ಕೆಪಿಎಸ್‌ಸಿ ಮುಚ್ಚುವ ಹೇಳಿಕೆಗೆ ಹೆಚ್ ಡಿ ಕುಮಾರ್ ಸ್ವಾಮಿ ಆಕ್ರೋಶ

ಬೆಂಗಳೂರು: ಕೆಪಿಎಸ್‌ಸಿಯನ್ನು ಶಾಸನಬದ್ಧವಾಗಿ ಮುಚ್ಚುವ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿಎಂ ಹೇಳಿಕೆ ಹತಾಶೆ, ಅಜ್ಞಾನ ಹಾಗೂ ಹೊಣೆಗೇಡಿತನದ ಪರಮಾವಧಿ ಎಂದು ಅವರು ಟೀಕಿಸಿದ್ದಾರೆ.
ಕೆಪಿಎಸ್‌ಸಿ ಸಂಸ್ಥೆಯಲ್ಲಿ ಸಮಸ್ಯೆ ಇದ್ದರೆ ಅದನ್ನು ಸರಿಪಡಿಸಬೇಕು, ಸಂಸ್ಥೆಯನ್ನೇ ಮುಚ್ಚುವುದು ಪರಿಹಾರವಲ್ಲ ಎಂದು ಹೆಚ್ಡಿಕೆ ಹೇಳಿದ್ದಾರೆ. ಆಯೋಗಕ್ಕೆ ಕೆಟ್ಟ ಹೆಸರು ತರಲು ಕಾರಣರಾದವರನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು.ದೊಡ್ಡ ಮಟ್ಟದ ಅಕ್ರಮಗಳಿಗೆ ಅವಕಾಶ ನೀಡಿದವರು ಯಾರು ಎಂಬುದನ್ನು ಮೊದಲು ಪ್ರಶ್ನಿಸಬೇಕು ಎಂದು ಅವರು ಹೇಳಿದ್ದಾರೆ.
ಕೆಪಿಎಸ್‌ಸಿಯ ಸಂರಚನೆ, ಸಾಂವಿಧಾನಿಕ ಸ್ಥಾನಮಾನ ಹಾಗೂ ಅದರ ಮಹತ್ವವನ್ನು ತಿಳಿದುಕೊಂಡು ಮಾತನಾಡುವಂತೆ ಶಿವಕುಮಾರ್ ಅವರಿಗೆ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ. ಹೊಲಕ್ಕೆ ಕಳೆ ಬಂದರೆ ಕಳೆ ಕೀಳಬೇಕು, ಹೊಲವನ್ನೇ ನಾಶ ಮಾಡಬಾರದು ಎಂದು ಅವರು ಹೇಳಿದ್ದಾರೆ.
ಕೆಪಿಎಸ್‌ಸಿಯಲ್ಲಿನ ಭ್ರಷ್ಟಾಚಾರದ ಕುರಿತು ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಇದರಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಅಕ್ರಮದಲ್ಲಿ ಭಾಗಿಯಾಗಿರುವ ಹಲವರನ್ನು ಈಗಾಗಲೇ ಗುರುತಿಸಲಾಗಿದ್ದು, ಆಯೋಗವನ್ನೇ ಮುಚ್ಚುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದರು.































































































































