
ಬೆಂಗಳೂರು: ನಟಿ ಹಾಗೂ ನಿರೂಪಕಿ ಅನುಪಮಾ ಗೌಡ ಅವರು ಆ್ಯಂಕರಿಂಗ್ ಕ್ಷೇತ್ರದಿಂದ ದೂರ ಸರಿಯುವ ನಿರ್ಧಾರ ಕೈಗೊಂಡಿದ್ದಾರೆ. ಹಲವು ವರ್ಷಗಳಿಂದ ಕನ್ನಡ ಶೋ ಗಳಲ್ಲಿ ನಿರೂಪಕಿಯಾಗಿ ಗಮನ ಸೆಳೆದಿದ್ದ ಅವರು, ಅನಿವಾರ್ಯ ಕಾರಣಗಳಿಂದ ತಮ್ಮ ಆ್ಯಂಕರಿಂಗ್ ಜರ್ನಿಗೆ ವಿದಾಯ ಹೇಳಿದ್ದಾರೆ.
‘ಮಜಾ ಭಾರತ್’, ‘ಕನ್ನಡ ಕೋಗಿಲೆ’, ‘ರಾಜಾ ರಾಣಿ’, ‘ನಮ್ಮಮ್ಮ ಸೂಪರ್ ಸ್ಟಾರ್’, ‘ಸುವರ್ಣ ಸೂಪರ್ಸ್ಟಾರ್ಸ್’, ‘ಸುವರ್ಣ ಜ್ಯಾಕ್ಪಾಟ್’, ‘ಗರ್ಲ್ಸ್ vs ಬಾಯ್ಸ್’ ಹಾಗೂ ‘ಕ್ವಾಟ್ಲೆ ಕಿಚನ್’ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಅನುಪಮಾ ನಿರೂಪಿಸಿದ್ದಾರೆ. ಆದರೆ, ತಮ್ಮ ಕೊನೆಯ ಶೋವನ್ನು ಸಂಪೂರ್ಣವಾಗಿ ಮುಗಿಸಲು ಸಾಧ್ಯವಾಗದಿರುವುದು ಅವರಿಗೆ ಬೇಸರ ತಂದಿದೆ.
ವಿಡಿಯೋ ಮೂಲಕ ತಮ್ಮ ಜರ್ನಿಯನ್ನು ನೆನಪಿಸಿಕೊಂಡಿರುವ ಅನುಪಮಾ, ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಹೊಸ ಶೋನಲ್ಲಿ ಇರಬೇಕಾಗಿತ್ತು, ಆದರೆ ಅದು ಸಾಧ್ಯವಾಗಲಿಲ್ಲ. ಕೆಲವು ಭರವಸೆಗಳು ಈಡೇರದ ಕಾರಣ ತಮ್ಮ ಪ್ರಯಾಣವನ್ನು ಅಪೂರ್ಣವಾಗಿಯೇ ಮುಗಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಮುಂದೆ ಧಾರಾವಾಹಿಗಳಲ್ಲಿ ಮತ್ತೆ ಕಾಣಿಸಿಕೊಳ್ಳುತ್ತೇನೋ ಇಲ್ಲವೋ ಎಂಬುದು ಗೊತ್ತಿಲ್ಲ ಎಂದಿರುವ ಅನುಪಮಾ, ತಮ್ಮ ನಿರ್ಧಾರದ ಬಗ್ಗೆ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಅವರ ಈ ನಿರ್ಧಾರಕ್ಕೆ ಕೆಲವರು ಬೇಸರ ವ್ಯಕ್ತಪಡಿಸಿದರೆ, ಮತ್ತಷ್ಟು ಮಂದಿ ಮುಂದಿನ ಜರ್ನಿಗೆ ಶುಭ ಹಾರೈಸಿದ್ದಾರೆ.
2003ರಲ್ಲಿ ‘ಲಂಕೇಶ್ ಪತ್ರಿಕೆ’ ಸಿನಿಮಾದಲ್ಲಿ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಅನುಪಮಾ, ‘ಅಕ್ಕ’ ಧಾರಾವಾಹಿಯ ಮೂಲಕ ದೊಡ್ಡ ಜನಪ್ರಿಯತೆ ಪಡೆದರು. ಬಳಿಕ ಬಿಗ್ಬಾಸ್ನಲ್ಲೂ ಸ್ಪರ್ಧಿಸಿದ್ದರು. ಕೆಲವು ಸಿನಿಮಾಗಳಲ್ಲಿ ನಟಿಸಿರುವ ಅವರು ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದಾರೆ.


















































































