ಭಾಗ – 650
ಭರತೇಶ್ ಶೆಟ್ಟಿ, ಎಕ್ಕಾರು

ಪಾಂಡವರ ಅಶ್ವಮೇಧ ಯಾಗಾರಂಭ ಕಾಲದಲ್ಲಿ ಈಗ ಋಷಿವರ ಮಹಾತ್ಮ ಬಕದಾಲ್ಭ್ಯರ ಜೊತೆ ಮಹರ್ಷಿ ಧೌಮ್ಯರಿಂದ ಪೂಜೆ ಸ್ವೀಕರಿಸಲಿರುವವರು ಇದೇ ಭಗವಾನ್ ವ್ಯಾಸರು.
ವನವಾಸಕಾಲದಲ್ಲಿ ಇತ್ತ ಅರ್ಜುನನಿಗೆ ಪಾಂಡವರಾದ ನಿಮಗೂ ಒಬ್ಬರು ಸಮರ್ಥ ಗುರು ಬೇಕು ಎಂದು ಹೇಳುತ್ತಾ ಅದಕ್ಕೆ ನಿದರ್ಶನವಾಗಿ ಕಥೆಗಳನ್ನು ಸಾಕ್ಷ್ಯವಾಗಿ ಹೇಳತೊಡಗಿದ್ದ. ಹಾಗೆ ನಿರೂಪಿಸುತ್ತಾ ರಾಜಾ ಸಂವರಣ, ತಪತಿಯ ಕಥೆ ಹೇಳಿ, ಅರ್ಜುನನ ಕೋರಿಕೆಯ ಮೇರೆಗೆ ಬ್ರಹ್ಮರ್ಷಿ ವಸಿಷ್ಠರ ಬಗ್ಗೆಯೂ ಹೇಳುತ್ತಾ ಈಗ ಕಥೆ ಮುಂದುವರಿಸತೊಡಗಿದ್ದಾನೆ. “ಹೇ ಅರ್ಜುನಾ! ಮಾಯಾವಿ ರಕ್ಕಸನ ಕಪಟದಿಂದ ವಸಿಷ್ಠರಿಗೆ ನರಮಾಂಸದಡುಗೆ ಉಣಬಡಿಸಿ, ಶಾಪಗ್ರಸ್ಥನಾಗಿದ್ದ ಮಹಾರಾಜ ಸೌದಾಸ ನರಭಕ್ಷಕ ರಾಕ್ಷಸನಾಗಿದ್ದಾನೆ. ಈ ಅವಕಾಶವನ್ನೇ ಬಳಸಿಕೊಂಡು ವಸಿಷ್ಟರ ವಿರೋಧಿ ಕೌಶಿಕ ಮುನಿ ಸೌದಾಸನೊಳಗೆ ಕಿಂಕರ ಎಂಬ ಮಾಯಾ ರಾಕ್ಷಸ ಶಕ್ತಿಯನ್ನು ಸಮಾಹಿತಗೊಳಿಸಿದ್ದಾನೆ. ತನ್ನ ವೈರಿಯಾದ ವಸಿಷ್ಠರ ಮಕ್ಕಳನ್ನು ನರಭಕ್ಷಕ ರಾಕ್ಷಸನ ಮೂಲಕ ಮಾರಣಹೋಮವನ್ನೇ ಮಾಡಿಸಿದ್ದಾನೆ. ಆ ನರಭಕ್ಷಕ ರಾಕ್ಷಸ ಅಂದರೆ ಶಾಪಗ್ರಸ್ಥ ಮಹಾರಾಜ ಸೌದಾಸ ಕಲ್ಮಾಶಪಾದನಾಗಿಯೇ ಮುಂದುವರಿಯುತ್ತಿದ್ದಾನೆ. ಅರಣ್ಯದಲ್ಲಿ ತಿರುಗಾಡುತ್ತಿದ್ದಾನೆ.
ಹಾಗೆ ಸಾಗುತ್ತಿರುವ ಸಮಯ ನರಭಕ್ಷಕನಾದ ರಾಕ್ಷಸ ಕಲ್ಮಾಶಪಾದ ಶಾರದ್ವತ ಎಂಬ ಋಷಿ ಹಾಗು ಅವರ ಪತ್ನಿ ವಿಮಲೆ ಎಂಬ ಋಷಿ ದಂಪತಿಗಳು ಆಶ್ರಮವಾಸಿಗಳಾಗಿರುವ ಕಾನನ ತಲುಪಿದ್ದಾನೆ. ಅಂದು ರಾತ್ರಿ ಉಂಡು ಮಲಗಿದ್ದ ಋಷಿಪತ್ನಿ ವಿಮಲೆಗೆ ಸ್ವಪ್ನ ದರ್ಶನವಾಗುತ್ತದೆ. ಏನೆಂದರೆ ಒಂದು ಭಯಾನಕ ಭೂತ ಬಂದು ಅವಳ ಕುತ್ತಿಗೆಯ ಮಂಗಳಸೂತ್ರವನ್ನೇ ಎಳೆದಂತೆ, ಎಳೆದದ್ದು ಯಾರು ಎಂದು ನೋಡಿದಾಗ ಒಂದು ವಿಕಾರ ರೂಪದ ದರ್ಶನವಾಗುತ್ತದೆ. ಅದರಿಂದ ಭಯಭೀತಳಾದ ವಿಮಲೆ ಕಿರುಚಿದಾಗ ಪತಿ ಋಷಿಗೆ ಎಚ್ಚರವಾಗುತ್ತದೆ. ಎಚ್ಚೆತ್ತ ಶಾರದ್ವಂತರು ಏನಾಯಿತು? ಎಂದು ಪ್ರಶ್ನಿಸುತ್ತಾರೆ. ಆಕೆ ಸ್ವಪ್ನ ವಿಚಾರವನ್ನು ವಿವರಿಸಿ ಹೇಳಿ ಗಂಡನಲ್ಲಿ, ” ಏನೋ ಆಪತ್ತು ನಮಗೆದುರಾಗಿದೆ. ನೀವೇ ರಕ್ಷಿಸಬೇಕು. ನನಗೇಕೋ ವಿಪರೀತ ಭಯವಾಗುತ್ತಿದೆ” ಎಂದು ಬೇಡಿಕೊಳ್ಳುತ್ತಾಳೆ. ಪತ್ನಿಯನ್ನು ಸಂತೈಸುತ್ತಾ “ಭಯ ಪಡಬೇಡ, ಧೈರ್ಯ ತಾಳು. ನಾಳೆ ಸೂರ್ಯೋದಯವಾದ ಬಳಿಕ ಇದರ ಬಗ್ಗೆ ಯೋಚಿಸಿ ಪರಿಹಾರ ದಾರಿ ಕಂಡುಕೊಳ್ಳೋಣ. ಈಗ ನಿಶ್ಚಿಂತಳಾಗಿ ಮಲಗು” ಎಂದು ಸಮಾಧಾನ ಪಡಿಸಿ ಮಲಗಿಸುತ್ತಾರೆ. ಮರುದಿನ ಇದರ ಬಗ್ಗೆ ವಿವೇಚಿಸಿ, ಪತ್ನಿ ಕಂಡ ಕನಸು ಅಶುಭಶಕುನವೆಂದರಿತು, ಅದರ ನಿವಾರಣೆಗಾಗಿ ಶಾಂತಿ ಹವನಗಳನ್ನು ಆರಂಭಿಸುತ್ತಾರೆ. ಆಗ ಅಲ್ಲಿಗೆ ಆಗಮಿಸಿದ ನರಭಕ್ಷಕ ರಾಕ್ಷಸ ಋಷಿ ಶಾರದ್ವತರನ್ನು ಕಂಡು ಸಂತಸಗೊಳ್ಳುತ್ತಾನೆ. ನನ್ನ ಇಂದಿನ ಆಹಾರ ಸಿಕ್ಕಿತು ಎಂಬ ಸಂಭ್ರಮ ಅವನಿಗೆ. ನೋಡುವಾಗ ಸನಿಹದಲ್ಲೇ ಓರ್ವ ಸುಂದರಿ ಸ್ತ್ರೀ ಇದ್ದಾಳೆ. ಅವಳನ್ನು ನೋಡಿ ರಕ್ಕಸನ ಉದರಾಗ್ನಿ ಮರೆತು ಹೋದಂತಾಗಿ ಕಾಮಾಗ್ನಿ ಪ್ರಜ್ವಲಿಸುತ್ತದೆ. ಆಕೆಯನ್ನು ತನ್ನದಾಗಿಸಲು ಮುಂದಾಗುತ್ತಾನೆ. ಮಹಾರಾಜ ಸೌದಾಸ ಧರ್ಮಿಷ್ಠನೇ ಆಗಿದ್ದರೂ ಶಾಪಗ್ರಸ್ಥನಾಗಿ ನರ ಭಕ್ಷಕ ರಾಕ್ಷಸ, ಅದರ ಮೇಲೆ ಕೌಶಿಕ ಮುನಿ ಸೃಜಿಸಿದ ನೀಚ ಬುದ್ಧಿಯ ಕಿಂಕರ ಎನ್ನುವ ಮಾಯಾ ಶಕ್ತಿ ಸಮಾಹಿತಗೊಂಡು ಪೂರ್ಣ ಪ್ರಮಾಣದ ದುಷ್ಟ ರಾಕ್ಷಸನೇ ಆಗಿ ಹೋಗಿದ್ದಾನೆ. ಕಾಮಾತುರನಾದ ರಾಕ್ಷಸ ನೇರವಾಗಿ ವಿಮಲೆಯನ್ನೇ ಸೆಳೆದು ಅನುಭವಿಸಲು ಮುಂದಾಗುತ್ತಾನೆ. ತಡೆಯಲು ಬಂದ ಋಷಿ ಶಾರದ್ವತರನ್ನೆ ಹೊಸಕಿ ಕೊಂದು ನುಂಗುತ್ತಾನೆ. ಈಗ ವಿಮಲೆಯ ರಕ್ಷಣೆ ಮಾಡಲು ಯಾರೂ ಇಲ್ಲ. ಅನಾಥೆಯಾದ ಆಕೆಯ ಆಕ್ರಂದನ ಅರಣ್ಯರೋದನವಷ್ಟೇ ಆಗಿ ಹೋಗಿದೆ. ಭಯಗೊಂಡ ವಿಮಲೆ ಪತಿಯ ಭೀಕರ ಮರಣದಿಂದ ಉತ್ಪನ್ನವಾದ ದುಃಖ ಮತ್ತು ಭಯದಿಂದ ಮೂರ್ಛಿತಳಾಗಿ ಬೀಳುತ್ತಾಳೆ. ನರಭಕ್ಷಕನಾದರೂ ಸ್ತ್ರೀ ಮೋಹಕ್ಕೊಳಗಾದ ರಾಕ್ಷಸನ ಆರೈಕೆಯಿಂದ ವಿಮಲೆ ಚೈತನ್ಯ ಹೊಂದುತ್ತಾಳೆ. ಕಣ್ದೆರೆದು ನೋಡಿದರೆ ಆ ರಾಕ್ಷಸನೇ ತನ್ನ ಮುಂದೆ ಇದ್ದಾನೆ. ಪ್ರೀತಿ ಕಾಳಜಿ ತೋರುತ್ತಾ, ಶಾಂತನಾಗಿದ್ದು ತನಗೆ ಸುಖ ನೀಡೆಂದು ಬೇಡುತ್ತಿದ್ದಾನೆ. ರಾಕ್ಷಸನನ್ನು ಎಷ್ಟು ಸಂತೈಸಿದರೂ ಆತ ಕೇಳುವವನೇ? ಕೊನೆಗೆ ಅನ್ಯ ಮಾರ್ಗ ತೋಚದ ವಿಮಲೆ, ನೀನು ಮುಂದೆ ಇದೇ ರೀತಿ ಯಾವ ಸ್ತ್ರೀಯನ್ನಾದರೂ ಕಾಮ ದೃಷ್ಟಿಯಿಂದ ಕಂಡು, ಎಳೆಯಲು ಮುಂದಾದರೆ ಆಗ ನಿನಗೆ ಮರಣ ಸಂಭವಿಸಲಿ ಎಂದು ಶಾಪವಿತ್ತು ಅಗ್ನಿ ಪ್ರವೇಶ ಮಾಡುತ್ತಾಳೆ. ನರಭಕ್ಷಕ ರಾಕ್ಷಸನ ಆಸೆ ಕೈಗೂಡಲಿಲ್ಲ. ಕಾಣ ಸಿಕ್ಕ ಸುಂದರಿ ಹೆಣ್ಣು ಈ ರೀತಿ ಅಂತ್ಯ ಕಂಡಾಗ ಒಂದೊಮ್ಮೆಗೆ ನಿರಾಸೆಯಾಗಿ, ಅಲ್ಲಿ ನಿಲ್ಲದೆ ತನ್ನ ದಾರಿ ಹಿಡಿದು ಮುಂದೆ ಹೋಗುತ್ತಾನೆ.
ಹೀಗಿರಲು ಅಂದು ಕಾಡಿನಲ್ಲಿ ಸೌದಾಸನಿಂದ ವಧಿಸಲ್ಪಟ್ಟಿದ್ದ ಮಾಯಾವಿ ರಾಕ್ಷಸ ಸೋದರ ಈಗ ಪಾತಾಳ ಸೇರಿದ್ದಾನೆ. ಅಲ್ಲಿನ ರಾಕ್ಷಸ ರಾಜ ಮೇಘವರ್ಣನೊಂದಿಗೆ ಮೈತ್ರಿ ಮಾಡಿಕೊಂಡಿದ್ದಾನೆ. ತನ್ನ ಅಣ್ಣನ ಮರಣಕ್ಕೆ ಕಾರಣನಾದ ರಾಜಾ ಸೌದಾಸನು ವಸಿಷ್ಠರ ಶಾಪದಿಂದಾಗಿ ರಾಕ್ಷಸನಾಗಿರುವ ವಿಚಾರ ತಿಳಿದವನಲ್ಲವೇ ಅವನು? ಪಾತಾಳದ ರಾಕ್ಷಸ ರಾಜನಿಗೆ ಈ ಎಲ್ಲಾ ವೃತ್ತಾಂತವನ್ನು ಹೇಳಿ, ಈಗ ನಮ್ಮಂತೆಯೇ ರಾಕ್ಷಸನಾಗಿರುವ ರಾಜಾ ಸೌದಾಸನನ್ನೂ ನಮ್ಮ ಸೇನೆಗೆ ಸೇರಿಸಿಕೊಳ್ಳುವಂತೆ ನಿರ್ದೇಶನ ನೀಡುತ್ತಾನೆ. ಆ ಸಲಹೆಯಂತೆ ಪಾತಾಳದ ರಾಕ್ಷಸ ರಾಜ ನರಭಕ್ಷಕನಾಗಿರುವ ಸೌದಾಸನನ್ನು ಹುಡುಕಿ ಮನವೊಲಿಸಿ ತನ್ನ ಸೇನೆಯಲ್ಲಿ ಸೇರಿಸಿಕೊಳ್ಳುತ್ತಾನೆ. ಬಲಾಢ್ಯನೂ ಪರಾಕ್ರಮಿಯೂ ಆಗಿರುವ ನರಭಕ್ಷಕ ರಾಕ್ಷಕ ಮಹಾರಾಜ ಸೌದಾಸ ಸೇರಿ ಬಲಾನ್ವಿತ ಸೇನೆಯೊಂದಿಗೆ ದೇವಲೋಕವನ್ನು ಸ್ವಾಧೀನ ಪಡಿಸಲು ಸ್ವರ್ಗಲೋಕ ಅಮರಾವತಿಗೆ ದಾಳಿ ಮಾಡುತ್ತಾರೆ. ಘನಘೋರ ಸಂಗ್ರಾಮ ಸಾಗುತ್ತದೆ. ಸ್ವರ್ಗದಲ್ಲಿ ದೇವೇಂದ್ರನ ಸತಿ ಶಚೀದೇವಿಯನ್ನು ಕಂಡು ಮೋಹಿತನಾಗುತ್ತಾನೆ. ಆಹಾ ಎಂತಹ ಚೆಲುವು, ಈವರೆಗೆ ಕಂಡು ಕೇಳರಿಯದ ಸೌದರ್ಯ. ನರಭಕ್ಷಕ ರಾಕ್ಷಸ ಕಾಮ ಪರವಶನಾಗಿ ಆಕೆಯನ್ನೆಳೆಯಲು ಮುಂದಾಗುತ್ತಾನೆ. ಈಗಾಗಲೇ ನರಭಕ್ಷಕ ರಾಕ್ಷಸ ಋಷಿಪತ್ನಿ ವಿಮಲೆಯಿಂದ ಶಪಿಸಲ್ಪಟ್ಟಿದ್ದಾನೆ. ಮುಂದೆ ನೀನೇನಾದರು ಹೆಣ್ಣನ್ನು ಎಳೆಯಲು ಮುಂದಾದರೆ ನಿನಗೆ ಮರಣ ಎಂಬಂತೆ, ಈಗ ಮತ್ತದೇ ಕೆಲಸದಲ್ಲಿ ಮುಂಬರಿಯುತ್ತಿದ್ದಾನೆ. ತಡೆಯಲು ಬಂದ ದೇವೇಂದ್ರನೊಡನೆ ನರಭಕ್ಷಕ ಯುದ್ದ ಮಾಡುತ್ತಿದ್ದಾನೆ. ಈ ಹೊತ್ತಿಗೆ ವಸಿಷ್ಠರ ಶಾಪದ ಅವಧಿಯೂ ಪೂರ್ಣಗೊಂಡಿದೆ. ಅಲ್ಲಿಗೆ ಆಗಮಿಸಿದ ನಾರದರು ದೇವೇಂದ್ರನೊಡನೆ ಸಾಗುತ್ತಿದ್ದ ಯುದ್ದವನ್ನು ನಿಲ್ಲಿಸುತ್ತಾರೆ. ಮಹಾರಾಜ ಸೌದಾಸನ ವೃತ್ತಾಂತವನ್ನು ತಿಳಿಸುತ್ತಾರೆ. ಇವರೀರ್ವರ ಯುದ್ದ ನಿಂತಾಗ ವಸಿಷ್ಠರಿತ್ತ ಸೌದಾಸನ ಶಾಪವೂ ವಿಮೋಚನೆಯಾಯಿತು. ಋಷಿ ಪತ್ನಿ ವಿಮಲೆಯ ಶಾಪವೂ ಶಚಿದೇವಿಯನ್ನು ಎಳೆಯಲು ಮುಂದಾದ ಕಾರಣದಿಂದ ಫಲಿಸಿತು. ಸೌದಾಸನ ರಾಕ್ಷಸ ರೂಪ ನಾಶವಾಗಿ ಮರಳಿ ತನ್ನ ನಿಜರೂಪ ಪಡೆದನು. ನಾರದರ ಸಂಧಾನದಿಂದ ದೇವೇಂದ್ರ ಮತ್ತು ಮಹಾರಾಜ ಸೌದಾಸ ಒಂದಾಗುತ್ತಾರೆ. ಆ ಸಮಯ ದೇವಲೋಕದ ಸೇನೆಯೊಡನೆ ಹೋರಾಡುತ್ತಿದ್ದ ಪಾತಾಳದ ರಾಕ್ಷಸರೂ ಸೋತುಕೊಲ್ಲಲ್ಪಟ್ಟು ವಿಜಯ ಪ್ರಾಪ್ತಿಯೂ ಆಗುತ್ತದೆ. ತಮ್ಮ ಪಕ್ಷ ಸೋತು ಪಾತಾಳದ ರಾಕ್ಷಸ ರಾಜ ಸಂಹರಿಸಲ್ಪಟ್ಟದ್ದನ್ನು ಕಂಡು ಓಡಿ ತಪ್ಪಿಸಿಕೊಳ್ಳುತ್ತಾರೆ. ಹೀಗೆ ಪಲಾಯನಗೈದವರಲ್ಲಿ ಸೌದಾಸನೊಡನೆ ವೈರ ಸಾಧಿಸಲು ಬಂದಿದ್ದ ಮಾಯಾವಿ ರಾಕ್ಷಸ ಸೋದರನೂ ಸೇರಿದ್ದ.
ಶಾಪ ವಿಮೋಚನೆಯಾಗಿ ಮಹಾರಾಜ ಸೌದಾಸ ಅಯೋಧ್ಯೆಗೆ ಮರಳಿದ. ತನ್ನ ಪತ್ನಿ ಮದಯಂತಿಯೊಂದಿಗೆ ಜೊತೆಯಾಗಿ ವಸಿಷ್ಠರ ಬಳಿಗೆ ಬರುತ್ತಾನೆ. “ಪೂಜ್ಯರೇ! ನೀವು ನನಗಿತ್ತ ಶಾಪ ವಿಮೋಚನೆಯಾಯಿತು. ಆದರೆ ಇಂದಿಗೂ ನನಗೆ ನೀವು ಯಾಕಾಗಿ ಶಾಪವಿತ್ತಿರಿ ಎಂಬುವುದೇ ತಿಳಿದಿಲ್ಲ. ಏನೇ ಇದ್ದರೂ ಅದು ದೈವಸಂಕಲ್ಪದಂತೆಯೇ ಆಗಿರುತ್ತದೆ. ಅರಿಯದೆ ನನ್ನಿಂದ ಏನಾದರೂ ಅಪರಾಧವಾಗಿದ್ದರೆ ಕ್ಷಮಿಸಬೇಕು” ಎಂದು ಬೇಡಿಕೊಳ್ಳುತ್ತಾನೆ. ವಸಿಷ್ಠರು ಆಶೀರ್ವದಿಸಿ “ಸೌದಾಸ ಹೀಗೆಲ್ಲಾ ಆಗುವುದಕ್ಕೆ ಕಾರಣನಾದವನು ಇನ್ನೂ ಬದುಕಿದ್ದಾನೆ. ಅಂದು ನಿನ್ನಿಂದ ಕಾಡಿನಲ್ಲಿ ಈರ್ವರು ರಾಕ್ಷಸರು ಎದುರಾದದ್ದು ನೆನಪಿದೆಯೇ? ಓರ್ವನನ್ನು ನೀನು ವಧಿಸಿದ್ದೆ. ಆದರೆ ನಿನ್ನಿಂದ ಕೊಲ್ಲಲ್ಪಟ್ಟ ರಕ್ಕಸನ ತಮ್ಮ ಬದುಕುಳಿದು ಮರೆಯಾಗಿದ್ದ. ನೀನು ಶಾಪಗ್ರಸ್ಥನಾಗಲು ಆತನ ಕಪಟ ಮಾಯೆಯೇ ಕಾರಣ. ಮಾಯಾವಿಯಾದ ಆತನೇ ನನ್ನ ರೂಪದಲ್ಲಿ ಬಂದು ನಿನ್ನಲ್ಲಿ ಮಾಂಸ ಭೋಜನ ಸಿದ್ಧಪಡಿಸುವಂತೆ ಹೇಳಿದ್ದ. ಕಪಟವರಿಯುವಲ್ಲಿ ಸೋತ ನೀನೂ ಹಾಗೆ ಮಾಡಿದ್ದೆ. ಅಷ್ಟಕ್ಕೇ ಬಿಡದ ಆ ರಾಕ್ಷಸ ನೀನು ಸಿದ್ಧ ಪಡಿಸಿದ್ದ ಮಾಂಸ ಭೋಜನವನ್ನುಂಡು ನರಮಾಂಸದೂಟವನ್ನು ನನ್ನ ಭೋಜನಕ್ಕಾಗಿ ಸಿದ್ಧಪಡಿಸಿಟ್ಟಿದ್ದ. ಅದನ್ನು ಅರಿಯದೆ ನನಗೆ ಉಣಬಡಿಸಿದ್ದೆ. ನರಮಾಂಸ ಉಣಬಡಿಸಿದ ಕಾರಣದಿಂದ ನೀನು ಶಾಪಗ್ರಸ್ಥನಾಗಿದ್ದೆ. ನರಮಾಂಸ ನೋಡಿ ಕ್ರೋಧಾವೇಶಕ್ಕೊಳಗಾಗಿ ಹಿಂದು ಮುಂದು ಯೋಚಿಸದೆ ನಾನು ನಿನ್ನನ್ನು ಶಪಿಸಿದ್ದೆ. ಪರಿಣಾಮ ಹನ್ನೆರಡು ವರುಷ ನೀನು ನರಭಕ್ಷಕ ರಾಕ್ಷಸನಾಗಿ ಹೋದೆ. ಆದರೂ ಪುಣ್ಯಾತ್ಮನಾದ ನೀನು ಸ್ವರ್ಗವನ್ನೇರುವಂತಾಯಿತು. ಶಾಪಗ್ರಸ್ಥನಾದರೂ ನಿನಗೆ ಸದವಕಾಶವೇ ಒದಗಿ ಬಂತು. ಮಹರ್ಷಿ ನಾರದರ ಮುಖೇನ ಸಂಧಾನವಾಗಿ ಶಾಪ ವಿಮೋಚನೆಯಾದ ನೀನು ಮರಳಿ ಬಂದಿರುವೆ. ಆದರೆ ಆ ಮಾಯಾವಿ ರಾಕ್ಷಸ ಸೋದರ ಇನ್ನೂ ಬದುಕುಳಿದಿದ್ದಾನೆ. ಮುಂದೆಯೂ ಆತ ನಿನ್ನನ್ನು ಬಾಧಿಸಬಹುದು. ಹಾಗಾಗಿ ಮೊದಲು ಆ ರಾಕ್ಷಸನನ್ನು ಹುಡುಕಿ ಕೊಲ್ಲಬೇಕು. ಆ ಕಾರ್ಯಕ್ಕಾಗಿ ನಿನಗೆ ವಿಶೇಷ ಅನುಗ್ರಹಬಲವನ್ನು ಆಶೀರ್ವದಿಸುತ್ತೇನೆ” ಎಂದು ಹೇಳಿ ಅನುಗ್ರಹಿಸುತ್ತಾರೆ. ಈ ಮಾತು ಕೇಳಿ ಸತ್ಯವರಿತ ಸೌದಾಸ ಒಮ್ಮೆಗೆ ವಿಸ್ಮಯಕ್ಕೊಳಗಾದರೂ, ತಡ ಮಾಡದೆ ಇನ್ನೂ ಬದುಕಿ ಉಳಿದಿರುವ ಆ ಮಾಯಾವಿ ರಾಕ್ಷಸ ಸೋದರನ ವಧೆಗಾಗಿ ಹೊರಡುತ್ತಾನೆ.































































































































