ಭಾಗ – 667
ಭರತೇಶ ಶೆಟ್ಟಿ ಎಕ್ಕಾರು

ಭೋಜನ ಪೂರೈಸಿದ ಅತಿಥಿಯ ಮುಖದಲ್ಲಿ ಪೂರ್ಣ ಸಂತೃಪ್ತಿ ಗೋಚರಿಸುತ್ತಿತ್ತು. ಬಡ ಬ್ರಾಹ್ಮಣನ ಸಂಸಾರವನ್ನು ಕರೆದು “ಅಯ್ಯಾ ಪುಣ್ಯಾತ್ಮರೆ! ನಾನು ಊಟ ಮಾಡದೆ ಅದೆಷ್ಟು ದಿನಗಳಾಗಿತ್ತೋ ನನಗೆ ಗೊತ್ತಿಲ್ಲ. ಇವತ್ತು ಊಟ ಸಿಗದೆ ಹೋಗುತ್ತಿದ್ದರೆ ನಾನು ಸತ್ತು ಹೋಗುತ್ತೇನೆ ಎಂಬಷ್ಟು ನಿತ್ರಾಣನಾಗಿದ್ದೆ. ಯಾರ ಮನೆ ಬಾಗಿಲಿಗೆ ಹೋದರೂ ಈ ಬರಗಾಲ ಕಾಲದಲ್ಲಿ ಊಟ ಸಿಗಲಿಲ್ಲ. ಊಟ ನೀಡದಿದ್ದರೂ ಪರವಾಗಿರಲಿಲ್ಲ ಕೆಲವರು ಹೊಡೆದೋಡಿಸುವುದಕ್ಕೆ ಮುಂದಾಗಿದ್ದರು. ಇನ್ನು ಕೆಲವರು ನನ್ನನ್ನು ಭಕ್ಷಿಸಲು ಸಿದ್ಧರಾದಂತೆ ಕಂಡರು. ತತ್ಪರಿಣಾಮ ಭಿಕ್ಷೆ ಬೇಡುವ ಸ್ಥೈರ್ಯ ಕಳಕೊಂಡಿದ್ದೆನು. ಧರ್ಮಾತ್ಮರಾದ ನೀವು ಇಂದು ಊಟ ನೀಡದಿರುತ್ತಿದ್ದರೆ ಏನೋ ಒಂದು ಮಹಾ ದುರಂತ ಸಂಭವಿಸಲಿತ್ತು. ಈ ಭೂಮಿಯಲ್ಲಿ ಇನ್ನೂ ಧರ್ಮವಿದೆ, ಧರ್ಮ ಬುದ್ಧಿಯ ಜನರಿದ್ದಾರೆ ಎಂದು ನೀವು ತೋರಿಸಿ ಕೊಟ್ಟವರಿದ್ದೀರಿ. ಪೂರ್ಣ ಸಂತೃಪ್ತಿಯನ್ನು ಪಡೆದವನಿದ್ದೇನೆ. ಒಳಿತು ಮಾಡಿದ ನಿಮಗೆ ಒಳ್ಳೆಯದು ಆಗಲಿದೆ” ಎಂದು ನುಡಿದು ಸಂತೋಷದ ನಗು ಬೀರಿದನು.
ಬಡ ಬ್ರಾಹ್ಮಣನ ಮನೆಯವರು ಹಸಿದಿದ್ದರೂ ಈತನ ಮಾತು ಕೇಳಿದಾಗ ನಮ್ಮ ಮರ್ಯಾದೆಯೂ ಉಳಿಯಿತು, ಧರ್ಮ ಪಾಲನೆಯೂ ಆಯಿತು. ಬಂದ ಅತಿಥಿ ಸಂತೃಪ್ತನಾದೆ ಎಂದಾಗ ಅವರೆಲ್ಲರ ಹೊಟ್ಟೆ ತುಂಬಿದಷ್ಟು ಮಹದಾನಂದವಾಯಿತು. ಪರಸ್ಪರ ಮನೆಯವರು ಮುಖ ನೋಡಿಕೊಳ್ಳುತ್ತಾ ತಾವು ಮಹತ್ತರವಾದುದನ್ನು ಸಾಧಿಸಿದ್ದೇವೆ ಎಂಬಂತೆ ಸಂಭ್ರಮದ ನಗು ವಿನಿಮಯ ಮಾಡಿಕೊಂಡರು.
ಆಗ ಬಂದಂತಹ ಅತಿಥಿ “ಮಹಾತ್ಮರೆ, ನಿಮ್ಮ ಧರ್ಮಬುದ್ಧಿಗೆ ಸಂಪೂರ್ಣ ಮೆಚ್ಚಿದವನಿದ್ದೇನೆ. ಸ್ವತಃ ನೀವು ನಿನ್ನೆಯೂ ಅಲ್ಲ ಮೊನ್ನೆ ಉಂಡವರು. ಅಲ್ಲಿಂದ ಈ ಕ್ಷಣದ ತನಕ ನಿರಾಹಾರಿಗಳಾಗಿದ್ದರೂ ಮನೆಗೆ ಬಂದವನು ಯಾರೊ ಏನೋ! ಪರಿಚಯ, ಸಂಬಂಧ ಇಲ್ಲದಿದ್ದರೂ ಸತ್ಕರಿಸಿದ ರೀತಿ, ಪ್ರೀತಿ, ಅತಿಥಿಗೆ ಸಂತೃಪ್ತಿಯಾಗುವುದೊ ಇಲ್ಲವೋ ಎಂಬ ನಿಮ್ಮ ಭಯ, ಆತಂಕ ಎಲ್ಲದರಿಂದಲೂ ನಾನು ಸಂಪ್ರೀತನಾಗಿದ್ದೇನೆ. ಒಂದು ಅರೆ ಕ್ಷಣಕ್ಕೂ ನೀವು ನಿಮ್ಮ ಸ್ವಂತ ಹಸಿವೆಯ ಬಗ್ಗೆ ಚಿಂತೆಯನ್ನು ಮಾಡಲಿಲ್ಲ. ಹಸಿದ ಹೊಟ್ಟೆಯಲ್ಲಿ, ಅದರ ಬಗ್ಗೆ ಕಿಂಚಿತ್ ಯೋಚಿಸದೆ ಬಂದ ಅತಿಥಿಯನ್ನು ತೃಪ್ತಿ ಪಡಿಸುವ ಸಾಂಘಿಕ ಪ್ರಯತ್ನ ಮಾಡಿದಿರಿ. ನೀಡಲು ನಿಮ್ಮಲ್ಲಿ ಏನಿದೆ ಎನ್ನುವುದು ಮುಖ್ಯವಲ್ಲ. ಇದ್ದುದನ್ನು ಪೂರ್ಣ ಮನಸ್ಸಿನಿಂದ ಸಮರ್ಪಿಸುವ ನಿಮ್ಮ ಮನಸ್ಸು ಅಮೂಲ್ಯವಾದುದು. ಅತ್ಯಂತ ಶೃದ್ಧೆಯಿಂದ ನೀವು ಮಾಡಿದ ಸೇವೆ ದೇವರಿಗೆ ಬಲುಪ್ರೀತಿಯಾಗಿದೆ. ಇಂದು ನೀವು ನೀಡಿದ ದಾನ, ಮತ್ತು ದಾನ ಮಾಡಿದ ನಿಮ್ಮ ಮನಸ್ಥಿತಿ ಮತ್ತು ಪರಿಸ್ಥಿತಿ ಇದೆಲ್ಲವನ್ನೂ ಪರಿಗಣಿಸಿ ಇದಕ್ಕಿಂತ ಶ್ರೇಷ್ಠವಾದ ದಾನ ಯಾವುದೂ ಇಲ್ಲವೆಂದು ಹೇಳುತ್ತೇನೆ. ನೀವು ಮಾಡಿದ ಈ ಮಹತ್ಕಾರ್ಯ ಯಜ್ಞ ಸದೃಶವಾದುದು. ನೀವು ನೀಡಿದ್ದು ಮಹತ್ತರವಾದ ಹವಿಸ್ಸು. ಅದನ್ನು ಬಹಳ ಪ್ರೀತಿಯಿಂದ ಸ್ವೀಕರಿಸಲಾಗಿದೆ” ಎಂದು ನುಡಿದನು.
ಮನೆಯಲ್ಲಿದ್ದ ಬಡ ಬ್ರಾಹ್ಮಣನಿಗೂ, ಆತನ ಸಂಸಾರಕ್ಕೂ ಪರಮಾಶ್ಚರ್ಯ. ನಮ್ಮ ಹೊಟ್ಟೆಯ ಹಸಿವಿನ ಕಥೆ, ಮನೆಯಲ್ಲಿ ಇನ್ನೇನೂ ಇಲ್ಲ ಎಂಬ ಸತ್ಯ, ದೇವರಿಗೆ ಪ್ರೀತಿಯಾಗಿದೆ ಎಂಬ ಮಾತು! ಎಲ್ಲವೂ ಅಚ್ಚರಿ ಮೂಡಿಸಿತು. ಹಾಗಿದ್ದರೆ ಇಲ್ಲಿ ಉಂಡ ಅತಿಥಿ ಯಾರು? ಎಂಬ ಕುತೂಹಲ ಹೆಚ್ಚಾಯಿತು.
ಆ ಅತಿಥಿ ಮತ್ತೆ ಮಾತು ಮುಂದುವರಿಸುತ್ತಾ “ನೀವು ದಾನ ನೀಡಿದ ಭಾವ ಹೇಗಿತ್ತು? ‘ಅತಿಥಿ ದೇವೋ ಭವ’ ಎಂದಲ್ಲವೆ? ನಿಮ್ಮ ಆ ಪೂರ್ಣ ಮನದ ಭಾವ ನನಗೆ ಬಲು ಪ್ರೀತವಾಗಿದೆ. ನಾನು ಭಿಕ್ಷುಕನೂ ಅಲ್ಲ. ಹಸಿದು ಬಂದ ಅತಿಥಿಯೂ ಅಲ್ಲ. ಆದರೂ ಭೂಮಿಗೆ ಬಂದು ನನ್ನ ಅಸ್ತಿತ್ವವಾದ ಧರ್ಮವನ್ನು ಹುಡುಕುತ್ತಾ ಕೆಲದಿನಗಳನ್ನು ಕಳೆದಾಗ ಹಸಿದಿದ್ದೆ. ಧರ್ಮಕ್ಕೆ ದೇವನಾದ ಧರ್ಮಮೂರ್ತಿ ನಾನು. ನನ್ನನ್ನು ಈ ತೆರನಾಗಿ ಆರಾಧಿಸಿ ನೀವು ಧರ್ಮ ಯಜ್ಞವನ್ನು ಮಾಡಿದವರಿದ್ದೀರಿ. ಯಾಗಾಗ್ನಿ ನಿಮ್ಮ ಉದರದಲ್ಲಿ ಪ್ರಜ್ವಲಿಸುತ್ತಿತ್ತು. ಪ್ರತ್ಯಕ್ಷವಾಗಿ ನೀವಿತ್ತ ಹವಿರ್ಭಾಗವನ್ನು ಹವಿರ್ಭೋಜನವಾಗಿ ಕೈಯಾರೆ ಸ್ವೀಕರಿಸಿದ್ದೇನೆ. ನನಗೆ ಬೇಕಾಗಿದ್ದುದು ನಿಸ್ವಾರ್ಥ, ನಿಷ್ಕಾಮ ಭಕ್ತಿ, ಮತ್ತು ಆಚಾರ. ಧರ್ಮದ ಕುರಿತಾದ ಭಯ, ಧರ್ಮಪಾಲನೆಯ ಶೃದ್ಧಾ ಭಕ್ತಿ. ನಿಮ್ಮಲ್ಲಿ ಪ್ರತಿಯೊಬ್ಬರಲ್ಲೂ ಅದೆಲ್ಲವೂ ತುಂಬಿ ತುಳುಕುತ್ತಿದೆ. ಇನ್ನು ನೀವು ಇಲ್ಲಿರಕೂಡದು. ಪುಣ್ಯ ವಿಮಾನ ನಿಮಗಾಗಿ ಬಂದಿದೆ. ನೀವು ನಾಲ್ಕು ಮಂದಿಯೂ ಸಮಾನ ಯೋಗ್ಯತೆಯನ್ನು ಪ್ರಕಟಿಸಿ ಬ್ರಹ್ಮಲೋಕವನ್ನೇರುವ ಅರ್ಹತೆಯನ್ನು ಸಂಪಾದಿಸಿದ್ದೀರಿ. ನಿಮ್ಮನ್ನು ಆದರದಿಂದ ನಾನು ವಿಮಾನವೆನ್ನೇರಿಸುತ್ತೇನೆ” ಎಂದನು. ಅವರೆಲ್ಲರೂ ಸಶರೀರಿಗಳಾಗಿ ವಿಮಾನವೇರಿದರು. ದೇವನು ಅಂತರ್ಧಾನನಾದನು.
ಮುಂಗುಸಿ ಕಥೆ ಮುಂದುವರಿಸುತ್ತಾ ಹೇಳ ತೊಡಗಿತು “ಇದೆಲ್ಲವನ್ನೂ ಕಣ್ಣಾರೆ ಕಾಣುವ ಸುಯೋಗ ಅದಾವ ಪುಣ್ಯದ ಫಲವಾಗಿ ನನಗೆ ದೊರೆತಿತ್ತೊ ನಾನರಿಯೆ! ಆ ಕ್ಷಣದಲ್ಲಿ ನನಗೊಂದು ಮಹದಾಸೆ ಮನದಲ್ಲಿ ಮೂಡಿತು. ನನ್ನ ಆಸೆ ಪೂರೈಸಲು ನಾನೂ ಮುಂದಾದೆ. ಆಗ ಒಂದು ವಿಶೇಷ ನಡೆದು ಹೋಯಿತು.
ಮುಂದುವರಿಯುವುದು…..






















