
ರಾಜ್ಯ ಸರ್ಕಾರ ರೈತರಿಗೆ ಘೋಷಿಸಿರುವ ತಲಾ 2,500 ರೂ. ಪರಿಹಾರ ಯಾವುದಕ್ಕೂ ಸಾಲದು. ರೈತರನ್ನು ಸರ್ಕಾರ ಭಿಕ್ಷುಕರಂತೆ ನೋಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನ ‘ಭಾರತ್ ಜೋಡೋ’ ಸಂಘಟನೆಗಳಂತಹ ಗಂಜಿ ಕೇಂದ್ರಗಳಿಗೆ 2,500 ಕೋಟಿ ರೂ. ಮೀಸಲಿಡುವ ಸರ್ಕಾರ, ರೈತರಿಗಾಗಿ ಕೇವಲ 1,000 ಕೋಟಿ ರೂ. ನೀಡುತ್ತಿದೆ. ಇದರಿಂದ ರೈತರ ಬಗ್ಗೆ ಸರ್ಕಾರಕ್ಕಿರುವ ಕಾಳಜಿ ಮತ್ತು ಆದ್ಯತೆ ತಿಳಿಯುತ್ತದೆ ಎಂದು ಆರೋಪಿಸಿದರು.
ಇನ್ನು ಹುಬ್ಬಳ್ಳಿಯಲ್ಲಿ ರೈತರ ಪ್ರತಿಭಟನೆ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ವ್ಯಕ್ತವಾದ ಅವಹೇಳನಕಾರಿ ಹೇಳಿಕೆಗಳ ಬಗ್ಗೆಯೂ ಆರ್. ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು. ಪ್ರಹ್ಲಾದ್ ಜೋಶಿ ಅವರ ಕುಟುಂಬದ ಕುರಿತು ಸ್ವಾಮೀಜಿಯೊಬ್ಬರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದ ಅವರು, ಈ ಹೇಳಿಕೆಗಾಗಿ ಸ್ವಾಮೀಜಿಗಳು ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.





















