ಭಾಗ – 644
ಭರತೇಶ ಶೆಟ್ಟಿ, ಎಕ್ಕಾರು

ಹೀಗೆ ತಪಸ್ಶಕ್ತಿಯಿಂದ ವಿಶಿಷ್ಟ ಬಲ ಸಂಪಾದಿಸಿ ವಸಿಷ್ಟರನ್ನು ಸೋಲಿಸಬೇಕೆಂದು ಕೌಶಿಕ ಋಷಿಯಂತೆ ಕಾಡು ಸೇರಿ ತಪಸ್ಸನ್ನಾಚರಿಸುವ ಸಮಯ ಒಂದು ಘಟನೆ ನಡೆದು ಹೋಯಿತು. ಈ ಸಂಗತಿಯನ್ನು ವಿಶೇಷ ಎಂದು ಪರಿಗಣಿಸುವಲ್ಲಿ ಕಾರಣ ತ್ರೇತಾ ಯುಗದಲ್ಲಿ ಮರ್ಯಾದಾ ಪುರುಷೋತ್ತಮನಾಗಿ ಮೆರೆದಿದ್ದ ಶ್ರೀರಾಮಚಂದ್ರನ ವಂಶಸ್ಥನಾದ ಅಂದರೆ ಸೂರ್ಯವಂಶದ ಈಗಿನ ಮಹಾರಾಜ ಸೌದಾಸ ಎಂಬವನು ಮೃಗ ಬೇಟೆಗಾಗಿ ಕಾನನ ಸೇರಿದನು. ಮಹಾ ಪರಾಕ್ರಮಿಯೂ, ಧರ್ಮಿಷ್ಟನೂ, ಬಾಹುಬಲದ ಜೊತೆ ಆಚಾರ ಬಲಾನ್ವಿತನೂ ಆದ ಮಹಾರಾಜ ಸೌದಾಸ ಭರ್ಜರಿಯಾಗಿ ಬೇಟೆ ಮುಂದುವರಿಸುತ್ತಾ ಸಾಗುವಾಗ ಸೋದರರಾದ ಇಬ್ಬರು ರಾಕ್ಷಸರು ಎದುರಾದರು. ನರಭಕ್ಷಕರಾದ ಆ ರಕ್ಕಸರು ಸೌದಾಸನನ್ನು ಮುಕ್ಕಿ ಮುಗಿಸಲು ಮುಂದಾದರು. ಆಕ್ರಮಿಸಲು ಬಂದ ರಾಕ್ಷಸರಿಗೂ ಮಹಾರಾಜ ಸೌದಾಸನಿಗೂ ಆಕಸ್ಮಿಕವಾಗಿ ಯುದ್ದವೇರ್ಪಟ್ಟಿತು. ಏಕಕಾಲದಲ್ಲಿ ಎರಡೂ ರಾಕ್ಷಸರ ಜೊತೆ ಹೋರಾಡುವ ಸಂದಿಗ್ಧ ಸ್ಥಿತಿ ರಾಜನದ್ದಾಯಿತು. ರಣನಿಪುಣನೂ, ಚಾಣಾಕ್ಷನೂ ಆದ ಸೌದಾಸ ಸಾಹಸ ಮೆರೆದು ಇಬ್ಬರೂ ರಕ್ಕಸರನ್ನು ಕಂಗೆಡಿಸುವಂತೆ ಶರವರ್ಷಗೈದನು. ರಕ್ಕಸರು ಮಾಯಾವಿಗಳೂ ಪ್ರಬಲರೂ ಆಗಿದ್ದ ಕಾರಣ ತಪ್ಪಿಸಿಕೊಂಡು ಮಾಯಾಬಲದಿಂದ ಯುದ್ದ ಮುಂದುವರಿಸಿದರು. ಹರಸಾಹಸ ಮೆರೆದು ಈರ್ವರು ರಕ್ಕಸರಲ್ಲಿ ಅಣ್ಣನನ್ನು ಸೌದಾಸ ಮಂತ್ರಾಸ್ತ್ರದಿಂದ ಕೊಂದು ಮುಗಿಸಿದನು. ಅಣ್ಣನು ಸತ್ತು ಬಿದ್ದುದನ್ನು ಕಂಡ ತಮ್ಮ ರಾಕ್ಷಸ ಅದೃಶ್ಯನಾಗಿ ತಪ್ಪಿಸಿ ಬದುಕುಳಿದನು. ಹೇಗಾದರೂ ಮಾಡಿ ತನ್ನ ಅಣ್ಣನನ್ನು ಕೊಂದ ಸೌದಾಸನ ಮೇಲೆ ಹಗೆ ತೀರಿಸಬೇಕೆಂದು ಸಮಯಕ್ಕಾಗಿ ಹವಣಿಸ ತೊಡಗಿದನು. ಅರಸ ಸೌದಾಸ ತನ್ನ ದಾರಿ ಮುಕ್ತವಾದಾಗ ಬೇಟೆಯಾಡುತ್ತಾ ಮುಂದೊತ್ತಿ ಸಾಗಿ ಸಂಜೆಯಾಗುತ್ತಿದ್ದಂತೆ ಅರಮನೆ ಸೇರಿದನು.
ಹೀಗಿರಲು ದಿನಗಳೆಯುತ್ತಿದ್ದಂತೆ ಮಹಾರಾಜ ಸೌದಾಸನಿಗೆ ಯಾಗವೊಂದನ್ನು ವಿರಚಿಸಬೇಕು ಎಂಬ ಮನಸ್ಸಾಯಿತು. ಅದಕ್ಕಾಗಿ ಕುಲ ಪುರೋಹಿತರಾದ ಬ್ರಹ್ಮರ್ಷಿ ವಸಿಷ್ಟರನ್ನು ಕರೆಸಿ ಆ ಕುರಿತಾಗಿ ಚರ್ಚಿಸಿ, ಅವರ ನಿರ್ದೇಶನದಂತೆ ಮಹಾಯಾಗಕ್ಕಾಗಿ ಸಕಲ ಸಿದ್ಧತೆಗಳನ್ನೂ ಮಾಡಿಸಿದನು. ಯಾಗಾರಂಭವಾಗಿ ನಿರಂತರವಾಗಿ ಸಾಗುತ್ತಿದೆ. ಒಂದು ದಿನ ಮಧ್ಯಾಹ್ನ ವಸಿಷ್ಟರು ಯಜ್ಞಕ್ರಿಯೆಯ ಒಂದು ಭಾಗವನ್ನು ನೆರವೇರಿಸಿ, ಸ್ನಾನ ಮಾಡುವುದಕ್ಕಾಗಿ ಹೊರಟರು. ಮಿಂದು ಬಂದ ಬಳಿಕ ಊಟ ಮಾಡಿ ನಂತರ ಯಾಗ ಮುಂದುವರಿಯುವುದಕ್ಕಿತ್ತು. ಹೀಗಿರಲು ವಸಿಷ್ಟರು ಸ್ನಾನಕ್ಕೆ ಹೋದ ಸಮಯವನ್ನು ನೋಡಿ ಅಂದು ಕಾಡಿನಲ್ಲಿ ತಪ್ಪಿಸಿಕೊಂಡಿದ್ದ ರಾಕ್ಷಸ ತನ್ನ ಅಣ್ಣನ ಕೊಲೆಯ ಪ್ರತಿಕಾರ ತೀರಿಸಲು ಇದೇ ಸೂಕ್ತ ಅವಕಾಶ ಎಂದು ತೀರ್ಮಾನಿಸಿದನು. ತಕ್ಷಣ ಇಚ್ಚಾರೂಪಧಾರಿ ಮಾಯಾವಿ ರಾಕ್ಷಸ ಮಹರ್ಷಿ ವಸಿಷ್ಟರ ತದ್ರೂಪಿಯಾಗಿ ಮಹಾರಾಜ ಸೌದಾಸನ ಬಳಿಗೆ ಬಂದನು. ರಾಜನಿಗೆ ವಿಸ್ಮಯವಾಯಿತು, ಇಷ್ಟು ಬೇಗ ಸ್ನಾನ ಪೂರೈಸಿ ಬಂದರೇ ಋಷಿವರ್ಯ! ಎಂದು ತರ್ಕಿಸತೊಡಗಿದನು. ಆಗ ಬಂದ ವಸಿಷ್ಟರ ರೂಪದಲ್ಲಿದ್ದ ರಾಕ್ಷಸ “ರಾಜನೇ! ನಾನು ಒಂದು ವಿಚಾರ ನಿನಗೆ ತಿಳಿಸಲು ಮರೆತು ಸ್ನಾನಕ್ಕಾಗಿ ಹೋಗಿದ್ದೆ. ಇಂದು ನಾನು ತಾಮಸ ವಿಧಿಯ ಯಜ್ಞ, ಕ್ಷುದ್ರ ಶಕ್ತಿಗಳಿಗೆ ಹವಿಸ್ಸು ಸಮರ್ಪಿಸಲಿಕ್ಕಿದೆ. ಹಾಗಾಗಿ ನನಗೂ ಮಾಂಸಾಹಾರ ಊಟವನ್ನೇ ಸಿದ್ಧಪಡಿಸು. ಎಂದಿನಂತೆ ಇಂದು ಶಾಖಾಹಾರ ನಾನು ಸೇವಿಸಲಾಗದು. ನಾನು ಸ್ನಾನ ಪೂರೈಸಿ ಬರುತ್ತೇನೆ. ಅಷ್ಟು ಹೊತ್ತಿಗೆ ಮಾಂಸದೂಟ ಸಿದ್ಧವಾಗಿರಲಿ. ಅದನ್ನು ನನಗೆ ಉಣಬಡಿಸಬೇಕು” ಎಂದು ಹೇಳಿ ಸ್ನಾನಕ್ಕೆ ಹೋಗುವವನಂತೆ ಹೊರಟನು. ರಾಜ ಸೌದಾಸನಿಗೆ ಈ ಕಪಟ ಅರಿವಾಗದೆ, ವಸಿಷ್ಟರೇ ಕಾರಣವಿತ್ತು ಹೇಳಿದ ಕಾರಣ ಸತ್ಯವೆಂದೇ ನಂಬಿ ಅಂತೆಯೇ ಭಕ್ಷಯೋಗ್ಯ ಮಾಂಸದಡುಗೆಯನ್ನು ಮಾಡಿಸಿ ಸಿದ್ಧಪಡಿಸಿಟ್ಟನು. ಆ ರಾಕ್ಷಸ ಮತ್ತೆ ಪಾಕಶಾಲೆಗೆ ಬಂದು ವಸಿಷ್ಟರಿಗಾಗಿ ಮಾಡಿಸಿಟ್ಟಿದ್ದ ಮಾಂಸದಡುಗೆಯನ್ನು ತಾನೇ ಉಂಡು, ಅದೇ ತೆರನಾದ ನರಮಾಂಸದಡುಗೆಯನ್ನು ಅಲ್ಲಿ ಇರಿಸಿ ಅಲ್ಲಿಂದ ಮರೆಯಾದನು.ಬ್ರಹ್ಮರ್ಷಿ ವಸಿಷ್ಟರು ಸ್ನಾನಾದಿ ಕರ್ಮಗಳನ್ನು ಪೂರೈಸಿ ಭೋಜನಕ್ಕಾಗಿ ಸಿದ್ಧರಾಗಿ ಕುಳಿತರು. ಯಾಜ್ಞಿಯಾದ ವಸಿಷ್ಟರಿಗೆ ಸ್ವಯಂ ಅರಸ ಸೌದಾಸನೇ ಊಟವನ್ನು ಬಡಿಸುವುದು ಸಂಪ್ರದಾಯ. ಕುತಂತ್ರ ಅರಿಯದ ರಾಜ ಸೌದಾಸ ನರಮಾಂಸದೂಟವನ್ನು ವಸಿಷ್ಟರಿಗೆ ಬಡಿಸಿದನು. ವಸಿಷ್ಟರಿಗೆ ಆಶ್ಚರ್ಯ! “ಅರೆ! ಇದೇನಿದು ನರಮಾಂಸದೂಟವೇ? ಅದೂ ನನ್ನಂತಹ ಬ್ರಾಹ್ಮಣನಿಗೆ? ಈ ರೀತಿಯ ದೌಷ್ಟ್ಯ ಬುದ್ಧಿ ಅರಸನಿಗೆ ಬಂತೇ? ಇಷ್ಟೊಂದು ದುರ್ಬುದ್ದಿಯೇ? ಎಂದೂ ಕೋಪಗೊಳ್ಳದೇ ಇರುವ ವಸಿಷ್ಟರಿಗೆ ಕ್ರೋಧ ಉಕ್ಕೇರಿತು. ಬುದ್ದಿ ಮಸುಕಾಯಿತು. ಅವರೂ ಏನಾಗಿದೆ ಎಂದು ವಿವೇಚಿಸದೆ ಸೌದಾಸನಿಗೆ “ಓರ್ವ ಬ್ರಹ್ಮರ್ಷಿಗೆ ಹಸಿದ ಹೊತ್ತು ನರಮಾಂಸದೂಟ ಉಣ ಬಡಿಸಿದ ಪಾಪ ಕೃತ್ಯದ ಫಲವಾಗಿ ನರಭಕ್ಷಕ ರಕ್ಕಸನಾಗಿ ಹೋಗು” ಎಂದು ಘೋರ ಶಾಪವಿತ್ತರು. ಏನನ್ನೂ ಅರಿಯದ, ಅಪರಾಧವನ್ನೇ ಎಸಗದ ನನಗೆ ಶಾಪವೇ? ನಾನೇನು ತಪ್ಪು ಮಾಡಿದ್ದೇನೆ? ಎಷ್ಟು ಯೋಚನೆ ಮಾಡಿದರೂ ತನ್ನ ದೋಷವೇನೆಂದೇ ಸೌದಾಸನಿಗೆ ತಿಳಿಯಲಿಲ್ಲ. ಅಂದರೆ ನಿಷ್ಕಾರಣವಾಗಿ ನನಗೆ ಶಾಪವಿತ್ತುದು ಗುರುಗಳಿಂದಾದ ಅಪರಾಧ. ಅಥವಾ ನನ್ನ ವರ್ಚಸ್ಸು ವೃದ್ಧಿಯಾಗುತ್ತಿರುವುದು ಇವರಿಗೇನಾದರೂ ಮತ್ಸರ ಉಂಟು ಮಾಡಿತೇ? ಇಲ್ಲವೆಂದಾದರೆ ಯಾವುದೋ ಅನ್ಯ ಕಾರಣ ಇರಿಸಿಕೊಂಡು, ಊಟವನ್ನು ಕೇವಲ ನೆಪವಾಗಿಸಿ ನನಗೆ ಶಾಪ ಇತ್ತಿದ್ದಾರೆ. ಈ ರೀತಿ ನಿರಪರಾಧಿಯಾದ ನನ್ನನ್ನು ಶಪಿಸಿರುವುದು ಯಾವ ವಿಧಾನದಿಂದಲೂ ಧರ್ಮವಲ್ಲ. ಅಪರಾಧಿಯಾದ ಗುರು ವಸಿಷ್ಟರಿಗೆ ಶಿಕ್ಷೆ ನೀಡುವುದು ರಾಜದಂಡಧರನಾದ ನನಗೆ ಧರ್ಮ. ಅವರು ನನಗೆ ಶಾಪವಿತ್ತರಲ್ಲಾ! ನಾನೂ ಶಾಪ ನೀಡಬಲ್ಲಷ್ಟು ಸಮರ್ಥನೇ ಆಗಿದ್ದೇನೆ. ಸಿಟ್ಟುಗೊಂಡ ಸೌದಾಸ ದಂಡ ಕಮಂಡಲದಿಂದ ಜಲವನ್ನು ಬಲ ಅಂಗೈಗೆ ಸುರಿದು ಶಾಪ ವಾಕ್ಯ ನುಡಿಯಲು ಸಿದ್ಧನಾದನು.






























































































































