
ಬೆಂಗಳೂರು: ಅನುಕಂಪದ ಆಧಾರದ ಮೇಲೆ ನೇಮಕಗೊಂಡವರು ಅಗತ್ಯ ಶೈಕ್ಷಣಿಕ ಅರ್ಹತೆ ಹೊಂದಿದ್ದರೂ, ಅದನ್ನೇ ಆಧಾರವಾಗಿಸಿಕೊಂಡು ಉನ್ನತ ಹುದ್ದೆ, ಉತ್ತಮ ಶ್ರೇಣಿ ಅಥವಾ ಹೆಚ್ಚುವರಿ ಸೇವಾ ಸೌಲಭ್ಯಗಳನ್ನು ಪಡೆಯಲು ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಅನುಕಂಪದ ನೇಮಕಾತಿಯ ಉದ್ದೇಶವು ನಿರ್ದಿಷ್ಟ ಹುದ್ದೆಗೆ ನೇಮಕ ಮಾಡುವ ಮೂಲಕವೇ ಪೂರ್ಣಗೊಳ್ಳುತ್ತದೆ. ಬಳಿಕ ಅದೇ ಅನುಕಂಪದ ಆಧಾರದಲ್ಲಿ ಮತ್ತೊಂದು ಅಥವಾ ಉನ್ನತ ಹುದ್ದೆ ಪಡೆಯಲು ಅವಕಾಶ ನೀಡಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಮತ್ತು ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.
ಬೆಳಗಾವಿ ಜಿಲ್ಲೆಯ ಸತೀಶ್ ವಿ. ಗುಲ್ಲಾ ಎಂಬ ಸೆಕೆಂಡ್ ಡಿವಿಷನ್ ಅಸಿಸ್ಟೆಂಟ್ ಸಲ್ಲಿಸಿದ್ದ ಪ್ರಕರಣದಲ್ಲಿ ನ್ಯಾಯಾಲಯ ಈ ತೀರ್ಪು ನೀಡಿದೆ. 2026ರ ಮಾರ್ಚ್ 24ರಂದು ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ನೀಡಿದ್ದ ಆದೇಶವನ್ನೂ ಹೈಕೋರ್ಟ್ ರದ್ದುಗೊಳಿಸಿದೆ.
ಗುಲ್ಲಾ ಅವರ ತಂದೆ ಬೆಳಗಾವಿಯ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಬಂದ್ ಪಿಯೋನ್ ಆಗಿದ್ದರು. 2017ರಲ್ಲಿ ಅವರು ಸೇವೆಯಲ್ಲಿದ್ದಾಗ ಮೃತಪಟ್ಟ ಹಿನ್ನೆಲೆಯಲ್ಲಿ, ಗುಲ್ಲಾ ಅವರನ್ನು ಅದೇ ಕಚೇರಿಯಲ್ಲಿ ಎಸ್ಡಿಎ ಹುದ್ದೆಗೆ ಅನುಕಂಪದ ಆಧಾರದಲ್ಲಿ ನೇಮಿಸಲಾಗಿತ್ತು.
ಕರ್ತವ್ಯಕ್ಕೆ ಸೇರಿದ ಏಳು ತಿಂಗಳ ಬಳಿಕ, ತಮ್ಮ ಶೈಕ್ಷಣಿಕ ಅರ್ಹತೆಯನ್ನು ಪರಿಗಣಿಸಿ ಎಫ್ಡಿಎ ಹುದ್ದೆಗೆ ನೇಮಕ ಮಾಡುವಂತೆ ಗುಲ್ಲಾ ಮನವಿ ಮಾಡಿದ್ದರು. ಆದರೆ ಕಂದಾಯ ಇಲಾಖೆ 2019ರಲ್ಲಿ ಅವರ ಮನವಿಯನ್ನು ತಿರಸ್ಕರಿಸಿತ್ತು.
ಈ ನಿರ್ಧಾರವನ್ನು ಗುಲ್ಲಾ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿದ್ದು, ನ್ಯಾಯಮಂಡಳಿ ಇಲಾಖೆಯ ಆದೇಶ ರದ್ದುಗೊಳಿಸಿ ಎಫ್ಡಿಎ ಹುದ್ದೆಗೆ ಅವರ ಪ್ರಕರಣ ಪರಿಗಣಿಸುವಂತೆ ಸೂಚಿಸಿತ್ತು. ಇದೇ ರೀತಿಯ ಮತ್ತೊಂದು ಪ್ರಕರಣದಲ್ಲೂ ಬಾಗಲಕೋಟೆಯ ಸಂದೀಪ್ಕುಮಾರ್ ವಿನಾಯಕ ರಾವ್ ಕುಲಕರ್ಣಿ ಅವರನ್ನು ಎಫ್ಡಿಎ ಹುದ್ದೆಗೆ ಪರಿಗಣಿಸುವಂತೆ ಆದೇಶಿಸಲಾಗಿತ್ತು.
ಈ ಆದೇಶ ಪ್ರಶ್ನಿಸಿ ಕಂದಾಯ ಇಲಾಖೆ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್, ಉನ್ನತ ಶೈಕ್ಷಣಿಕ ಅರ್ಹತೆಯೊಂದನ್ನೇ ಆಧಾರವಾಗಿಸಿಕೊಂಡು ಅನುಕಂಪದ ನೇಮಕಾತಿಯಲ್ಲಿ ‘ಗ್ರೂಪ್-ಸಿ’ ಹುದ್ದೆ ಬದಲಾವಣೆಗೆ ಅವಕಾಶ ನೀಡುವಾಗ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದೆ.































































































































