ಅಂಬಾರಿ ಹೊರುವ ಹೊಸ ಆನೆಯ ಹುಡುಕಾಟ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಅಕ್ಟೋಬರ್ 11ರಂದು ದಸರಾ ಉದ್ಘಾಟನೆಗೊಳ್ಳಲಿದೆ. ಅಕ್ಟೋಬರ್ 21ರಂದು ಜಂಬೂಸವಾರಿ ನಡೆಯಲಿದೆ. ಈ ಬಾರಿ ಗಜಪಡೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಕಳೆದ ಆರು ವರ್ಷಗಳಿಂದ ಚಿನ್ನದ ಅಂಬಾರಿ ಹೊತ್ತಿದ್ದ ‘ಅಭಿಮನ್ಯು’ ದಸರಾ ದಿಂದ ಹೊರಗುಳಿಯಲಿದ್ದಾನೆ.
2020ರಿಂದ 2025ರವರೆಗೆ ಸತತ ಆರು ವರ್ಷ ಜಂಬೂಸವಾರಿಯಲ್ಲಿ ತಾಯಿ ಚಾಮುಂಡೇಶ್ವರಿಯ 750 ಕೆಜಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಅಭಿಮನ್ಯುಗೆ ಇದೀಗ ವಿಶ್ರಾಂತಿ ನೀಡಲಾಗಿದೆ. ಅರಣ್ಯ ಇಲಾಖೆಯ ನಿಯಮದಂತೆ 60 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಅಂಬಾರಿ ಹೊರುವ ಹೊಸ ಆನೆಯ ಹುಡುಕಾಟ ಆರಂಭವಾಗಿದೆ.
12 ಆನೆಗಳ ಪಟ್ಟಿ ಪ್ರಕಟ
ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಈ ಬಾರಿಯ ದಸರಾದ ಗಜಪಡೆಯ ಅಂತಿಮ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಒಟ್ಟು 12 ಆನೆಗಳು ದಸರೆಯಲ್ಲಿ ಭಾಗವಹಿಸಲಿದ್ದು, ಎರಡು ಆನೆಗಳನ್ನು ಕಾಯ್ದಿರಿಸಲಾಗಿದೆ.
ದುಬಾರೆಯಿಂದ ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಕಾವೇರಿ; ಬಳ್ಳೆ ಆನೆ ಶಿಬಿರದಿಂದ ಮಹೇಂದ್ರ, ಲಕ್ಷ್ಮೀ; ಭೀಮನಕಟ್ಟೆಯಿಂದ ಏಕಲವ್ಯ; ದೊಡ್ಡ ಅರವೆ ಶಿಬಿರದಿಂದ ರೂಪ; ರಾಂಪುರದಿಂದ ಚೈತ್ರ ಹಾಗೂ ಮತ್ತಿಗೋಡಿನಿಂದ ಶ್ರೀಕಂಠ ಆಯ್ಕೆಯಾಗಿದ್ದಾರೆ. ಮತ್ತಿಗೋಡಿನ ಭೀಮಾ ಮತ್ತು ದುಬಾರೆಯ ಹರ್ಷ ಆನೆಯನ್ನು ಮೀಸಲು ಆನೆಗಳಾಗಿ ಇರಿಸಲಾಗಿದೆ. ಈ ಬಾರಿ ಹರ್ಷ, ಚೈತ್ರ, ರೂಪ ಹಾಗೂ ಶ್ರೀರಾಮ ಮೊದಲ ಬಾರಿಗೆ ದಸರಾ ಗಜಪಡೆಯಲ್ಲಿ ಭಾಗಿಯಾಗಲಿದೆ.
ಆ.26ರಂದು ಗಜಪಯಣ
ಮೊದಲ ಹಂತದಲ್ಲಿ 9 ಹಾಗೂ ಎರಡನೇ ಹಂತದಲ್ಲಿ 3 ಆನೆಗಳನ್ನು ಮೈಸೂರಿಗೆ ಕರೆತರಲಾಗುತ್ತದೆ. ಆಗಸ್ಟ್ 26ರಂದು ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿಯಲ್ಲಿ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಮೈಸೂರಿನತ್ತ ಗಜಪಯಣಕ್ಕೆ ಚಾಲನೆ ನೀಡಲಾಗುತ್ತದೆ.


















































































