
ಬೆಂಗಳೂರು: ಸ್ಯಾಂಡಲ್‌ವುಡ್‌ನ ಮೋಹಕ ತಾರೆ ರಮ್ಯ ಸದ್ಯ ಸಿನಿಮಾ ರಂಗದಲ್ಲಿ ಸಕ್ರಿಯವಾಗಿಲ್ಲ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಸುದ್ದಿಯಾಗುತ್ತಿರುತ್ತಾರೆ.
ಚಿತ್ರರಂಗದಿಂದ ದೂರವಿದ್ದರೂ ರಮ್ಯ ತಮ್ಮ ಆಪ್ತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ರಮ್ಯ ಅವರಿಗೆ ಸಂಬಂಧಿಸಿದಂತೆ ಅಭಿಮಾನಿಗಳನ್ನು ಕಾಡುವ ಪ್ರಮುಖ ಪ್ರಶ್ನೆ ಎಂದರೆ, ಅವರು ಯಾವಾಗ ಮದುವೆಯಾಗಲಿದ್ದಾರೆ ಎಂಬುದು.
43 ವರ್ಷದ ರಮ್ಯ ಅವರಿಗೆ ಇತ್ತೀಚೆಗೆ ಮದುವೆ ಕುರಿತು ಪ್ರಶ್ನೆಯೊಂದು ಎದುರಾಗಿದ್ದು, ಅದಕ್ಕೆ ನೀಡಿರುವ ಉತ್ತರ ಇದೀಗ ವೈರಲ್ ಆಗಿದೆ. ಪತ್ರಕರ್ತೆ ನಬಿಲಾ ಜಮಾಲ್ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮ್ಯ, ಮದುವೆ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
‘ಮದುವೆ ಆಗುವುದು ಅಷ್ಟು ಮುಖ್ಯವೇ? ಖಂಡಿತ ಇಲ್ಲ. ನಾನು ಯಾರೆಂಬುದು ಮದುವೆಯಿಂದ ನಿರ್ಧಾರವಾಗುವುದಿಲ್ಲ. ಮದುವೆಯಾಗದೇ ಇದ್ದರೂ ಖುಷಿಯಾಗಿರಬಹುದು. ಖುಷಿಯಾಗಿರುವುದೇ ಎಲ್ಲಕ್ಕಿಂತ ಮುಖ್ಯ. ಜೀವನದಲ್ಲಿ ಏನು ಬೇಕು ಎಂಬುದನ್ನು ನೀವೇ ಆಯ್ಕೆ ಮಾಡಿಕೊಳ್ಳಬೇಕು’ ಎಂದು ರಮ್ಯ ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಎಲ್ಲ ಮಹಿಳೆಯರಿಗೂ ಈ ಮಾತು ಅನ್ವಯವಾಗದಿರಬಹುದು. ಸ್ನೇಹಿತರಂತಿರುವ ಸಂಗಾತಿ ಸಿಕ್ಕರೆ ಜೀವನವಿಡೀ ಸಂತೋಷವಾಗಿರಬಹುದು ಎಂದಿದ್ದಾರೆ.
ಮನುಷ್ಯರಲ್ಲಿ ನಿರಂತರ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ ಮತ್ತು ಅಲ್ಲಿಂದಲೇ ಸಮಸ್ಯೆಗಳು ಆರಂಭವಾಗಬಹುದು. ಆದರೆ ಉತ್ತಮ ಸ್ನೇಹಿತರಾಗಿದ್ದು, ಇಬ್ಬರ ಮೌಲ್ಯಗಳೂ ಒಂದೇ ರೀತಿಯಲ್ಲಿದ್ದರೆ ಮದುವೆ ಉತ್ತಮ ಎನಿಸುತ್ತದೆ. ಮದುವೆಯಾಗಿ ಖುಷಿಯಾಗಿರುವವರು ತಮ್ಮ ಮಾತನ್ನು ಒಪ್ಪಬಹುದು ಎಂದು ರಮ್ಯ ಅಭಿಪ್ರಾಯಪಟ್ಟಿದ್ದಾರೆ.
ತಮಗೆ ಇನ್ನೂ ಅಂತಹ ವ್ಯಕ್ತಿ ಸಿಕ್ಕಿಲ್ಲ. ಸದ್ಯ ಅದರ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿಲ್ಲ. ಕೆಲಸದಲ್ಲಿ ಬ್ಯುಸಿಯಾಗಿದ್ದು, ಸಂಬಂಧಕ್ಕೆ ಸಮಯ ನೀಡುವುದು ಅಗತ್ಯ ಎಂದು ರಮ್ಯ ಹೇಳಿದ್ದಾರೆ.
ಇದೀಗ ರಮ್ಯ ಅವರ ಅಭಿಮಾನಿಗಳು ಅವರು ಶೀಘ್ರದಲ್ಲೇ ಮದುವೆ ಕುರಿತು ಸಿಹಿಸುದ್ದಿ ನೀಡಲಿ ಎಂದು ಆಶಿಸುತ್ತಿದ್ದಾರೆ.




































