ಭಾಗ – 642
ಭರತೇಶ್ ಶೆಟ್ಟಿ ,ಎಕ್ಕಾರು

ಕೌಶಿಕನ ಸೈನಿಕರು ಚಾವಟಿ, ದೊಣ್ಣೆಗಳಿಂದ ಸುರಧೇನುವಿಗೆ ಹೊಡೆಯುತ್ತಾ ಬಲಾತ್ಕಾರದಿಂದ ಎಳೆದೊಯ್ಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಹಿಡಿತದಿಂದ ಜಾರಿಕೊಂಡು ಬಂದ ನಂದಿನಿ ಮಹರ್ಷಿ ವಸಿಷ್ಟರ ಮುಂದೆ ನಿಂತಾಗ, ಮುನಿವರ “ಅಮ್ಮಾ ನಿನ್ನ ವೇದನೆ ನನಗೆ ಕಾಣಿಸುತ್ತಿದೆ. ನೋಡುತ್ತಾ ನಿಂತಿರುವೆನಾದರೂ ಯಾಕೆ ನಾನೇನೂ ಮಾಡುತ್ತಿಲ್ಲ ಎಂದು ನೀನು ಭಾವಿಸುತ್ತಿರಬಹುದು. ಯಾರೇನು ಮಾಡಿದರೂ, ಅವರಿಂದ ಏನು ಅಪರಾಧವಾದರೂ ನಾನು ಕುಪಿತನಾಗಲಾರೆ. ಯಾಕೆಂದರೆ ಕ್ಷಮಾ ಗುಣ ನನಗೆ ಭೂಷಣ. ಹಾಗೆಯೆ ಕ್ಷತ್ರಿಯನಾದ ಕೌಶಿಕ ಮಹಾರಾಜನಿಗೆ ಪರರ ಮೇಲೆ ಆಕ್ರಮಿಸುವುದು, ಪರಾಕ್ರಮ ಮೆರೆದಾದರೂ ಬಯಸಿದ್ದನ್ನು ಬಲಪ್ರಯೋಗದಿಂದ ಪಡೆಯುವುದು ಯುಕ್ತ ಮಾರ್ಗ ಆಗಿದೆ” ಎಂದಷ್ಟು ಹೇಳಿ ನಿಂತರು.
ಮುನಿವರನ ಮಾತನ್ನು ಕೇಳಿ ಆರ್ತಳಾದ ಸುರಧೇನು “ಪೂಜ್ಯ ಋಷಿವರ್ಯನೇ! ನಾನು ಸ್ವರ್ಗಲೋಕದಲ್ಲಿದ್ದವಳು. ನಿನ್ನಿಂದ ವಿರಚಿಸಲ್ಪಡುವ ಯಾಗಕ್ಕೆ ಸಹಾಯಿಯಾಗಿ ಕರೆಸಿಕೊಂಡಿರುವೆ. ಹೀಗೆ ನೀನು ಕರೆ ತಂದಿರುವಾಗ ನನ್ನನ್ನು ಮರಳಿ ಸ್ವರ್ಗ ತಲುಪಿಸುವವರೆಗೆ ನಿನಗೆ ಹೊಣೆಗಾರಿಕೆಯಿಲ್ಲವೆ? ಹಾಗಿರುವುದು ಹೌದಾದರೆ ನನ್ನ ರಕ್ಷಣೆಯನ್ನು ಮಾಡುವ ಬದಲಾಗಿ ಕ್ಷಮೆಯ ಮಾತನ್ನೇಕೆ ಆಡುತ್ತಿರುವೆ?” ಎಂದು ಪ್ರಶ್ನಿಸಿದಳು. ಆಗ ವಸಿಷ್ಟರು “ಅಮ್ಮಾ! ನಾನು ನಿನ್ನನ್ನು ಆಶ್ರಮದಿಂದ ಹೊರಗೆ ಕಳುಹಿಸಿಲ್ಲ. ಅಥವಾ ಈತನಿಗೆ ಕರೆದೊಯ್ಯುವ ಅನುಮತಿಯನ್ನು ನೀಡಿಲ್ಲ. ನಾನೇದರೂ ನಿನ್ನನ್ನು ಪರಿತ್ಯಾಗ ಮಾಡಿದ್ದರೆ ಅಪರಾಧಿಯಾಗುತ್ತಿದ್ದೆ. ಆದರೆ ಈಗ ಆಗುತ್ತಿರುವುದು ಬಲವಂತದ ಅಪಹರಣ. ಹೀಗಿರುವಾಗ ನಾನು ನಿನಗೆ ಇಲ್ಲಿಂದ ಹೊರ ಹೋಗುವುದಕ್ಕಾಗಲಿ, ಅಥವಾ ಕೌಶಿಕ ರಾಜನಿಗೆ ನಿನ್ನನ್ನು ಕರೆದೊಯ್ಯುವುದಕ್ಕಾಗಲಿ ಸಮ್ಮತಿ ನೀಡಿಲ್ಲ. ಇನ್ನು ಉಳಿದ ವಿಚಾರ ನಿನ್ನ ನಿರ್ಣಯಕ್ಕೆ ಬಿಟ್ಟಿರುವುದು. ನಿನಗೆ ಇಚ್ಚೆಯಿದ್ದರೆ ಮಾತ್ರ ನೀನು ಹೋಗಬಹುದು. ಹಾಗಿಲ್ಲದಿದ್ದರೆ ನೀನೇನು ಸಾಮಾನ್ಯಳೆ? ಯಾವುದನ್ನೂ ನಿಯಂತ್ರಿಸಬಲ್ಲ ಸಾಮರ್ಥ್ಯವಂತಳಲ್ಲವೆ! ನಾನು ರಕ್ಷಿಸಿ ನೀನು ಬಂಧ ಮುಕ್ತಳಾಗಬೇಕಾದ ಅಗತ್ಯವಿಲ್ಲ. ಸ್ವತಂತ್ರಳಾಗಿ ನೀನು ಮುಂದಿನ ತೀರ್ಮಾನ ಕೈಗೊಂಡು ಸ್ವರಕ್ಷಣೆಯ ಮಾರ್ಗದಲ್ಲಿ ನಡೆದುಕೊಳ್ಳಲು ಸ್ವತಂತ್ರಳಾಗಿರುವೆ” ಎಂದು ನಿವೇದಿಸಿಕೊಂಡರು.
ವಸಿಷ್ಟರ ಮಾತು ನಂದಿನಿಗೆ ಸ್ಪಷ್ಟವಾಗಿ ಅರ್ಥವಾಯಿತೊ ಏನೋ. ವಸಿಷ್ಟರನ್ನು ಉದ್ದೇಶಿಸಿ “ಹೇ ಬ್ರಹ್ಮರ್ಷಿಯೇ! ನನ್ನ ಮೇಲೆ ಯಾಗ ಸಂಪನ್ನವಾಗುವವರೆಗೆ ನಿಮಗೆ ಅಧಿಕಾರವಿದೆ. ನಿಮ್ಮಿಂದ ಪರಿತ್ಯಕ್ತಳಾಗಿರದ ನನ್ನನ್ನು ಈ ಕ್ಷತ್ರಿಯ ರಾಜ ಬಲಾತ್ಕಾರದಿಂದ ಒಯ್ಯಲಾಗದು” ಎಂದು ನುಡಿದಳು. ನಂದಿನಿಯ ಮಾತಿನ ಸತ್ವವರಿತ ವಸಿಷ್ಟರು “ಹೇ ಮಾತೇ! ಬಲಾತ್ಕಾರದಿಂದ ನಿನ್ನನ್ನು ಕರೆದೊಯ್ಯುವ ಪ್ರಯತ್ನವನ್ನು ರಾಜ ಮಾಡುತ್ತಿದ್ದಾನೆ. ನೀನು ಈಗ ಹೇಳಿದಂತೆ ಆತ ನಿನ್ನನ್ನು ಕರೆದೊಯ್ಯಲಾಗದು ಎಂಬ ಮಾತು ಸತ್ಯ ಹೌದಾದರೆ, ನೀನು ಎಲ್ಲಿಗೂ ಹೋಗದೆ ಇಲ್ಲಿಯ ಉಳಿದು ಯಾಗವನ್ನು ಸಂಪನ್ನಗೊಳಿಸಿಕೊಡು ತಾಯಿ. ಎಂತಹ ತೊಡಕು ಎದುರಾದರೂ ನಿವಾರಿಸಿ, ನೀನೆಲ್ಲಿಗೂ ಹೋಗದೆ ಇಲ್ಲಿಯೆ ನಿಲ್ಲುವವಳಾಗು” ಎಂದು ಕೇಳಿಕೊಂಡರು.
ಬ್ರಹ್ಮರ್ಷಿ ವಸಿಷ್ಟರ ಮಾತನ್ನು ಆದೇಶವಾಗಿ ಸ್ವೀಕರಿಸಿದ ದೇವಧೇನು ತಲೆಯನ್ನು ಮೇಲಕ್ಕೆತ್ತಿ, ಕಂಗಳಿಂದ ಗಗನವನ್ನೊಮ್ಮೆ ದಿಟ್ಟಿಸಿ ಮುಂದಿನ ಎರಡು ಕಾಲುಗಳನ್ನೆತ್ತಿ ಕುದುರೆಗಳು ಕೆನೆಯುವಂತೆ ಜಿಗಿದಳು. ಕಾಮಿಸಿದ್ದನ್ನು ಕರುಣಿಸಬಲ್ಲ ಸಾಮರ್ಥ್ಯವುಳ್ಳ ಕಾಮಧೇನುವಲ್ಲವೆ? ತಾನು ಬಯಸಿದ್ದನ್ನು ಪಡೆಯಲಾರಳೆ? ಭೀಕರ ಸ್ವರದಿಂದ ಆರ್ಭಟಿಸುವಂತೆ “ಅಂಬಾ” ಎಂದು ವಿಕಾರವಾಗಿ ಘರ್ಜಿಸಿ ಭಯಂಕರವಾದ ರೂಪವನ್ನು ತಳೆದು ಎತ್ತರಕ್ಕೆ ಬೆಳೆದು ನಿಂತಳು. ತನಗೆ ಹೊಡೆಯುತ್ತಿದ್ದ ಸೈನಿಕರತ್ತ ತಿರುಗಿ ಅಟ್ಟಾಡಿಸಿ ಹಾಯ್ದು, ಗೊರಸುಗಳಿಂದ ತುಳಿದು, ಚೂಪಾದ ಕೊಂಬುಗಳಿಂದ ತಿವಿದು ಬಂಧ ಮುಕ್ತಳಾಗಿ ನಿಂತಳು. ಹೀಗಾದುದನ್ನು ನೋಡುತ್ತಿದ್ದಂತೆ ಮಹಾ ವಿಕ್ರಮಿಯಾದ ಕೌಶಿಕ ಮಹಾರಾಜನಿಗೂ ಒಮ್ಮೆ ದಿಗ್ಭ್ರಮೆಯಾಯಿತು. ಕ್ಷಾತ್ರ ಧರ್ಮಾನುಯಾಯಿಯಾದ ಮಹಾರಾಜ ಅಂಜದೆ ಯುದ್ಧ ಸನ್ನದ್ಧನಾಗಿ ಧನುರ್ಬಾಣಗಳನ್ನು ಧಾರಣೆ ಮಾಡಿ ನಂದಿನಿಯನ್ನು ಎದುರಿಸಲು ಮುಂದಾದನು. ಕೌಶಿಕ ಸಾಮಾನ್ಯನಲ್ಲ. ಅಸಮಾನ್ಯ ಪರಾಕ್ರಮಿಯೂ, ಅತುಲ ವಿಕ್ರಮಿ, ಅಜೇಯನಾಗಿ ಮೆರೆಯುತ್ತಿರುವ ಮಹಾ ವೀರ. ಶತ್ರು ರಾಜರ ಎದೆ ಕೌಶಿಕನ ಹೆಸರು ಕೇಳಿ ನಡುಗಿ ನಲುಗಿ ಹೋಗುವಷ್ಟು ಅತಿಶಯದ ಬಾಹುಬಲ ಹೊಂದಿರುವ ಮಹಾನ್ ಶೂರ ಕೌಶಿಕ ಮಹಾರಾಜ. ಆತ ಈಗ ಆಯುಧಗ್ರಹಣ ಮಾಡಿ ರಣಕ್ಷೇತ್ರಕ್ಕೆ ಸಮರಸಿದ್ಧನಾಗಿ ಬಂದಂತೆ ಮುನ್ನುಗ್ಗಿದನು.
ಮುಂದುವರಿಯುವುದು…






























































































































