
ಉಳ್ಳಾಲ: ಸೋಮೇಶ್ವರ ಪೆರಿಬೈಲ್ ಬೀಚ್ನಲ್ಲಿ ಈಜಲು ಸಮುದ್ರಕ್ಕಿಳಿದ ಇಬ್ಬರು ವಿದ್ಯಾರ್ಥಿಗಳು ಪ್ರಬಲ ಅಲೆಗಳ ಹೊಡೆತಕ್ಕೆ ಸಿಲುಕಿದ್ದು, ಓರ್ವನನ್ನು ರಕ್ಷಿಸಲಾಗಿದ್ದು, ಮತ್ತೊಬ್ಬ ನಾಪತ್ತೆಯಾಗಿರುವ ಘಟನೆ ಅ.10ರಂದು ನಡೆದಿದೆ.
ನಾಪತ್ತೆಯಾದ ವಿದ್ಯಾರ್ಥಿಯನ್ನು ಉಜಿರೆಯ ಖಾಸಗಿ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಮ್ಮರಡಿ ನಿವಾಸಿ ಶೋಭಿತ್ ಎಂ. ಗೌಡ (18) ಎಂದು ಗುರುತಿಸಲಾಗಿದೆ. ಆಕಾಶ್ ಎಂಬ ವಿದ್ಯಾರ್ಥಿ ಈಜಿ ದಡ ಸೇರಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕಾಲೇಜಿನ ಒಂಬತ್ತು ವಿದ್ಯಾರ್ಥಿಗಳು ಕುತ್ತಾರಿನ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ, ಬಳಿಕ ಗೂಗಲ್ ಮ್ಯಾಪ್ ಮೂಲಕ ಸೋಮೇಶ್ವರ ಪೆರಿಬೈಲ್ ಬೀಚ್ಗೆ ತೆರಳಿದ್ದರು. ಈ ವೇಳೆ ಸಮುದ್ರಕ್ಕಿಳಿದ ಶೋಭಿತ್ ಮತ್ತು ಆಕಾಶ್ ಅಲೆಗಳಿಗೆ ಸಿಲುಕಿದ್ದಾರೆ.
ಶೋಭಿತ್ ಕುಟುಂಬದ ಏಕೈಕ ಪುತ್ರನಾಗಿದ್ದು, ಆತನಿಗಾಗಿ ಎಸ್ಡಿಆರ್ಎಫ್, ಕರಾವಳಿ ಕಾವಲು ಪಡೆ, ಗೃಹರಕ್ಷಕ ದಳ ಹಾಗೂ ಉಳ್ಳಾಲ ಪೊಲೀಸರು ತಡರಾತ್ರಿವರೆಗೂ ಶೋಧ ನಡೆಸಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






















