ಭಾಗ – 623
ಭರತೇಶ ಶೆಟ್ಟಿ, ಎಕ್ಕಾರು

ತೀರಾ ವಿಭಿನ್ನವಾದ ಲೋಕದಲ್ಲಿ ನಾವು ಇಳಿಸಲ್ಪಟ್ಟಿದ್ದೇವೆ. ನಮ್ಮ ಬಳಗದಲ್ಲಿ ಕೋಟಿಗಟ್ಟಲೆ ಮುಖಗಳುಳ್ಳ ಬ್ರಹ್ಮರು ಇದ್ದಾರೆ. ಒಬ್ಬರಿಂದ ಒಬ್ಬರು ಅಪರಿಮಿತ ವ್ಯೋಮ ವ್ಯಾಪ್ತಿಯಲ್ಲಿ ಶಿರಗಳನ್ನು ಹರಡಿ ನಿಂತಿದ್ದಾರೆ. ಆದರೂ ಈ ಕ್ಷೇತ್ರದಲ್ಲಿ ನಾವು ನಗಣ್ಯರಾಗುವಷ್ಟು ಹೊಸ ವಿಶೇಷಗಳನ್ನು ಕಾಣುತ್ತಿದ್ದೇವೆ. ಶುಭ್ರವಾದ ಹಾಲಿನಂತೆ ಬಿಳಿವರ್ಣದ ನೀರು ತುಂಬಿರುವ ಸಾಗರ. ನೀರಿನಲ್ಲಿ ಅಗಣಿತವೆಂದು ಹೇಳಬಹುದಾದಷ್ಟು ಉರುಟು ಉರುಟಾದ ಚೆಂಡುಗಳು ತೇಲುತ್ತಾ ಚಲಿಸುತ್ತಿವೆ. ಈ ಅಮಿತವೂ ಗಣಿಸಲಾಗಷ್ಟು ಚೆಂಡುಗಳ ಮಧ್ಯೆ ಅತ್ಯಂತ ತೇಜಸ್ವಿನಿಯೂ, ವರ್ಚಸ್ವಿನಿಯೂ, ಪ್ರಭಾವತಿಯೂ ಆಗಿರುವ ಸ್ತ್ರೀಯೋರ್ವಳು ಕುಳಿತಿದ್ದಾಳೆ. ಅವಳ ಮೊಣಕಾಲಿನವರೆಗೆ ಜಲಾವೃತವಾಗಿದೆ. ಕೈಯಲ್ಲಿ ಯಾವುದೊ ಒಂದು ಕೋಲಿನಂತಹ ಆಯುಧವನ್ನು ಧಾರಣೆ ಮಾಡಿದ್ದಾಳೆ. ನೀರಿನಲ್ಲಿ ತೇಲುತ್ತಾ ಚಲಿಸುತ್ತಿರುವ ಈ ಚೆಂಡುಗಳನ್ನು ಅತ್ತಿತ್ತ ದೂಡುತ್ತಾ ಏನೋ ವಿಶಿಷ್ಟವಾದ ಆಟವಾಡುವಂತೆ ಕಾಣಿಸುತ್ತಿದ್ದಾಳೆ. ನನ್ನ ಜೊತೆಗಿರುವ ಸರ್ವ ಬ್ರಹ್ಮರೂ ವಿಜ್ಞಾನಿಗಳು ಅಂದರೆ ವಿಶೇಷ ಜ್ಞಾನಿಗಳು ಆದರೂ ಇದು ಯಾವ ಲೋಕ, ಇವಳ್ಯಾರು, ಏನು ಮಾಡುತ್ತಿದ್ದಾಳೆ! ಎಂಬ ವಿಚಾರದಲ್ಲಿ ಏನೇನೂ ಅರಿಯದೆ ಆಲೋಚನೆಯಲ್ಲಿ ಮಗ್ನರಾಗಿದ್ದಾರೆ. ನಾವು ನೋಡುತ್ತಾ ತರ್ಕಿಸಿದರೂ ಅರ್ಥವಾಗುತ್ತಿಲ್ಲ. ಆಕೆ ಆ ಚೆಂಡುಗಳನ್ನು ತನ್ನಿಂದ ಎಷ್ಟು ದೂರಕ್ಕೆ ತಳ್ಳುತ್ತಾಳೋ.. ಅಷ್ಟೇ ವೇಗವಾಗಿ ಅವುಗಳು ಮರಳಿ ಆಕೆಯತ್ತ ತೇಲಿ ಬರುತ್ತಿವೆ. ಮತ್ತೂ ನಾವು ಗಮನವಿಟ್ಟು ನೋಡಿದಾಗ ಆಕೆ ಹೇಗೆ ಹೇಗೆಯೊ ಮನ ಬಂದಂತೆ ಆ ಚೆಂಡಿನಾಕೃತಿಗಳನ್ನು ತಳ್ಳುತ್ತಿರಲಿಲ್ಲ. ಆಕೆ ತಳ್ಳುವ ಚೆಂಡುಗಳು ಒಂದಕ್ಕೊಂದು ತಾಗದಂತೆಯೂ, ತನ್ನಿಂದ ದೂರ ಹೋಗುವಂತೆಯೂ ಒಂದು ವ್ಯವಸ್ಥಿತವಾದ ಕ್ರಮದಲ್ಲಿ ಅವುಗಳನ್ನು ದೂಡುತ್ತಿದ್ದಳು. ಹೀಗೆ ನಾವೆಲ್ಲರೂ ಅಲ್ಲಿಯೆ ಅನತಿ ದೂರದಲ್ಲಿ ನಿಂತು ತುಸು ಹೊತ್ತು ನೋಡುತ್ತಾ ಇರುವಾಗ ಆಕೆ ನಾವಷ್ಟು ಮಂದಿ ಅಲ್ಲಿ ನಿಂತಿರುವುದನ್ನು ಗಮನಿಸಿದಳು. ತಾನು ನಿರತವಾಗಿದ್ದ ಚೆಂಡುಗಳನ್ನು ದೂಡುವ ಕಾಯಕವನ್ನು ಮಾಡುತ್ತಾ “ಹೋ! ನೀವೆಲ್ಲಾ ಇಲ್ಲಿಯವರೆಗೂ ಬಂದು ಬಿಟ್ಟಿರಾ? ಆಗಲಿ” ಎಂದು ಹೇಳಿ ನಸು ನಕ್ಕಳು. ಆ ನಗು ಅಂತಿಂತಹ ನಗುವಾಗಿರಲಿಲ್ಲ. ಆಕೆಯ ಮುಗುಳ್ನಗುವಿನ ಕಾಂತಿಯಿಂದ ನಮ್ಮೆಲ್ಲರ ಕಣ್ಣುಗಳು ಕೋರೈಸಿದವು. ಅರೆ ಕ್ಷಣ ನಮಗ್ಯಾರಿಗೂ ಏನಾಯಿತು ಎಂದು ಅರಿಯದಾಗದೆ ಕಣ್ಮುಚ್ಚುವಂತೆ ಮಾಡಿತು. ಹೇಗೊ ಸಾವರಿಸಿಕೊಂಡು “ಅಮ್ಮಾ ತಾಯಿ ನಿನಗೆ ಪ್ರಣಾಮಗಳು. ನಮ್ಮ ಮನದಲ್ಲಿ ನಿನ್ನ ಬಗ್ಗೆ ಬಹಳಷ್ಟು ಜಿಜ್ಞಾಸೆಗಳು ಮೂಡಿವೆ. ನಾವೆಲ್ಲರೂ ಬಹಳಷ್ಟು ವಿಚಾರಗಳನ್ನು ತಿಳಿದವರಾದರೂ, ನಿನ್ನನ್ನು ತಿಳಿಯದವರಾಗಿದ್ದೇವೆ. ಅಮ್ಮಾ ಕೃಪೆದೋರಿ ನೀನು ಯಾರೆಂದು ತಿಳಿಸುವೆಯಾ?” ಎಂದು ಎಲ್ಲರೂ ಕೈ ಮುಗಿದು ಶಿರಬಾಗಿ ಬೇಡಿಕೊಂಡೆವು.
ಆಗ ಆ ಮಹಾಮಾತೆ “ಹೌದೇ! ನಿಮ್ಮಲ್ಲಿ ಯಾರೂ ನಾನ್ಯಾರೆಂದು ತಿಳಿದಿಲ್ಲವೆ? ಅಥವಾ ತಿಳಿಯುವ ಪ್ರಯತ್ನ ಮಾಡಿಲ್ಲವೆ? ನಿಮ್ಮೆಲ್ಲರನ್ನೂ ಕಾಣುವಾಗ ನನಗೆ ಅಯ್ಯೋ ಎಂದೆನಿಸುತ್ತಿದೆ. ನಿಮ್ಮ ಜೊತೆಗಿರುವ ಆ ಬಕದಾಲ್ಭ್ಯನು ಆತನ ಬಳಿ ಬಂದ ಚತುರ್ಮುಖನಲ್ಲಿ ‘ನಿನ್ನಂತಹವರನ್ನು ಎಷ್ಟೋ ನೋಡಿದ್ದೇನೆ’ ಎಂದಿದ್ದನಲ್ಲವೆ? ಆ ಚತುರ್ಮುಖನೂ ವಿವೇಚಿಸದೆ ತಾನೇ ಅಧಿಕನು, ಸೃಷ್ಟಿಕರ್ತನು ಎಂಬ ಭಾವದಿಂದ ‘ಏನು ಇದೆಯೊ ಅದೆಲ್ಲವೂ ನನ್ನ ಸೃಷ್ಟಿ. ನಾನರಿಯದ್ದು ಏನೂ ಇಲ್ಲ. ಹಾಗೇನಾದರೂ ನೀನು ನೋಡಿದ್ದು ಹೌದಾಗಿದ್ದರೆ ತೋರಿಸು’ ಎಂದು ಸವಾಲೆಸೆದಿದ್ದನಲ್ಲವೆ? ಮೂಲದಲ್ಲಿ ಗೊಂದಲವಿದೆ. ನೀವಿಷ್ಟೂ ಮಂದಿಗೂ ಅಂತಹ ಭಾವವಿತ್ತು. ನಾನೇ ಶ್ರೇಷ್ಟನು. ನಾನೇ ಅಧಿಕನೂ. ನನಗೆಲ್ಲವೂ ತಿಳಿದಿದೆ. ನನಗರಿಯದ್ದು ಏನೂ ಇಲ್ಲ ಎಂಬುವುದೇ ತುಂಬಿ ಹೋಗಿತ್ತು. ತೋರಿಸು ಎಂದು ಪಂಥಾಹ್ವಾನ ನೀಡಿದ ಚತುರ್ಮುಖನಿಗೂ ನೋಡುವಂತಹುದು ಏನು ಇದೆ ಎಂಬ ಕನಿಷ್ಠ ಕಲ್ಪನೆಯೂ ಇರಲಿಲ್ಲ. ಈ ಸರಪಳಿ ಮುಂದುವರಿದು ಎಷ್ಟು ಮುಂದೆ ಹೋದರೂ ಅಧಿಕರು ಕಾಣ ಸಿಕ್ಕರೂ ವ್ಯತ್ಯಾಸವಾಗಲಿಲ್ಲ. ಅಂದರೆ ಮೊದಲಿನವನಿಗೆ ತನಗಿಂತಲೂ ಅಧಿಕವಾದದ್ದು ಇದೆ. ನಾನು ಕಾಣದ್ದೂ ಇದೆ ಎಂಬ ಜ್ಞಾನೋದಯವಾಯಿತು ಹೊರತು, ಯಾರನ್ನು ಮೊದಲ ಸಲ ನೋಡಿದಿರೊ ಆತನಿಗೆ ಇವರೆಲ್ಲರಿಗಿಂತ ತಾನೇ ಅಧಿಕ ಎಂಬ ಭಾವ ಉಳಿಯುತ್ತಾ ಹೋಯಿತಲ್ಲವೆ? ರೂಪ ಸ್ವರೂಪದಲ್ಲಿ ಒಂಬರಿಗಿಂತ ಒಬ್ಬರು ಭಿನ್ನರಾಗಿದ್ದೀರಿ ಹೊರತು ನಿಮ್ಮೊಳಗಿನ ದುರಭಿಮಾನದ ಪ್ರಯಾಣವು ಹಾಗೆಯೆ ಮುಂದೂಡುತ್ತಾ ಹೋಗುತ್ತಿತ್ತು. ಇಂತಹ ಸ್ವಯಂ ಪ್ರತಿಷ್ಟೆಯ ಅಭಿಮಾನ ಯಾರ ಮನದಲ್ಲಿ ಮೂಡುತ್ತದೊ ಅದು ಅಹಂಕಾರವಾಗಿ ಬದಲಾಗಲು ಹೆಚ್ಚು ಕಾಲಾವಕಾಶ ಬೇಡ. ಯಾರಲ್ಲಿ ಈ ಕೆಟ್ಟ ಅಭಿಮಾನ ಅಹಂಕಾರವಾಗಿ ಬದಲಾಗುತ್ತದೊ ಅವರ ತಿಳಿವಿನ ಕಣ್ಣು ಕುರುಡಾಗಿ ಬಿಡುತ್ತದೆ. ಅಂದರೆ ಈ ಸಮಷ್ಠಿಯಲ್ಲಿ ಎಷ್ಟೊ ಔನ್ನತ್ಯದಲ್ಲಿ ಏನೇನು ಇದ್ದರೂ ಅವುಗಳು ಪರಿವೆಗೆ ಬಾರದೆ ತಾನು ಅತ್ಯುನ್ನತ ಎಂಬ ಭಾವನೆ ನಿಜ ಎಂಬ ಭ್ರಮೆ ಮೂಡಿ ಅದು ಸ್ಥಿರವಾಗುತ್ತದೆ. ‘ಅತ್ಯುನ್ನತೇ ಪತನ ಹೇತು’ ಎಂದು ತಿಳಿದಿದ್ದೀರಲ್ಲ ನೀವು. ಯಾರು ತಾನೆ ಅತ್ಯುನ್ನತ ಎಂದು ಕಲ್ಪನೆ ಮಾಡಿಕೊಂಡು ಹಾಗೆ ವರ್ತಿಸುತ್ತಾನೋ ಅವರ ಪತನಕ್ಕೆ ಅದುವೆ ಮಾರ್ಗವಾಗುತ್ತದೆ. ಈಗ ನಿಮಗೆಲ್ಲ ನಾನು ಯಾರು ಎಂಬ ಜಿಜ್ಞಾಸೆ ಮೂಡಿದೆಯಲ್ಲವೆ? ಸರಿ ನಿಮ್ಮ ತಿಳುವಳಿಕೆಗಾಗಿ ನಿಮಗೆ ಹೇಳುತ್ತೇನೆ ಕೇಳಿಸಿಕೊಳ್ಳಿರಿ….” ಎಂದು ತನ್ನ ಪರಿಚಯ ಹೇಳ ತೊಡಗಿದಳು.



















































































