27.5 C
Udupi
Tuesday, August 11, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – ,609

ಭರತೇಶ್ ಶೆಟ್ಟಿ, ಎಕ್ಕಾರು

“ನಾನು ದೇವಿಯ ಪೂಜೆಗೆಂದು ದೇವಸ್ಥಾನದತ್ತ ಹೋಗುವಾಗ ಬೆಂಬತ್ತಿ ಬಂದ ಮಂತ್ರಿಕುಮಾರ ಮದನ ರಾಜಾಜ್ಞೆಯ ವಿಚಾರ ತಿಳಿಸಿದ. ನನ್ನ ಕೈಯಲ್ಲಿದ್ದ ಪೂಜಾ ಸಾಮಾಗ್ರಿಗಳ ಜೊತೆ ಆತ ದೇವಸ್ಥಾನಕ್ಕೆ ಹೋಗಿದ್ದಾನೆ. ರಾಜಾಜ್ಞೆಯ ಆಜ್ಞಾನುವರ್ತಿಯಾಗಿ ಕುಂತಳದ ಅರಮನೆಗೆ ತೆರಳಿದೆ. ಅಲ್ಲಿ ನನಗೆ ರಾಜಕುಮಾರಿಯೊಂದಿಗೆ ವಿವಾಹವಾಯಿತು. ಮಾತ್ರವಲ್ಲ ಮಹಾರಾಜರು ಕುಂತಳದೇಶದ ಅಧಿಕಾರವನ್ನೂ ನನಗೊಪ್ಪಿಸಿದ್ದಾರೆ” ಎಂದು ಹೇಳಿದ ಚಂದ್ರಹಾಸನ ಮಾತುಗಳು ದುಷ್ಟಬುದ್ದಿಯ ಮನಸ್ಸನ್ನು ಹೊಸಕಿ ನುಣ್ಣಗೆ ಅರೆದಂತೆ ಹಿಂಸೆಯಾಗತೊಡಗಿತು. ತಾನು ಕೊಂದು ಮುಗಿಸಬೇಕೆಂದು ಹವಣಿಸಿದರೆ, ಚಂದ್ರಹಾಸ ಈ ರಾಜ್ಯದ ರಾಜಕುಮಾರಿಯನ್ನೇ ವರಿಸಿ ರಾಜ್ಯಾಧಿಕಾರವನ್ನೂ ಪಡಕೊಂಡಿದ್ದಾನೆ. ಇನ್ನೊಂದೆಡೆ ನನ್ನ ಮಗ ಮದನ ಕುಮಾರ ದೇವಸ್ಥಾನದತ್ತ ಹೋಗಿದ್ದಾನೆ… ಅಯ್ಯೋ ನಾನೇ ತೋಡಿದ ಹೊಂಡಕ್ಕೆ ಬೀಳುವಂತಾಯಿತೇ!!! ಮಗ ಮದನ ಕುಮಾರನಿಗೇನಾಯಿತೋ!! ಈಗಲೇ ದೇವಸ್ಥಾನದತ್ತ ಹೋಗಬೇಕು ಎಂದು ಕುದುರೆಯನ್ನು ಅದಕ್ಕೆಷ್ಟು ಸಾಧ್ಯವೋ ಅಷ್ಟು ವೇಗದಲ್ಲಿ ದೌಡಾಯಿಸಿದ ದುಷ್ಟಬುದ್ದಿ, ದೇವಳದ ಬಳಿ ಬರುತ್ತಿದ್ದಂತೆ ಜಿಗಿದು ಓಡಿದನು.

ದೇವಳದೊಳಗೆ ಕತ್ತಲೆಯಿದೆ. ಮುಸ್ಸಂಜೆಯ ಹೊತ್ತು ಪೂಜೆ ಮುಗಿಸಿ ಪುರೋಹಿತರು ಹೋದ ನಂತರ ಕಾಡ ಮಧ್ಯದ ಈ ದೇವಸ್ಥಾನಕ್ಕೆ ಭಕ್ತರು ಬರುವುದು ತೀರಾ ಕಡಿಮೆ. ಗರ್ಭಗುಡಿಯಲ್ಲಿ ದೇವರ ಮುಂದೆ ಒಂದು ದೀಪ ಮತ್ತು ಕೊಳ್ಳಿಯಿದೆ ಬಿಟ್ಟರೆ ಮತ್ತೆಲ್ಲೆಡೆ ಕರಿ ಕಾರ್ಗತ್ತಲು. ಕತ್ತಲೆಯಲ್ಲೇ ಒಳ ಹೋಗುತ್ತಿದ್ದಾನೆ . ಹೋಗುತ್ತಿದ್ದಂತೆ ಕೆಸರಿನ ಮೇಲೆ ಕಾಲಿಟ್ಟಂತಾಯಿತು. ಪಾಚಿಯಂತೆ ಜಾರುತ್ತಿದೆ, ಹೆಜ್ಜೆಯನ್ನೆತ್ತಿಟ್ಟರೆ ಪಾದದ ಅಂಗಾಲು ಅಂಟುತ್ತಿದೆ. ಭಯವಾದರೂ ಧೈರ್ಯ ತಾಳುತ್ತಾ, ನೇರವಾಗಿ ದೇವರ ಗರ್ಭಗುಡಿಯತ್ತ ಸಾಗಿ ಗೋಡೆಯಲ್ಲಿ ತೂಗಿ ಹಾಕಿದ್ದ ಕೊಳ್ಳಿಯನ್ನೆತ್ತಿಕೊಂಡು ಬಂದನು. ದೀಪರಾಜಿಯ ಮಂದ ಬೆಳಕಿನಲ್ಲಿ ನೋಡುತ್ತಾನೆ… ದೇವಳದ ಅಂಗಣದ ಗೋಪುರದಲ್ಲಿ ಪುತ್ರ ಮದನ ರುಂಡ ಮುಂಡ ಛೇದಿಸಲ್ಪಟ್ಟು ರಕ್ತದೋಕುಳಿಯಲ್ಲಿ ಬಿದ್ದು ಸತ್ತು ಹೋಗಿದ್ದಾನೆ. ಮತ್ತೂ ಅನುಮಾನ! ಬಾಗಿ ರುಂಡವನ್ನು ತಿರುಗಿಸಿ ಮುಖ ನೋಡಿದರೆ… ಹೌದು ಮದನ ಕುಮಾರನೇ…. ದುಷ್ಟಬುದ್ದಿಯ ಆಕ್ರಂದನ ರಾವಣನ ರೌರವ ಧ್ವನಿಯಂತೆ ಮುಗಿಲು ಮುಟ್ಟಿತು. ದೇವಳದ ಗೋಡೆಗಳೇ ಬಿರಿಯುವಂತೆ ಆರ್ಭಟಿಸಿ ಅಳುವ ರೋದನೆ ತಾರಕಕ್ಕೇರಿದೆ. ಹರಿದು ಹೆಪ್ಪುಗಟ್ಟಿದ್ದ ರಕ್ತದ ಮಡುವಿನಲ್ಲಿ ಬಿದ್ದು ಹೊರಳಾಡುತ್ತಾ ಕುಂಕುಮಾಭಿಷಿಕ್ತನಾದಂತೆ ಕೆಂಪಾಗಿ ಹೋಗಿದ್ದಾನೆ ದುಷ್ಟಬುದ್ದಿ.

“ಮಗನೇ, ನಾನು ಕೆಟ್ಟವನಲ್ಲ ಮಗನೇ!!! ನನಗೇನೋ ಚಿಕ್ಕಪುಟ್ಟ ಆಸೆಗಳಿದ್ದವು. ಆದರೆ ಯಾವಾಗ ನೀನು ಜನಿಸಿದೆಯೋ ನಿನ್ನ ಶ್ರೇಯಸ್ಸನ್ನು ಕಾಣುವ ಮಹದಾಸೆ ನನ್ನ ಮನದಲ್ಲಿ ಮೂಡಿತು. ನೀನು ಬೆಳೆಯುತ್ತಾ ದೊಡ್ಡವನಾದಂತೆ ನನ್ನ ಆಸೆಯೂ ಬೆಳೆದು ಯುವಕನಾಯಿತು. ನಾನೇನೇ ಮಾಡಿದ್ದರೂ ಅದು ನಿನಗೋಸ್ಕರವೇ ಆಗಿದೆ. ಮುದಿ ಪ್ರಾಯದಂಚಿನಲ್ಲಿರುವ ನಾನು ಸಾವಿನತ್ತ ಮುಖ ಮಾಡಿದ್ದೇನೆ. ನನ್ನ ಸಂತಾನ ಸುಖದಲ್ಲಿರಬೇಕು. ಅಧಿಕಾರ ಬೇಕು, ಸೌಕರ್ಯ ಬೇಕು. ಏನೇನೋ ಕನಸು ಕಂಡು ಹುಚ್ಚನಂತೆ ಬೆಂಬತ್ತಿ ಹೋದೆ. ಮಗನೇ ನೀನೇ ಸತ್ತು ಬಿದ್ದ ಮೇಲೆ ನನ್ನ ಆಸೆಯೂ ಸತ್ತು ಮಣ್ಣು ಪಾಲಾಗಿ ಹೋಗಿದೆ. ಯಾಕಾಗಿ? ಯಾರಿಗಾಗಿ ಇನ್ನು ನಾನು ಬದುಕಬೇಕು? ನಾನೀಗ ದೇವರ ಗುಡಿಯಲ್ಲಿದ್ದರೂ, ದೇವರನ್ನು ಬೇಡುವುದಕ್ಕೆ ನನಗೇ ನಾಚಿಕೆಯಾಗುತ್ತಿದೆ. ಛೇ! ಅಂದು ಮಗು ಚಂದ್ರಹಾಸನನ್ನು ಕೊಂದು ಕಾಡಿನಲ್ಲಿ ಎಸೆಯಲು ಕಳುಹಿಸಿದ್ದ ಕಟುಕರಿಗೆ ಮೂಡಿದ್ದ ಕರುಣೆ, ಈವತ್ತು ಕಳುಹಿಸಿದ ಕಟುಕರಲ್ಲೂ ಮೂಡುತ್ತಿದ್ದರೆ ನನ್ನ ಮಗ ಬದುಕುತ್ತಿದ್ದನೋ ಏನೋ! ಇಲ್ಲ ಇಲ್ಲ ನಾನೇನೇ ತೊಂದರೆ ನೀಡಿದರೂ ಚಂದ್ರಹಾಸನಿಗೆ ಅದು ಸುವರ್ಣಾವಕಾಶವೇ ಆಗುತ್ತಾ ಹೋಯಿತು. ಅನಾಥ ಮಗುವನ್ನು ಚಂದನಾವತಿಯ ಕಾಡಿನಲ್ಲಿ ಕಟುಕರು ಬಿಟ್ಟು ಬಂದರೆ ಅಲ್ಲಿ ಆತ ರಾಜಕುಮಾರನಾಗಿ ಕುಳಿಂದಕನೊಂದಿಗೆ ಬೆಳೆದ. ಓಲೆಗೊಟ್ಟು ವಿಷ ನೀಡಿ ಕೊಲ್ಲಲು ನನ್ನ ಮಗ ಮದನನ ಬಳಿ ಕಳುಹಿಸಿದರೆ ವಿಷಯೆಯನ್ನೇ ನೀಡಿ ಮದುವೆ ಮಾಡಿ ಬಿಟ್ಟ. ಈಗ ದೇವಸ್ಥಾನಕ್ಕೆ ಪೂಜೆಗೆ ಕಳುಹಿಸಿ ಕೊಲೆ ಮಾಡಲು ನೋಡಿದರೆ ಆ ಚಂದ್ರಹಾಸ ರಾಜಕುಮಾರಿಯನ್ನು ವರಿಸಿ ಕುಂತಳದೇಶದ ರಾಜನೇ ಆಗಿ ಪಟ್ಟದಾನೆಯ ಮೇಲೆ ವಿರಾಜಮಾನನಾಗಿ ಮೆರವಣಿಗೆಯ ಸಂಭ್ರಮ ಸುಖ ಅನುಭವಿಸುತ್ತಿದ್ದಾನೆ. ಅಂದರೆ ಚಂದ್ರಹಾಸನಿಗೆ, ಆತನ ಒಳ್ಳೆಯತನಕ್ಕೆ ದೇವರ ಶ್ರೀರಕ್ಷೆಯಿದೆ. ಸಜ್ಜನನಾದ ಆತನನ್ನು ಪದೇ ಪದೇ ಪೀಡಿಸಲು ಹೋದ ನನಗೆ ಒಂದೆರಡು ಬಾರಿ ದೇವರು ಕ್ಷಮೆ ನೀಡಿದರೂ, ನಾನು ನನ್ನ ಬುದ್ದಿಯನ್ನು ತಿದ್ದಿಕೊಳ್ಳದೆ ಮತ್ತೂ ಅತಿರೇಕ ವರ್ತನೆ ತೋರಿದಾಗ ದೇವರು ನೀಡಿದ ಶಿಕ್ಷೆಯೇ ನನ್ನ ಮಗನ ದಾರುಣ ಸಾವು. ಚಂದ್ರಹಾಸ! ಅನಾಥ ಬಾಲಕನಾಗಿದ್ದ. ಬ್ರಾಹ್ಮಣ ಸಂತರ್ಪಣೆಯ ಸಮಯ ಮಹಾಜ್ಞಾನಿಗಳಾದ ಬ್ರಾಹ್ಮಣೋತ್ತಮರು ಬಾಲ್ಯದಲ್ಲೇ ಚಂದ್ರಹಾಸನಲ್ಲಿರುವ ಅಂಗಲಕ್ಷಣಗಳನ್ನೂ, ತೇಜಸ್ಸನ್ನೂ ಗುರುತಿಸಿ ಭವಿಷ್ಯತ್ತಿನಲ್ಲಿ ರಾಜನಾಗುವ ರಾಜಲಕ್ಷಣಗಳೂ, ರಾಜಯೋಗವೂ ಈ ಬಾಲಕನಿಗೆ. ಹಾಗಾಗಿ ಆತನನ್ನು ಸಾಕಿ ಸಲಹುವ ಎಲ್ಲಾ ವ್ಯವಸ್ಥೆಗಳನ್ನು ಒದಗಿಸಿ ಕೊಡು ಎಂದು ಹೇಳಿದ್ದರು. ಸಜ್ಜನ ಮಂತ್ರಿಯಾಗಿ ನಾನು ಹಾಗೇನಾದರು ಮಾಡಿದ್ದಿದ್ದರೆ ಈಗ ಇಂತಹ ದುಸ್ಥಿತಿ ನನಗೊದಗುತ್ತಿರಲಿಲ್ಲ. ನನ್ನ ಮಗ ಮದನನೂ ಸಾಯದೆ ಬದುಕುಳಿಯುತ್ತಿದ್ದ. ಸ್ವಾರ್ಥ ಸಾಧನೆಗೆ ಮುಂದಾಗಿ ಚಂದ್ರಹಾಸನನ್ನು ಕೊಂದು ಮುಗಿಸಲು ಎಷ್ಟೇ ಪ್ರಯತ್ನ ಪಟ್ಟರೂ, ವಿಧಿಲಿಖಿತವನ್ನು ಮೀರಿ ಬೆಳೆಯಲು ನನ್ನಿಂದಾಗದೇ ಹೋಯಿತು. ಈಗ ನನ್ನ ಮಗಳನ್ನೂ ರಾಜ ಕುಮಾರಿಯನ್ನೂ ವರಿಸಿ ಕುಂತಳದ ರಾಜನೇ ಆದ ಚಂದ್ರಹಾಸನ ಜೊತೆ ಉತ್ತಮ ಬಾಂಧವ್ಯದಿಂದ ಗೌರವಯುತವಾಗಿ ಬಾಳಬಹುದಿತ್ತು. ಕೆಟ್ಟ ಮೇಲೆ ಬುದ್ದಿ ಬಂದು ಏನು ಫಲ? ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ. ಇನ್ನು ನನ್ನಂತಹ ದುರ್ಬುದ್ಧಿಯವನು ಬದುಕಬಾರದು. ಮಗನ ಭವ್ಯ ಭವಿಷ್ಯತ್ತಿಗಾಗಿ ಹೋರಾಡುತ್ತಿದ್ದೆ, ಆದರೆ ನಾನೇ ನನ್ನ ಮಗನ ಕೊಲೆ ಮಾಡಿಸುವಂತೆ ಆಗಿ ಹೋಯಿತು. ಈ ಪಶ್ಚಾತ್ತಾಪ, ಪಾಪಪ್ರಜ್ಞೆಯೇ ನನ್ನನ್ನು ಹಿಂಸಿಸಿ ಕಾಡುತ್ತಿದೆ.” ಹೀಗೆ ಯೋಚಿಸಿ ಪ್ರಾಣ ತ್ಯಾಗ ಮಾಡಲು ಸಿದ್ಧನಾದನು. ಗುಡಿಯಲ್ಲಿರುವ ದೇವಿಯತ್ತ ತಿರುಗಿ “ತಾಯೇ! ನಿನ್ನಲ್ಲಿ ಕ್ಷಮೆ ಬೇಡುವಷ್ಟರ ಕನಿಷ್ಟ ಯೋಗ್ಯತೆಯನ್ನೂ ನಾನು ಉಳಿಸಿಕೊಂಡಿಲ್ಲ. ಮೇಲಾಗಿ ಬದುಕಿ ಸಾಧಿಸಬೇಕಾದದ್ದೂ ಏನೂ ಉಳಿದಿಲ್ಲ. ಮಾಡಿದ್ದುಣ್ಣೋ ಮಹಾರಾಯ ಎಂಬಂತಾಗಿದೆ ನನ್ನ ಪರಿಸ್ಥಿತಿ.” ಎಂದು ಹೇಳುತ್ತಾ, ದೇವಸ್ಥಾನದ ಕಲ್ಲ ಕಂಬಕ್ಕೆ ಬಲವಾಗಿ ತಲೆಗುದ್ದುತ್ತಾ ತಲೆಯೊಡೆಸಿಕೊಂಡು ಬಿದ್ದನು. ಬಿದ್ದಲ್ಲಿಯೇ ಮಂತ್ರೀಶನ ಪ್ರಾಣ ಪಕ್ಷಿ ಹಾರಿ ಹೋಯಿತು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page