ಭಾಗ – 631
ಭರತೇಶ ಶೆಟ್ಟಿ, ಎಕ್ಕಾರು

ಹಸ್ತಿನಾವತಿಯತ್ತ ಹೊರಟ ಪಾಂಡವ ಸೇನೆ ಸುದೀರ್ಘ ಪ್ರಯಾಣದ ಬಳಿಕ ಪುರದ ಸನಿಹಕ್ಕೆ ಬಂದು ಸೇರಿದರು. ಹಸ್ತಿನಾಪುರಕ್ಕಿಂತ ಒಂದು ಯೋಜನ ದೂರದಲ್ಲಿ ಬೀಡು ಬಿಟ್ಟರು. ಸಂಪ್ರದಾಯ ಪ್ರಕಾರ ದಿಗ್ವಿಜಯಕ್ಕೆ ಹೊರಟ ಸೇನೆ ಜೈತ್ರಯಾತ್ರೆ ಪೂರೈಸಿ ಹಿಂದಿರುಗುವಾಗ ನೇರವಾಗಿ ಪುರ ಪ್ರವೇಶ ಮಾಡುವಂತಿಲ್ಲ. ಸುಮುಹೂರ್ತ ನೋಡಿ, ಅದ್ದೂರಿಯ ಸ್ವಾಗತದೊಂದಿಗೆ ಕಟ್ಟಳೆಗಳನ್ನು ಅನುಸರಿಸಿ ಶುದ್ಧಿ, ದಿವ್ಯ ಮಂತ್ರಾಕ್ಷತೆಯಾದಿ ವಿಧಿಗಳನ್ನು ಅನುಸರಿಸಿದ ನಂತರ ಯಾಗಶಾಲೆ ಪ್ರವೇಶಕ್ಕೆ ಅವಕಾಶ. ಶ್ರೀಕೃಷ್ಣನು ಈ ತನಕ ಯುದ್ಧಕರ್ಮ ನಿರತನಾಗಿದ್ದು, ಸದಾ ಪ್ರಯಾಣದಿಂದ ಪ್ರಯಾಸಕ್ಕೊಳಗಾಗಿದ್ದ ರಾಜಾಧಿರಾಜರು ಎಲ್ಲರಿಗೂ ವಂದಿಸಿದನು. ಬಳಿಕ ದಿಗ್ವಿಜಯದ ಶುಭ ವಾರ್ತೆಯನ್ನು ಮಹಾರಾಜ ಧರ್ಮರಾಯನಿಗೆ ತಿಳಿಸಲು ಪುರ ಪ್ರವೇಶ ಮಾಡಿದನು.
ಶ್ರೀಕೃಷ್ಣ ಪರಮಾತ್ಮ ಸರ್ವಾಂತರ್ಯಾಮಿಯೂ, ಸರ್ವಜ್ಞನೂ, ಸಂಕಲ್ಪ ಮಾತ್ರದಿಂದಲೆ ಘಟಿತಾಘಟಿತ ಸಂಗತಿಗಳನ್ನು ನಿಯಂತ್ರಿಸಬಲ್ಲವನು ಆಗಿದ್ದರೂ ಸಂಪ್ರದಾಯ ಮುರಿಯದೆ ಓಲೆದೂತನಂತೆ ಯಾಗಶಾಲೆಗೆ ವಾರ್ತೆ ಮುಟ್ಟಿಸಲು ಹೊರಟಿದ್ದಾನೆ. ಭಗವಂತನ ವ್ಯಾಖ್ಯಾನ ಎಷ್ಟು ಆದರ್ಶವಾಗಿದೆ ಅಲ್ಲವೇ! ಭಕ್ತವತ್ಸಲ, ಭಕ್ತಾಧೀನ, ಭಕ್ತರದಾಸ ಎಂದೆಲ್ಲಾ ಕರೆಸಿಕೊಳ್ಳುವ ಪರಮಾತ್ಮ ಕೃತಿಯಲ್ಲೂ ತನ್ನ ಭಕ್ತರ ಸೇವಕನಂತೆ ಸೇವಾ ನಿರತನಾಗಿದ್ದಾನೆ. ಪುರದ ಹೊರಭಾಗದಿಂದ ಹೊರಟವನು ನೇರವಾಗಿ ಪರಮ ಪವಿತ್ರವಾದ ಗಂಗಾನದಿಯ ತಟದಲ್ಲಿ ನಿರ್ಮಿಸಿರುವ ಅತ್ಯಂತ ಶೋಭಾಯಮಾನವಾದ ಯಾಗ ಶಾಲೆ ಸೇರಿದನು. ಅಶ್ವಮೇಧದ ಯಾಗ ಮಂಟಪ ಋಷಿ ಮಂಡಲದಂತೆ ಗೋಚರಿಸುತ್ತಿದೆ. ವ್ಯಾಸರು, ಧೌಮ್ಯರು, ಅನೇಕ ಮಹಾನ್ ಋಷಿಗಳು, ವಿಪ್ರರು ಸೇರಿ ಯಾಗ ನಡೆಯುತ್ತಿದೆ. ಮಹಾರಾಜ ಧರ್ಮರಾಯ ರಾಣಿ ದ್ರೌಪದಿ ಸಹಿತನಾಗಿ ಅಧ್ವರ ದೀಕ್ಷಿತನಾಗಿದ್ದು ಮಧ್ಯದಲ್ಲಿ ಕುಳಿತಿದ್ದಾರೆ. ನೆಲದ ಮೇಲೆ ದರ್ಬೆಯನ್ನು ಹಾಸಿ ರಾಜ ರಾಣಿ ಮಂಡಿತರಾಗಿದ್ದಾರೆ. ಶ್ರೀಕೃಷ್ಣನ ಆಗಮನವಾದುದನ್ನು ಕಂಡು ಋಷಿಸ್ತೋಮ ಎದ್ದು ನಿಂತು ಭಗವಂತನಿಗೆ ವಂದಿಸಿ ಗೌರವ ಸಲ್ಲಿಸಿದರು. ಮಹಾಸ್ತೋಮದ ವಂದನೆಯನ್ನು ಸ್ವೀಕರಿಸಿ ಕೃಷ್ಣ ಪರಮಾತ್ಮನೂ ಅನುಗ್ರಹಕಾರಕನಾಗಿ ಪ್ರತಿವಂದನೆ ಮಾಡಿದನು. ಬಳಿಕ ನೇರವಾಗಿ ಯಾಗ ದೀಕ್ಷಾಬದ್ಧನಾಗಿ ಕುಳಿತಿದ್ದ ಧರ್ಮರಾಜನ ಬಳಿ ಬಂದು ಯೋಗಕ್ಷೇಮ, ಯಾಗ ಸಾಗುತ್ತಿರುವ ವಿಚಾರಗಳ ಬಗ್ಗೆ ಚರ್ಚಿಸಿದರು. ಸಂವತ್ಸರ ಕಾಲ ದಿಗ್ವಿಜಯ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿ ಪುರ ಪ್ರವೇಶಕ್ಕೆ ಸಿದ್ಧವಾಗಿ ನಿಂತಿರುವ ಪಾಂಡವ ಸೇನೆಯ ಶುಭ ಸಮಾಚಾರವನ್ನು ತಿಳಿಸಿದನು. ಯಾಗಶಾಲೆಯಲ್ಲಿದ್ದ ಎಲ್ಲರೂ ಜಯಘೋಷ ಕೂಗಿ ಸಂಭ್ರಮಿಸಿದರು. ಕೃಷ್ಣನು ಪೂಜನೀಯರು, ಹಿರಿಯರು, ಆತ್ಮೀಯರು ಹೀಗೆ ಎಲ್ಲ ಬಂಧು ಬಾಂಧವರನ್ನೂ ಮಾತನಾಡಿಸಿ ಕುಶಲೋಪರಿ ವಿಚಾರ ವಿನಿಮಯ ಮಾಡಿಕೊಂಡನು. ಈಗ ಯಾಗಶಾಲೆಯಲ್ಲಿ ದಿಗ್ವಿಜಯ ಮುಗಿಸಿ ಬಂದ ಪಾಂಡವ ಸೇನೆಯ ಗುಣಗಾನ, ಸಂಭ್ರಮ ಸಡಗರ ತುಂಬಿ ಹೋಗಿದೆ. ವ್ಯಾಸರು, ಧೌಮ್ಯರ ಜೊತೆ ವಿಮರ್ಶಿಸಿ ಶುಭ ದಿವಸ, ಮುಹೂರ್ತ ಗೊತ್ತು ಮಾಡಿ ಸರ್ವತ್ರ ವಿಜಯಿಯಾಗಿ ಬಂದಿರುವ ಧನುರ್ಧರ ಧನಂಜಯನನ್ನು ಸ್ವಾಗತಿಸುವ ಸಕಲ ಸಿದ್ಧತೆಗಳು ಆರಂಭವಾದವು. ಈ ಬಗ್ಗೆ ಗಡಿ ಪ್ರದೇಶದ ಹೊರಭಾಗದಲ್ಲಿ ತಂಗಿರುವ ಪಾಂಡವ ಸೇನೆಗೂ ವರ್ತಮಾನ ತಿಳಿಸಬೇಕಲ್ಲ. ಶ್ರೀಕೃಷ್ಣನ ಸಾರಥಿ ದಾರುಕನನ್ನು ದೂತನಾಗಿ ಕಳುಹಿಸಿ ಯಾಗಶಾಲಾ ಪ್ರವೇಶಕ್ಕೆ ನಿಗದಿಯಾದ ಶುಭದಿನ, ಮುಹೂರ್ತದ ಕುರಿತಾಗಿ ಮತ್ತು ಇತರ ಸುದ್ಧಿಗಳು, ಹೇಳಿ ಬರಬೇಕಾದ ಇನ್ನಿತರ ಸಮಾಚಾರಗಳನ್ನೆಲ್ಲಾ ತಿಳಿಸಿಬರಲು ಕಳುಹಿಸಿದರು. ದಿಗ್ವಿಜಯಿಯಾಗಿ ಬಂದ ಪಾಂಡವ ಸೇನೆಯ ಸ್ವಾಗತಕ್ಕೆ ಭರದ ಸಿದ್ಧತೆಗಳು ನಡೆಯತೊಡಗಿದವು.
ಮುಂದುವರಿಯುವುದು…






















































































