
ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆಯ ಹೆಸರಿನಲ್ಲಿ ಹಣ ಲೂಟಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ನಾನು ಲಾಟರಿ ಬ್ಯಾನ್ ಮಾಡಿದಾಗ ತಮಿಳುನಾಡಿನಿಂದ ಬ್ಯಾಗ್ ಹಿಡ್ಕೊಂಡು ಬಂದಿದ್ದವರನ್ನು ಉಗಿದು ಕಳಿಸಿದೆ. ನನ್ನನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ನನ್ನ ಕೊಂಡುಕೊಳ್ಳುವವರು ಈ ರಾಜ್ಯದಲ್ಲಿ ಇನ್ನೂ ಹುಟ್ಟಿಲ್ಲ, ನನ್ನ ಧ್ವನಿಯನ್ನೂ ನಿಲ್ಲಿಸಲು ಆಗಲ್ಲ ತಮ್ಮನ್ನು ಹಣದ ಮೂಲಕ ಕೊಂಡುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಬಿಡದಿ ಟೌನ್ಶಿಪ್ ವಿಚಾರದಲ್ಲಿ ತಮ್ಮ ಯಾವುದೇ ಹಠವಿಲ್ಲ. ರೈತರು ಮತ್ತು ಮಹಿಳೆಯರ ಹಿತ ಕಾಪಾಡಬೇಕಾದರೆ ಈ ಯೋಜನೆ ಜಾರಿಯಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ತಾವು ಕಿಕ್‌ಬ್ಯಾಕ್ ಪಡೆದಿದ್ದರೆ ತನಿಖೆ ನಡೆಸಲಿ, ತಮ್ಮನ್ನಾಗಲಿ ದೇವೇಗೌಡರನ್ನಾಗಲಿ ಯಾರಿಂದಲೂ ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದರು.
ವಿಪಕ್ಷಗಳ ಮಾತಿಗೆ ರಾಜ್ಯ ಸರ್ಕಾರ ಗೌರವ ನೀಡುತ್ತಿಲ್ಲ. ಅಧಿಕಾರದ ಮದದಿಂದ ಸರ್ಕಾರ ವರ್ತಿಸುತ್ತಿದೆ ಎಂದು ಆರೋಪಿಸಿದ ಅವರು, ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಮುನ್ನ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆಯೇ ಎಂದು ಪ್ರಶ್ನಿಸಿದರು. ತಮ್ಮ ಜಾಗದ ಒತ್ತುವರಿ ಆರೋಪದ ತನಿಖೆಗೆ ಎಸ್‌ಐಟಿ ರಚಿಸಿರುವುದನ್ನೂ ಅವರು ಪ್ರಸ್ತಾಪಿಸಿದರು.
ನೈಸ್ ರಸ್ತೆ ಟೋಲ್ ಸಂಗ್ರಹ ವಿಚಾರದಲ್ಲೂ ಸರ್ಕಾರದ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ, ಅಕ್ರಮವಾಗಿ ಟೋಲ್ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ವಕೀಲರೇ ಈ ಬಗ್ಗೆ ಹೇಳಿರುವುದಾಗಿ ತಿಳಿಸಿದ ಅವರು, ರೈತರು ಟೋಲ್ ಪಾವತಿಸಬಾರದು ಎಂದು ತಾವು ಹೇಳಿರುವುದಾಗಿ ಸ್ಪಷ್ಟಪಡಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರು ಟೋಲ್ ಸಂಗ್ರಹ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಹೇಳಿರುವುದು ಸರಿಯಲ್ಲ. ಟೋಲ್ ಯಾರು ಸಂಗ್ರಹಿಸುತ್ತಿದ್ದಾರೆ ಎಂಬುದನ್ನು ಮೊದಲು ತಿಳಿದುಕೊಳ್ಳಲಿ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು. ಜನರು ನಂಬುವಂತಹ ಜಾಹೀರಾತುಗಳನ್ನು ನೀಡಬೇಕು, ಹಣ ಮಾಡುವುದನ್ನೇ ಸರ್ಕಾರದ ಕೆಲಸವನ್ನಾಗಿಸಿಕೊಳ್ಳಬಾರದು ಎಂದು ಎಚ್ಚರಿಸಿದರು.
ಚಾಮುಂಡಿ ಬೆಟ್ಟದಲ್ಲಿ ಮಾತನಾಡಿದ ಅವರು, ಬಿಡದಿ ಭೂಮಿ ಫಲವತ್ತಾದ ಪ್ರದೇಶ ಎಂಬುದು ಕಾಂಗ್ರೆಸ್ ಸದನ ಸಮಿತಿ ವರದಿಯಲ್ಲೇ ಇದೆ ಎಂದರು. ಬಿಡದಿ ಯೋಜನೆ ಸ್ಥಗಿತಗೊಳಿಸುವಂತೆ ತಾವು ಸದನದಲ್ಲೇ ಹೇಳಿದ್ದರೂ ಇದೀಗ ಯೋಜನೆಯ ಹೆಸರಿನಲ್ಲಿ ಲೂಟಿ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ತಮ್ಮ ವಿರುದ್ಧ ಡಿಎಲ್‌ಎಫ್ ಕಂಪನಿಯಿಂದ ಕಿಕ್‌ಬ್ಯಾಕ್ ಪಡೆದ ಆರೋಪದ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕೇರಳದ ಕಾಂಗ್ರೆಸ್ ಮುಖ್ಯಮಂತ್ರಿ ಹಾಗೂ ಪ್ರಧಾನಿಯಾಗಲು ಹೊರಟಿರುವ ದೆಹಲಿಯ ವ್ಯಕ್ತಿಗೂ ಡಿಎಲ್‌ಎಫ್ ಜೊತೆಗಿನ ಸಂಬಂಧವೇನು ಎಂಬುದನ್ನು ಬಹಿರಂಗಪಡಿಸಿದರೆ ಸತ್ಯ ಹೊರಬರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

























































