ವಿದ್ಯಾರ್ಥಿ ಕ್ಷೇಮಪಾಲನಾ ಸಹ ಅಧಿಕಾರಿ ನಂದಕಿಶೋರ್ ಕೆ. ನಿವೃತ್ತ ಪ್ರಾಧ್ಯಾಪಕ ನಾಗಭೂಷಣ ಎಚ್.ಜಿ ಮಂತಾದವರೆಲ್ಲ ಸಭೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕಿ ಡಾ. ಯಶವಂತಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಎ. ಕೋಟ್ಯಾನ್ ಸ್ವಾಗತಿಸಿದರು. ಕನ್ನಡ ವಿಭಾಗ ಮುಖ್ಯಸ್ಥೆ ವನಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವಿಜಯ ಕುಮಾರಿ ವಂದಿಸಿದರು.






















