
ತಿರುಮಲ: ತಿರುಮಲಕ್ಕೆ ಭೇಟಿ ನೀಡುವ ಭಕ್ತರಿಗೆ ರಸ್ತೆ, ವಸತಿ ಕೊಠಡಿಗಳ ಕೌಂಟರ್, ದರ್ಶನದ ಸರತಿ ಸಾಲು ಹಾಗೂ ಇತರ ಪ್ರಮುಖ ಸ್ಥಳಗಳನ್ನು ಹುಡುಕಲು ನೆರವಾಗುವ ಉದ್ದೇಶದಿಂದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ‘ವೆಂಕಟಾದ್ರಿ’ ಎಂಬ ನೂತನ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ವರ್ಚುವಲ್ ಮೂಲಕ ಆ್ಯಪ್‌ಗೆ ಚಾಲನೆ ನೀಡಿದ್ದು, ಅಮೆರಿಕದ ಎನ್‌ಆರ್‌ಐ ದಾನಿ ಜೇಪಿ ಅವರ ಆರ್ಥಿಕ ನೆರವಿನಿಂದ ಇದನ್ನು ಅಭಿವೃದ್ಧಿಪಡಿಸಲಾಗಿದೆ.
ಐದು ಭಾಷೆಗಳಲ್ಲಿ ಆ್ಯಪ್ ಸೇವೆ:
ತಿರುಮಲದ 25 ವಿಭಾಗಗಳಲ್ಲಿರುವ ಸುಮಾರು 350ಕ್ಕೂ ಹೆಚ್ಚು ಪ್ರಮುಖ ಸ್ಥಳಗಳ ಮಾಹಿತಿ ಈ ಆ್ಯಪ್‌ನಲ್ಲಿ ಲಭ್ಯವಿದೆ. ಇಂಟರ್ನೆಟ್ ಸಂಪರ್ಕವಿಲ್ಲದೆಯೂ ಕಾರ್ಯನಿರ್ವಹಿಸುವ ಆಫ್‌ಲೈನ್ ನೇವಿಗೇಶನ್ ಸೌಲಭ್ಯ ಇದರ ವಿಶೇಷತೆಯಾಗಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸೇವೆ ಒದಗಿಸಲಿದ್ದು, ಸ್ಮಾರ್ಟ್‌ಫೋನ್ ಬಳಸದ ಭಕ್ತರಿಗಾಗಿ ಡಿಜಿಟಲ್ ಕಿಯೋಸ್ಕ್‌ಗಳನ್ನೂ ಸ್ಥಾಪಿಸಲಾಗುತ್ತಿದೆ.
24 ಗಂಟೆ ಎಐ ವಾಯ್ಸ್ ಅಸಿಸ್ಟೆಂಟ್:
ಆ್ಯಪ್‌ನಲ್ಲಿ ಅಳವಡಿಸಿರುವ ಕೃತಕ ಬುದ್ಧಿಮತ್ತೆ (AI) ಆಧಾರಿತ ವಾಯ್ಸ್ ಅಸಿಸ್ಟೆಂಟ್ ಮೂಲಕ ಭಕ್ತರು ಧ್ವನಿ ಆದೇಶದ ಸಹಾಯದಿಂದ ತಮಗೆ ಬೇಕಾದ ಸ್ಥಳಗಳ ಮಾಹಿತಿ ಪಡೆಯಬಹುದು. ದಿನದ 24 ಗಂಟೆಯೂ ಈ ಸೌಲಭ್ಯ ಲಭ್ಯವಿರಲಿದೆ. ವಾಹನ ನಿಲ್ಲಿಸಿದ ಸ್ಥಳವನ್ನು ಗುರುತಿಸಲು ‘ಮಾರ್ಕ್ ಮೈ ಸ್ಪಾಟ್’ ಎಂಬ ವೈಶಿಷ್ಟ್ಯವನ್ನೂ ಒದಗಿಸಲಾಗಿದೆ.
ದರ್ಶನದಿಂದ ತುರ್ತು ಸೇವೆಗಳವರೆಗೆ ಮಾಹಿತಿ:
ವಸತಿ ಕೊಠಡಿಗಳ ಕೌಂಟರ್‌ಗಳು, ದರ್ಶನದ ಕ್ಯೂ ಲೈನ್‌ಗಳು, ಅನ್ನಪ್ರಸಾದ ಕೇಂದ್ರಗಳು, ಕ್ಯಾಂಟೀನ್‌ಗಳು, ಲಗೇಜ್ ಕೌಂಟರ್‌ಗಳು, ಪಾದರಕ್ಷೆ ಇಡುವ ಸ್ಥಳಗಳು, ಕಲ್ಯಾಣಕಟ್ಟೆ, ಕುಡಿಯುವ ನೀರಿನ ಘಟಕಗಳು ಹಾಗೂ ಶೌಚಾಲಯಗಳ ಮಾಹಿತಿ ಆ್ಯಪ್‌ನಲ್ಲಿ ಸಿಗಲಿದೆ. ಜೊತೆಗೆ ಆಸ್ಪತ್ರೆಗಳು, ಪೊಲೀಸ್ ಠಾಣೆಗಳು, ಪಾರ್ಕಿಂಗ್ ಸ್ಥಳಗಳು, ಉಚಿತ ಬಸ್ ಮಾರ್ಗಗಳು ಮತ್ತು ಬಸ್ ವೇಳಾಪಟ್ಟಿಗಳನ್ನೂ ತಿಳಿದುಕೊಳ್ಳಬಹುದು.
ಒನ್-ಟಚ್ ತುರ್ತು ಸಹಾಯ:
ತುರ್ತು ಸಂದರ್ಭಗಳಲ್ಲಿ ತಕ್ಷಣ ಸಂಪರ್ಕಿಸಲು ಟಿಟಿಡಿ ಹೆಲ್ಪ್‌ಲೈನ್, ಪೊಲೀಸ್ ಸಹಾಯವಾಣಿ ಸೇರಿದಂತೆ ಅಗತ್ಯ ಸಂಪರ್ಕ ಸಂಖ್ಯೆಗಳನ್ನು ಒಂದೇ ಸ್ಪರ್ಶದಲ್ಲಿ ಪಡೆಯುವ ವ್ಯವಸ್ಥೆ ಇದೆ. ಭಕ್ತರು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆ್ಯಪ್ ಸ್ಟೋರ್‌ನಿಂದ ‘ವೆಂಕಟಾದ್ರಿ’ ಆ್ಯಪ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಮೂಲಕ ತಿರುಮಲದಲ್ಲಿ ದಾರಿ ಹುಡುಕುವ ತೊಂದರೆ ಕಡಿಮೆಯಾಗುವ ನಿರೀಕ್ಷೆಯಿದೆ.






















