
ನವದೆಹಲಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಸಮಾವೇಶದ ಬಳಿಕ ತಾವು ಮಾತನಾಡಿದ ವೇದಿಕೆಯಲ್ಲಿ ಬಿಜೆಪಿ ಕಾರ್ಯಕರ್ತರು ‘ನನ್ನನ್ನು ಅಸ್ಪೃಶ್ಯನಂತೆ ಕಂಡು ನಾನಿದ್ದ ವೇದಿಕೆಯನ್ನು ಶುದ್ಧೀಕರಣ ಮಾಡಿದ್ದಾರೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ತಮ್ಮನ್ನು ಅಸ್ಪೃಶ್ಯರಂತೆ ಕಾಣಲಾಗಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಖರ್ಗೆ ಭಾಷಣ ಮಾಡಿದ ಬಳಿಕ ವೇದಿಕೆಯನ್ನು ಶುದ್ಧೀಕರಿಸಲಾಗಿದೆ ಎಂಬ ವಿಚಾರಕ್ಕೆ ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಲಿತ ಸಮುದಾಯದ ನಾಯಕನ ಸಭೆಯ ಬಳಿಕ ಇಂತಹ ಆಚರಣೆ ನಡೆಸಿರುವುದು ಖಂಡನೀಯ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ. ಈ ಬಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸ್ಪಷ್ಟನೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಖರ್ಗೆ, “ನಾನು ಇದನ್ನು ರಾಜಕೀಯ ವಿಚಾರವನ್ನಾಗಿ ಮಾಡಲು ಬಯಸುವುದಿಲ್ಲ. ನಾನು ಹಲವು ವರ್ಷಗಳಿಂದ ಈ ಸದನದಲ್ಲಿದ್ದೇನೆ. ನಾನು ಪರಿಶಿಷ್ಟ ಜಾತಿಗೆ ಸೇರಿದವನು, ನನಗೆ ಸಹಾಯ ಮಾಡಿ, ನನ್ನನ್ನು ರಕ್ಷಿಸಿ ಎಂದು ನಾನು ಈ ಹಿಂದೆ ಯಾರ ಮುಂದೆಯೂ ಬೇಡಿಕೊಂಡಿಲ್ಲ. ಹೋರಾಡುವ ಶಕ್ತಿ ನನ್ನಲ್ಲಿದೆ ಮತ್ತು ನಾನು ಹೋರಾಡುತ್ತೇನೆ. ಆದರೆ ನೀವು ನನ್ನನ್ನು ಅಸ್ಪೃಶ್ಯನಂತೆ ಕಂಡು ಅವಮಾನಿಸಿದ್ದಾರೆ” ಎಂದು ಹೇಳಿದ್ದಾರೆ.
ನಡ್ಡಾ ಪ್ರತಿಕ್ರಿಯೆ
ಕೇಂದ್ರ ಸಚಿವ ಜೆ.ಪಿ. ನಡ್ಡಾ, ಇಂತಹ ಘಟನೆಗಳನ್ನು ಬಿಜೆಪಿ ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲಾಗುವುದು ಹಾಗೂ ಖರ್ಗೆ ಅವರ ಭಾವನೆಗಳಿಗೆ ನೋವಾಗಿದ್ದರೆ ಅದು ವಿಷಾದನೀಯ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ಹಲ್ದ್ವಾನಿಯಲ್ಲಿ ತಾವು ಯಾವುದೇ ಧರ್ಮ ಅಥವಾ ಸಮುದಾಯದ ವಿರುದ್ಧ ಮಾತನಾಡಿರಲಿಲ್ಲ. ಸರ್ಕಾರದ ವಿಚಾರಗಳನ್ನಷ್ಟೇ ಪ್ರಸ್ತಾಪಿಸಿದ್ದೆ. ಆದರೆ ನನ್ನ ಭಾಷಣದ ಬಳಿಕ ಬಿಜೆಪಿ ಕಾರ್ಯಕರ್ತರು ಆ ವೇದಿಕೆಯನ್ನು ‘ಶುದ್ಧೀಕರಿಸಲು’ ಅಲ್ಲಿ ಹವನ ನಡೆಸಿದರು. ಪ್ರಜಾಪ್ರಭುತ್ವದಲ್ಲಿ ಇದೇನಾ ನಡೆ? ನೀವು ಸಂವಿಧಾನವನ್ನು ಹೇಗೆ ರಕ್ಷಿಸುತ್ತಿದ್ದೀರಿ? ಎಂದು ಕಿಡಿಕಾರಿದ್ದಾರೆ.




























































