
ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಅಧಿಕಾರ ವಹಿಸಿ ಒಂದು ವರ್ಷ ಕಳೆದಿದ್ದು ಗ್ಯಾರಂಟಿಗಳಿಂದ ಏನು ಪ್ರಯೋಜನ, ಇದರಿಂದ ಆರ್ಥಿಕತೆ ನಾಶವಾಗುತ್ತಿಲ್ಲವೇ ಎಂದು ಪ್ರಶ್ನೆ ಮಾಡುವವರಿಗೆ ಕಾಂಗ್ರೆಸ್ ಪಕ್ಷವಾಗಲೀ, ನಾಯಕರಾಗಲೀ ಉತ್ತರ ನೀಡಬೇಕಿಲ್ಲ. ಈ ಯೋಜನೆಗಳಿಂದ ಲಾಭ ಪಡೆದ ಜನರೇ ಇದಕ್ಕೆ ಉತ್ತರ ನೀಡುತ್ತಿದ್ದು, ಇದು ಎಲ್ಲರ ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಒಂದು ವರ್ಷದಲ್ಲಿ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ನಮ್ಮ ಸರ್ಕಾರ ಅಭಿವೃದ್ಧಿಗೆ ಹೊಸ ಮಾದರಿಯೊಂದನ್ನು ಸೃಷ್ಟಿಸಿದೆ. ಸರ್ಕಾರ ರಚನೆಯಾದ ಆರಂಭದಲ್ಲಿ, ಇಂತಹ ಯೋಜನೆಗಳ ಜಾರಿ ಸಾಧ್ಯವೇ ಇಲ್ಲ ಎಂದವರಿಗೆ, ಅಸಾಧ್ಯವಾದುದನ್ನು ಸಾಧ್ಯ ಮಾಡಿ ನಾವು ತೋರಿಸಿದ್ದೇವೆ. ಇದಕ್ಕಾಗಿ ನುಡಿದಂತೆಯೇ ನಡೆದಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತೇವೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.ಹೆಣ್ಣುಮಕ್ಕಳು ಗೃಹಲಕ್ಷ್ಮಿಯಿಂದ ಪಡೆದ ಹಾಗೂ ಉಚಿತ ಬಸ್‌ನಿಂದ ಉಳಿಸಿದ ಹಣವನ್ನು ಅಕ್ಷಯ ತೃತೀಯದಂದು ಚಿನ್ನ ಖರೀದಿಸಲು, ಮನೆಗೆ ಬೇಕಾದ ಉಪಕರಣ ಖರೀದಿಸಲು, ಮಕ್ಕಳ ಶಾಲಾ ಶುಲ್ಕ ಕಟ್ಟಲು ಬಳಸಿದ್ದಾರೆ. ಉಚಿತ ವಿದ್ಯುತ್‌ನಿಂದ ಬಡ ಕುಟುಂಬಗಳ ತಿಂಗಳ ವೆಚ್ಚದಲ್ಲಿ ದೊಡ್ಡ ಪ್ರಮಾಣದ ಇಳಿಕೆ ಕಂಡುಬಂದಿದೆ.
ನಿರುದ್ಯೋಗಿ ಯುವಕ-ಯುವತಿಯರು ಸಣ್ಣ ಕೋರ್ಸ್‌ಗಳನ್ನು ಮಾಡಲು ಯುವನಿಧಿ ಬಳಸುತ್ತಿದ್ದರೆ, ಹಸಿದವರು ಅನ್ನಭಾಗ್ಯದಿಂದ ಹೊಟ್ಟೆಭರ್ತಿಯಾಗಿ ನೆಮ್ಮದಿಯಿಂದ ಊಟ ಮಾಡುತ್ತಿದ್ದಾರೆ.ಈ ಒಂದು ವರ್ಷದಲ್ಲಿ ಬ್ರ್ಯಾಂಡ್ ಬೆಂಗಳೂರು ಯೋಜನೆಗೆ ಚಾಲನೆ ದೊರೆತಿರುವುದು ಮಹತ್ವದ ಬೆಳವಣಿಗೆ. ಸಂಚಾರ ದಟ್ಟಣೆ ನಿವಾರಣೆ, ಮೂಲಸೌಕರ್ಯಾಭಿವೃದ್ಧಿ, ಕೆರೆ ಸಂರಕ್ಷಣೆ, ಪರಿಸರ ಅಭಿವೃದ್ಧಿ, ಕೈಗಾರಿಕಾಭಿವೃದ್ಧಿ ಮೊದಲಾದ ಕ್ರಮಗಳ ಮೂಲಕ ಹೊಸ ಪೀಳಿಗೆಗೆ ಹೊಸ ಬೆಂಗಳೂರು ನಗರವನ್ನು ನೀಡುವುದು ನನ್ನ ಗುರಿ ಎಂದರು.