
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗಳ ವಿಚಾರಣೆ ವೇಳೆ ಖುದ್ದು ಹಾಜರಾಗಲು ಅವಕಾಶ ನೀಡುವಂತೆ ಆರೋಪಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು 59ನೇ ಎಸಿಎಂಎಂ ನ್ಯಾಯಾಲಯ ಸೋಮವಾರ ವಜಾಗೊಳಿಸಿದೆ.
ಪ್ರಾಸಿಕ್ಯೂಷನ್ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕವೇ ನಡೆಸುವಂತೆ ಆದೇಶಿಸಿದೆ. ವಿಡಿಯೊ ಕಾನ್ಫರೆನ್ಸ್ ವೇಳೆ ಆಡಿಯೊ-ವಿಡಿಯೊ ಗುಣಮಟ್ಟದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಧೀಶೆ ಸುಜಾತ ಎಂ. ಸಾಂಬ್ರಾಣಿ ಸೂಚಿಸಿದ್ದಾರೆ.
ಅಲ್ಲದೆ, ದರ್ಶನ್ ತಮ್ಮ ವಕೀಲರೊಂದಿಗೆ ಪ್ರತ್ಯೇಕವಾಗಿ ಹಾಗೂ ಗೌಪ್ಯವಾಗಿ ಸಮಾಲೋಚನೆ ನಡೆಸಲು ಜೈಲಿನಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
ದರ್ಶನ್ ಪರ ವಕೀಲ ಹಷ್ಮತ್ ಪಾಷಾ, ‘ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆ ವೇಳೆ ಆರೋಪಿ ಖುದ್ದು ಹಾಜರಿರಬೇಕು. ಪ್ರತಿ ವಿಚಾರಣೆ ವೇಳೆಯೂ ಆರೋಪಿ ಜೈಲಿನಿಂದಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾದರೆ ಎಲ್ಲ ವಿಚಾರಣೆಗಳನ್ನೂ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಅಲ್ಲದೆ ವಕೀಲರಿಗೂ ಮಾಹಿತಿ ನೀಡಲು ಸಾಧ್ಯವಾಗುವುದಿಲ್ಲ’ ಎಂದು ವಾದ ಮಂಡಿಸಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಾಸಿಕ್ಯೂಷನ್ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನಕುಮಾರ್, ದರ್ಶನ್ ಅವರನ್ನು ನ್ಯಾಯಾಲಯಕ್ಕೆ ಕರೆತಂದರೆ ಭದ್ರತಾ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಅಲ್ಲದೆ, ಕೋರ್ಟ್ ಆವರಣದಲ್ಲಿ ಹೆಚ್ಚಿನ ಜನರು ಸೇರುವ ಸಾಧ್ಯತೆಯೂ ಇದೆ ಎಂದು ವಾದಿಸಿದ್ದರು.


















































































