ಕಾರ್ಕಳ ಮಾಜಿ ಪುರಸಭಾ ಸದಸ್ಯ ಸಂತೋಷ್ ರಾವ್, ಸವಿತಾ ದಂಪತಿಗಳ ಪುತ್ರಿ

ಕಾರ್ಕಳ: ಕಾರ್ಕಳ ಮಾಜಿ ಪುರಸಭಾ ಸದಸ್ಯ ಸಂತೋಷ್ ರಾವ್ ಹಾಗೂ ಸವಿತಾ ದಂಪತಿಗಳ ಪುತ್ರಿ ಸಮೃದ್ಧಿ ರಾವ್ ಅವರು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಗಸ್ಟ್ 11 ಮತ್ತು 12ರಂದು ನಡೆದ ಕರ್ನಾಟಕ ಸ್ಟೇಟ್ ಜೂನಿಯರ್ ಅಥ್ಲೆಟಿಕ್ ಮೀಟ್–2026ರಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಅಥ್ಲೆಟಿಕ್ಸ್‌ನ 800 ಮೀಟರ್ ಹಾಗೂ 1500 ಮೀಟರ್ ಓಟದ ಸ್ಪರ್ಧೆಗಳಲ್ಲಿ ತಲಾ ಕಂಚಿನ ಪದಕ ಗಳಿಸುವ ಮೂಲಕ ಸಮೃದ್ಧಿ ರಾವ್ ಅವರು ಕಾರ್ಕಳಕ್ಕೆ ಕೀರ್ತಿ ತಂದಿದ್ದಾರೆ.
ಸಮೃದ್ಧಿ ರಾವ್ ಅವರು ನಿಟ್ಟೆ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇದೇ ಸಂಸ್ಥೆಯ ಡಾ. ಗಣೇಶ್ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಅಥ್ಲೆಟಿಕ್ಸ್ ತರಬೇತಿ ಪಡೆಯುತ್ತಿದ್ದಾರೆ.
ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರುತ್ತಿರುವ ಸಮೃದ್ಧಿ ರಾವ್ ಅವರ ಈ ಯಶಸ್ಸಿಗೆ ಕುಟುಂಬಸ್ಥರು, ನಿಟ್ಟೆ ವಿದ್ಯಾಸಂಸ್ಥೆಯ ಶಿಕ್ಷಕರು ಹಾಗೂ ತರಬೇತುದಾರರು ಅಭಿನಂದನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಮಟ್ಟದ ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದ್ದಾರೆ.




























































