
ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳ ದಾಖಲಾತಿ ಮತ್ತು ಶುಲ್ಕ ವಸೂಲಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಹತ್ವದ ಸೂಚನೆ ನೀಡಿದೆ. 2025-26ನೇ ಸಾಲಿನ ದಾಖಲಾತಿ ಹಾಗೂ ಶುಲ್ಕ ವಸೂಲಿ ಪೂರ್ಣಗೊಂಡ ಬಳಿಕ, ನಿಗದಿಪಡಿಸಿರುವ ಶುಲ್ಕದ ಸಂಪೂರ್ಣ ವಿವರವನ್ನು ಶಾಲಾ ವೆಬ್ಸೈಟ್ ಮತ್ತು ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತ ವಿಕಾಸ್ ಕಿಶೋರ್ ಸುರಳ್ಕರ್ ಸುತ್ತೋಲೆ ಹೊರಡಿಸಿದ್ದಾರೆ.
ಖಾಸಗಿ ಶಾಲೆಗಳಲ್ಲಿ ದಾಖಲಾತಿ ವೇಳೆ ನಡೆಯಬಹುದಾದ ಅಕ್ರಮ ಶುಲ್ಕ ವಸೂಲಿ ತಡೆಯುವುದು ಹಾಗೂ ಪೋಷಕರಿಗೆ ಶುಲ್ಕದ ಬಗ್ಗೆ ಪಾರದರ್ಶಕ ಮಾಹಿತಿ ನೀಡುವುದು ಈ ಕ್ರಮದ ಉದ್ದೇಶವಾಗಿದೆ. ಶಾಲೆಗಳು ಯಾವುದೇ ಗುಪ್ತ ಅಥವಾ ಹೆಚ್ಚುವರಿ ಶುಲ್ಕ ವಿಧಿಸದಂತೆ ಇಲಾಖೆ ಸೂಚಿಸಿದೆ.
ಡೊನೇಷನ್ ಪಡೆದರೆ 10 ಪಟ್ಟು ದಂಡ
ಶಾಲೆಗಳು ವಿದ್ಯಾರ್ಥಿಗಳು ಅಥವಾ ಪೋಷಕರಿಂದ ಡೊನೇಷನ್, ಕ್ಯಾಪಿಟೇಷನ್ ಶುಲ್ಕ ಸೇರಿದಂತೆ ಯಾವುದೇ ಅಕ್ರಮ ಹಣ ಪಡೆಯುವಂತಿಲ್ಲ. ನಿಯಮ ಉಲ್ಲಂಘಿಸಿ ಡೊನೇಷನ್ ಪಡೆದಿರುವುದು ಸಾಬೀತಾದರೆ, ವಸೂಲಿ ಮಾಡಿದ ಮೊತ್ತದ ಹತ್ತು ಪಟ್ಟು ದಂಡ ವಿಧಿಸಲಾಗುತ್ತದೆ.
ದಾಖಲಾತಿಗೂ ಮುನ್ನ ವಿದ್ಯಾರ್ಥಿ ಅಥವಾ ಪೋಷಕರಿಗೆ ಯಾವುದೇ ರೀತಿಯ ಪರೀಕ್ಷೆ ನಡೆಸುವುದನ್ನೂ ಇಲಾಖೆ ನಿಷೇಧಿಸಿದೆ. ಮಗುವಿನ ಬುದ್ಧಿವಂತಿಕೆ, ಪೋಷಕರ ವಿದ್ಯಾರ್ಹತೆ ಸೇರಿದಂತೆ ಯಾವುದೇ ವಿಚಾರದ ಆಧಾರದ ಮೇಲೆ ಟೆಸ್ಟ್ ನಡೆಸುವಂತಿಲ್ಲ. ಮೊದಲ ಬಾರಿ ನಿಯಮ ಉಲ್ಲಂಘಿಸಿದರೆ ₹25 ಸಾವಿರ ಹಾಗೂ ಮರುಕಳಿಸಿದರೆ ಪ್ರತಿ ಬಾರಿ ₹50 ಸಾವಿರ ದಂಡ ವಿಧಿಸಲಾಗುತ್ತದೆ.
ಈ ನಿಯಮಗಳನ್ನು ಜಾರಿಗೊಳಿಸುವ ಹೊಣೆ ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲಿದೆ. ದೂರುಗಳು ಬಂದಲ್ಲಿ ಪರಿಶೀಲನೆ ನಡೆಸಿ, ತಪ್ಪಿತಸ್ಥ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಶುಲ್ಕದ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವುದರಿಂದ ಪೋಷಕರು ಶಾಲೆಗಳ ಶುಲ್ಕವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಅಲ್ಲದೆ, ಅನಗತ್ಯ ಶುಲ್ಕ ವಸೂಲಿ ಮತ್ತು ದಾಖಲಾತಿ ಸಂದರ್ಭದ ಅಕ್ರಮಗಳನ್ನು ನಿಯಂತ್ರಿಸಲು ಈ ಕ್ರಮ ಸಹಕಾರಿಯಾಗಲಿದೆ.
ನಿಯಮ ಉಲ್ಲಂಘಿಸುವ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಇಲಾಖೆ ಸೂಚಿಸಿದ್ದು, ಯಾವುದೇ ಅಕ್ರಮ ಕಂಡುಬಂದರೆ ಪೋಷಕರು ಸಂಬಂಧಪಟ್ಟ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಬಹುದಾಗಿದೆ.

























































