
ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಈರುಳ್ಳಿ ಬೆಲೆ ದಿಢೀರ್ ಏರಿಕೆಯಾಗಿದ್ದು, ಗ್ರಾಹಕರಿಗೆ ಮತ್ತಷ್ಟು ಹೊರೆ ಎದುರಾಗಿದೆ. ಪೂರೈಕೆ ಕೊರತೆ ಹಾಗೂ ಹೊಸ ಖಾರಿಫ್ ಬೆಳೆ ಮಾರುಕಟ್ಟೆಗೆ ಬರಲು ವಿಳಂಬವಾಗುವ ಸಾಧ್ಯತೆ ದರ ಏರಿಕೆಗೆ ಕಾರಣವಾಗಿದೆ.
ಮಹಾರಾಷ್ಟ್ರದ ಲಾಸಲ್‌ಗಾಂವ್ ಸೇರಿದಂತೆ ಪ್ರಮುಖ ಮಂಡಿಗಳಲ್ಲಿ ಸಗಟು ಬೆಲೆ ಹೆಚ್ಚಾಗಿದೆ. ಆ.18ರಂದು ದೇಶಾದ್ಯಂತ ಈರುಳ್ಳಿಯ ಸರಾಸರಿ ಸಗಟು ದರ ಕ್ವಿಂಟಲ್‌ಗೆ ₹2,898ಕ್ಕೆ ತಲುಪಿದ್ದು, ಒಂದು ವಾರದಲ್ಲಿ ಶೇ.32ರಷ್ಟು ಏರಿಕೆಯಾಗಿದೆ.
ರಬಿ ಈರುಳ್ಳಿ ಉತ್ಪಾದನೆ ಕಡಿಮೆಯಾಗಿರುವುದು ಹಾಗೂ ಪ್ರಮುಖ ಉತ್ಪಾದನಾ ಪ್ರದೇಶಗಳಲ್ಲಿನ ಅಕಾಲಿಕ ಮಳೆ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಇದರಿಂದ ಮಾರುಕಟ್ಟೆಯಲ್ಲಿ ಈರುಳ್ಳಿ ಲಭ್ಯತೆ ಕುಸಿದಿದೆ.
ಖರೀದಿ ಬೆಲೆ ಹೆಚ್ಚಿಸಿದ ಕೇಂದ್ರ:
ಬೆಲೆ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಈರುಳ್ಳಿ ಖರೀದಿ ಬೆಲೆಯನ್ನು ಕೆಜಿಗೆ ₹26.45ಕ್ಕೆ ಹೆಚ್ಚಿಸಿದೆ. ಬಫರ್ ಸ್ಟಾಕ್ ಮೂಲಕ ಮಾರುಕಟ್ಟೆಗೆ ಈರುಳ್ಳಿ ಪೂರೈಸುವ ಪ್ರಯತ್ನವೂ ನಡೆಯುತ್ತಿದೆ.
ಈ ನಡುವೆ ಆಂಧ್ರಪ್ರದೇಶದ ಕೆಲವು ಪ್ರದೇಶಗಳಲ್ಲಿ ಜೂನ್‌ನಲ್ಲಿ ₹25ರಷ್ಟಿದ್ದ ಚಿಲ್ಲರೆ ದರ ಆಗಸ್ಟ್‌ನಲ್ಲಿ ₹60ಕ್ಕೆ ಏರಿಕೆಯಾಗಿದೆ. ಖಾರಿಫ್ ಬೆಳೆ ಮಾರುಕಟ್ಟೆಗೆ ಬರಲು ವಿಳಂಬವಾದರೆ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗುವ ಆತಂಕವಿದೆ.



















































































