ಭಾಗ 605
ಭರತೇಶ್ ಶೆಟ್ಟಿ ,ಎಕ್ಕಾರು

ಸಂಚಿಕೆ ೬೦೫ ಮಹಾಭಾರತ
ದುಷ್ಟ ಬುದ್ಧಿ ಹತ್ತು ಬಾರಿ ಓದಿ ನೋಡಿದರೂ, ವಿಷಯೆಯನ್ನು ಎಂದೇ ಇದೆ. ವಿಷವನ್ನು ಎಂದು ಬರೆದಿದ್ದೆನಲ್ಲಾ! ಅವಸರದಲ್ಲಿ ನನ್ನ ಕೈಯಲ್ಲೇ ತಪ್ಪಾಗಿ ಹೋಯಿತೇ ಎಂದು ಮತ್ತೆ ಮತ್ತೆ ಪರಿಶೀಲಿಸಿ ನೋಡಿದರೂ ಏನೂ ವ್ಯತ್ಯಾಸಗಳಿಲ್ಲ. ಗೊಂದಲ, ಆತುರ, ಅವಸರಗಳಿಗೆ ಒಳಗಾಗಿದ್ದ ನಾನೇ ತಪ್ಪು ಬರೆದಿರಬೇಕು. ಛೇ ಅವಸರವೇ ಅವಘಡಕ್ಕೆ ಕಾರಣವಾಯಿತಲ್ಲ. ಅಳಿಯಬೇಕಾದವನು ಅಳಿಯದೆ ಉಳಿದು ಅಳಿಯನಾಗಿ ಬಿಟ್ಟನಲ್ಲಾ! ಓಲೆಯನ್ನು ಹಿಸುಕಿ ಹಿಡಿದು ತನ್ನ ಆಕ್ರೋಶವನ್ನು ಅದರ ಮೇಲೆ ತೀರಿಸಿಕೊಂಡ. ತಾನೊಂದು ಬಗೆದರೆ, ದೈವ ಇನ್ನೊಂದು ಬಗೆಯುತ್ತದೆ. ಕಾಣದ ಕೈ ತನ್ನ ಕೆಲಸವನ್ನು ಮಾಡುತ್ತಲೇ ಇರುತ್ತದೆ. ಕೃತ ಕರ್ಮ ಫಲ ಎಲ್ಲೇ ಹೋಗಿ ಅಡಗಿದರೂ ದಾರಿ ತಪ್ಪದೆ ಕರ್ತೃವನ್ನೇ ಬೆಂಬತ್ತಿ ಹೋಗುತ್ತದೆ ಹೀಗೆಲ್ಲಾ ಶಾಸ್ತ್ರಗಳು ಸಾರಿ ಹೇಳಿರುವುದು ದುಷ್ಟಬುದ್ದಿಯ ವಿಚಾರದಲ್ಲಿ ನಿದರ್ಶನವಾಗಿ ಪ್ರಕಟವಾಗಿದೆ.
ದುಷ್ಟಬುದ್ದಿಯ ಸ್ಥಿತಿ ವಿವರಿಸಲಾಗದಷ್ಟು ಅತಂತ್ರವಾಗಿದೆ. ಏನು ಯೋಚಿಸಿದರೂ ಯಾವ ತಂತ್ರ – ಉಪಾಯಗಳೂ ಹೊಳೆಯುತ್ತಿಲ್ಲ. ಹೊರ ನಡೆದು ಎತ್ತಲೋ ಹೋಗುತ್ತಿದ್ದಾನೆ. ಒಬ್ಬನೇ ಏನೇನೋ ಮಾತನಾಡುತ್ತಿದ್ದಾನೆ. ಕೈ ಕಾಲುಗಳ ಆಂಗಿಕ ಅಭಿನಯದಲ್ಲಿ ಅವ್ಯಕ್ತ ಕ್ರೋಧ ಹೊರಗೆಡಹುವಂತೆ, ಮಹಾಕೋಪವನ್ನು ತಾಳಲಾರದೆ ಒದ್ದಾಡುವವನಂತೆ ವರ್ತಿಸತೊಡಗಿದ್ದಾನೆ. ತನ್ನನ್ನು ಯಾರಾದರೂ ನೋಡುತ್ತಿದ್ದಾರೋ ಎಂಬ ಪರಿವೆಯೇ ಇಲ್ಲ. ಯಥಾರ್ಥದಲ್ಲಿ ಹೇಳಬೇಕಾದರೆ ಮತಿಭ್ರಮಣೆಗೊಂಡು, ಮಾನಸಿಕ ಸ್ಥಿಮಿತ ಕಳಕೊಂಡು ಹುಚ್ಚನೇ ಆಗಿ ಹೋಗಿದ್ದಾನೆ. ರಸ್ತೆಯ ಬದಿಯ ಕಲ್ಲಿಗೆ ತನ್ನ ಅಸಹನೆಯ ಉಪಶಮನಕ್ಕಾಗಿ ಬಲವಾಗಿ ಒದ್ದು “ಅಯ್ಯೋ” ಎಂದು ಅಳುವಷ್ಟರ ಮಟ್ಟಿಗೆ ಭ್ರಾಂತನಾಗಿದ್ದಾನೆ.
ಗದ್ದೆ ಸುಟ್ಟರೂ ಕೆಟ್ಟ ಬೀಜ ಬೂದಿಯಾಗದು ಎಂಬ ಮಾತಿದೆ. ಹುಚ್ಚೆದ್ದು ತಲೆಗೆಡುವಷ್ಟು ಅಡಿಗಡಿಗೆ ಸೋಲಾದರೂ ತನ್ನಾಸೆ ಕೈಗೂಡದೆ ಬಿಡಲಾರೆ ಎನ್ನುವ ದೌಷ್ಟ್ಯ ಬುದ್ದಿಯನ್ನೇ ಈ ದುಷ್ಟಬುದ್ದಿ ಪ್ರದರ್ಶಿಸತೊಡಗಿದ್ದಾನೆ. ಏನಾದರು ಆಗಲಿ, ಈ ಚಂದ್ರಹಾಸ ಬದುಕುಳಿಯಲೇ ಬಾರದು. ಮೊದಲು ಆಳುಗಳನ್ನು ನಂಬಿ ಕೆಟ್ಟೆ. ನಂತರ ಮಗನ ಮೂಲಕವೂ ಕಾರ್ಯ ಸಾಧನೆಯಾಗಲಿಲ್ಲ. ಈ ಬಾರಿ ಸ್ವಯಂ ನಾನೇ ನಿಂತು ಕೆಲಸ ಮಾಡಿಸುತ್ತೇನೆ. ಹೀಗೆ ಯೋಚಿಸುತ್ತಾ ಏನೋ ಒಂದು ಮಾರಣತಂತ್ರ ಹೆಣೆದಿದ್ದಾನೆ. ಮುಗುಳ್ನಗುತ್ತಾ ಮೀಸೆಯ ಮೇಲೆ ಕೈ ಹಾಕಿ ಸವರ ತೊಡಗಿದ್ದಾನೆ. ತನ್ನ ತಂತ್ರಗಾರಿಕೆಗೆ ಸಹಾಯಕರಾಗಿ ಈ ಭಾರಿ ಅತಿ ನಿಷ್ಠಾವಂತರಾದ, ತನ್ನ ಪರಮ ಆಪ್ತ ವಲಯದ ಈರ್ವರನ್ನು ಬಳಿ ಕರೆಸಿಕೊಂಡನು. ತನ್ನ ಯೋಜನೆಯನ್ನು ಅವರಿಗೆ ವಿವರಿಸಿ, ಹೇಳ ಬೇಕಾದುದೆಲ್ಲವನ್ನು ಮನವರಿಕೆಯಾಗುವಂತೆ ಮತ್ತೆ ಮತ್ತೆ ವಿವರಿಸಿ ಹೇಳಿ ಯಥೇಚ್ಚ ಉಡುಗೊರೆಗಳನ್ನು ಕೊಟ್ಟು, ಕೆಲಸ ಪೂರೈಸಿದ ಬಳಿಕ ಮತ್ತಷ್ಟು ಕೊಡುವ ಭರವಸೆಯನ್ನಿತ್ತು ಕಳುಹಿಸಿದನು.
ಅರ್ಧ ಕಾರ್ಯ ಸಾಧಿಸಿದ ಸಂತಸದಿಂದ ದುಷ್ಟಬುದ್ದಿ ತಿರುಗಿ ತನ್ನ ನಿವಾಸಕ್ಕೆ ಬಂದು ಶೌಚ ಕ್ರಿಯೆ ಸ್ನಾನಾದಿಗಳನ್ನು ಪೂರೈಸಿ ಪ್ರಶಾಂತ ಮನಸ್ಸಿನಿಂದ ನಿರಾಳನಾಗಿ ಮನೆಯಲ್ಲಿ ಕುಳಿತನು. ತನ್ನ ಯೋಜನೆಯ ಉಳಿದರ್ಧ ಭಾಗವನ್ನು ಪೂರ್ತಿಗೊಳಿಸಲು ಸಿದ್ಧನಾಗುತ್ತಿದ್ದಾನೆ. ಪರಿಚಾರಕರನ್ನು ಕರೆದು “ಚಂದ್ರಹಾಸನೆಲ್ಲಿದ್ದಾನೆ, ಏನೋ ಅಗತ್ಯ ಕಾರ್ಯವಿದೆಯಂತೆ. ಮಾವನಾದ ನಾನು ಕರೆಯುತ್ತಿದ್ದೇನೆಂದು ತಿಳಿಸಿ” ಎಂದು ಹೇಳಿ ಕಳುಹಿಸಿದನು.
ಚಂದ್ರಹಾಸ ಆಗಷ್ಟೇ ನಿತ್ಯಕರ್ಮ ದೇವತಾ ವಂದನೆ, ಅನುಷ್ಠಾನಗಳನ್ನು ಪೂರೈಸಿ ಕುಳಿತಿದ್ದ. ತನ್ನ ಮಾವನ ಕರೆಯ ವಿಚಾರ ತಿಳಿದು ಅವರ ಬಳಿ ಬಂದು ನಮಿಸಿದ. ಆಗ ಅಳಿಯ ಬಂದುದನ್ನು ಕಂಡ ಮಾವ “ಮಗನೇ ಚಂದ್ರಹಾಸಾ ಬಂದೆಯಾ! ಅಂದು ಚಂದನಾವತಿಯಲ್ಲಿ ನಿನ್ನನ್ನು ನೋಡಿದಾಕ್ಷಣ, ನಿನ್ನ ಬಗೆಗಿನ ಗುಣಗಾನಗಳನ್ನು ಕೇಳಿ, ನಿನ್ನ ಸಾಧನೆಗಳನ್ನು ತಿಳಿದು ಸಂತಸಗೊಂಡು, ನನ್ನ ಮಗಳಿಗೆ ಅನುರೂಪನಾದ ವರ ನೀನೇ ಎಂದು ಅಲ್ಲೇ ತೀರ್ಮಾನಿಸಿದೆ. ನಿನ್ನ ರೂಪ, ಗುಣ, ನಡತೆ, ಶೀಲ, ಸಾಮರ್ಥ್ಯ, ಬುದ್ಧಿವಂತಿಕೆಗೆ ನಾನೆಷ್ಟು ಪರವಶನಾದೆ ಎಂದರೆ ನಿಜವಾಗಿಯೂ ಪರಮ ಸ್ವಾರ್ಥಿಯಾಗಿ ಹೋಗಿ ಬಿಟ್ಟೆ. ಕ್ರಮ ಪ್ರಕಾರ ಮರಳಿ ಕುಂತಳಕ್ಕೆ ಬಂದು ಮಗಳು ವಿಷಯೆಗೆ ನಿನ್ನ ಬಗ್ಗೆ ತಿಳಿಸಿ ಅವಳ ಅಭಿಪ್ರಾಯ ಕೇಳಿ, ನಂತರ ನಿಮಗೆ ವಿವಾಹ ಪ್ರಸ್ತಾಪ ಕಳುಹಿಸಿ ಮುಂದುವರಿಯಬಹುದಿತ್ತು. ಆದರೆ ನನಗೊಂದು ಭಯ ಕಾಡಿತು. ಬಿಟ್ಟ ಬಾಣ ಮತ್ತು ಕಳಕೊಂಡ ಅವಕಾಶ ಮರಳಿ ಸಿಗುವ ಸಾಧ್ಯತೆ ತೀರಾ ಕಡಿಮೆ ನಾನೇನಾದರು ನಿನ್ನನ್ನು ನೋಡಿ ಅಲ್ಲಿಂದ ಕೆಲ ದಿನ ಕಳೆದು ಬಂದು ಮತ್ತೆ ನಿಧಾನವಾಗಿ ಯೋಚಿಸಿ ವಿಚಾರ ತಿಳಿಸುವಷ್ಟರಲ್ಲಿ ನಿನ್ನ ಮದುವೆ ಬೇರೆ ಯಾರ ಜೊತೆಗಾದರೂ ಆಗಿ ಹೋದರೆ? ಮತ್ತೆ ನಿನ್ನಂತಹ ಅಪರೂಪದ ಉತ್ತಮ ವರ ಸಿಗುವುದಕ್ಕುಂಟೇ? ಹಾಗಾಗಿ ಅವಸರದ ಓಲೆ ನಿನ್ನ ಕೈಯಲ್ಲೇ ಕಳುಹಿಸಿ, ಮದುವೆ ಶಾಸ್ತ್ರವನ್ನು ಕಿಂಚಿತ್ ತಡವಾಗದಂತೆ ಮಾಡಿ ಮುಗಿಸುವ ನಿರ್ಣಯ ಕೈಗೊಂಡೆ. ಈ ಆತುರದಲ್ಲಿ ಒಂದು ವಿಚಾರ ಓಲೆಯಲ್ಲಿ ಬರೆಯಲು ಮರೆತು ಬಿಟ್ಟೆ. ಅದೇನೆಂದರೆ ಕುಂತಳ ದೇಶದ ಪರಂಪರೆಯಂತೆ ಮದುವೆಯಾದ ಹೊಸ ಮದುಮಗ ನಮ್ಮ ಊರ ಹೊರ ಭಾಗದಲ್ಲಿರುವ ದೇವಿಯ ಗುಡಿಗೆ ಹಣ್ಣು ಕಾಯಿ ಕೊಂಡು ಹೋಗಿ, ಪೂಜೆ ಮಾಡಿ ಬರುವುದು ಪ್ರಧಾನ ಸಂಪ್ರದಾಯ. ಶ್ರೀದೇವಿಯ ಪ್ರಸಾದ ಸ್ವೀಕರಿಸಿ ನಂತರ ದಾಂಪತ್ಯ ಜೀವನಾರಾಂಭ ಮಾಡಬೇಕು. ಆದರೆ ಆತಂಕದಲ್ಲಿದ್ದ ನನಗೆ ಈ ವಿಚಾರ ಬರೆಯಲು ಮರೆತು ಹೋಯಿತು. ನನಗೆ ಮರೆತು ಹೋದರೂ ಮದುವೆ ಶಾಸ್ತ್ರ ನೆರವೇರಿಸಿದ ಪುರೋಹಿತರಾದರೂ ಈ ಸಂಪ್ರದಾಯ ನೆನಪಿಸಿದ್ದರೆ ನೀನು ಪಾಲಿಸುತ್ತಿದ್ದೆ. ತೊಂದರೆ ಇಲ್ಲ, ಮನುಷ್ಯರಾದ ನಮ್ಮಿಂದ ವ್ಯತ್ಯಾಸಗಳಾಗುವುದು ಸಹಜ. ಅರಿಯದೆ ಆಗಿ ಹೋದರೆ ಅದು ಪ್ರಮಾದ. ಅರಿತು ಮಾಡಿದರೆ ಅದು ಅಪರಾಧ ನಮ್ಮಿಂದ ಆಗಿ ಹೋದುದು ಪ್ರಮಾದ, ಹಾಗಾಗಿ ದೇವರಲ್ಲಿ ಕ್ಷಮೆ ಬೇಡಿದರೆ ಖಂಡಿತವಾಗಿ ಮನ್ನಿಸುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ತಡವಾದರು ಈಗ ನೆನಪಾಗಿದೆಯಲ್ಲ, ಕಾಲಹರಣ ಮಾಡದೆ, ರಾತ್ರಿಯಾಗುತ್ತಾ ಬಂದರೂ ತೊಂದರೆ ಇಲ್ಲ, ನೀನು ಈಗಲೇ ದೇವಿಯ ಆಲಯಕ್ಕೆ ಹೋಗಿ ದೇವಿಯನ್ನು ಅರ್ಚಿಸಿ ಪ್ರಸಾದವನ್ನು ತಂದು ನಿನ್ನ ಪತ್ನಿಯೂ, ನನ್ನ ಮಗಳೂ ಆದ ವಿಷಯೆಗೆ ಕೊಡಬೇಕು. ದೇವಸ್ಥಾನಕ್ಕೆ ನೀನು ಒಬ್ಬನೇ ಹೋಗಿ ಬರಬೇಕು – ಅದೇ ನಮ್ಮೂರಿನ ಸಂಪ್ರದಾಯ ಕ್ರಮ” ಎಂದು ಬಹಳ ಅಕ್ಕರೆ, ಮಮಕಾರದ ದನಿಯಲ್ಲಿ ಸವಿಸ್ತಾರವಾಗಿ ಹೇಳಿದನು.
ದೇವ ದೇವಿಯರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿ ಬರಲು ಹೇಳಿದರೆ ಚಂದ್ರಹಾಸನಿಗೆ ಅದಕ್ಕಿಂತ ಸುಖಪ್ರದವಾದ ವಿಚಾರ ಇನ್ನೇನು ಇರಲು ಸಾಧ್ಯ? ಅತಿ ಸಂತೋಷದಿಂದ ಈಗಲೇ ಹೂ, ಹಣ್ಣು ಕಾಯಿ, ಬೇಕಾದ ಪೂಜಾ ಸಾಮಾಗ್ರಿಗಳೊಂದಿಗೆ ದೇವಸ್ಥಾನಕ್ಕೆ ಹೊರಡುತ್ತೇನೆ ಎಂದು ಹೇಳಿ, ಅನುಮತಿ ಕೇಳಿ ಹೊರಟನು. ಕೂಡಲೇ ಪೂಜಾ ಸಾಮಾಗ್ರಿಗಳನ್ನು ಹಿಡಿದುಕೊಂಡು ಭಕ್ತಿಯಿಂದ ಚಂದ್ರಹಾಸ ದೇವಸ್ಥಾನಕ್ಕೆ ಹೊರಟು ಹೋದನು. ದುಷ್ಟಬುದ್ದಿ ಏನೋ ಯೋಚಿಸುತ್ತಾ ಅತ್ತಿತ್ತ ನಾಲ್ಕೈದು ಸುತ್ತು ನಡೆದು, ಆತನೂ ಎತ್ತಲೋ ಹೊರಟು ಹೋದನು.
ಮಂತ್ರಿ ನಿವಾಸದಲ್ಲಿ ದುಷ್ಟಬುದ್ದಿಯೂ ಇಲ್ಲ, ಚಂದ್ರಹಾಸನೂ ಇಲ್ಲ. ಇದೇ ಸಮಯ ಕುಂತಳದೇಶದ ಅರಮನೆಯಿಂದ ರಾಜ ಭಟರು ಮಂತ್ರಿಯ ಮನೆಗೆ ಬಂದರು. ಬಂದಂತಹ ರಾಜಭಟರನ್ನು ಇದಿರ್ಗೊಂಡು ಮಂತ್ರಿಸುತ ಮದನಕುಮಾರ ವಿಚಾರಿಸಿದನು “ಸ್ವಾಮೀ! ನಿಮ್ಮ ಸೋದರಿಯ ಗಂಡ ಚಂದ್ರಹಾಸ ಈ ಕೂಡಲೆ ಅರಮನೆಗೆ ಬರಬೇಕಂತೆ. ಮಹಾರಾಜರು ಅವಸರದ ಕರೆಯಿತ್ತಿದ್ದಾರೆ” ಎಂದು ತಿಳಿಸಿದರು.
ಮದನಕುಮಾರನಿಗೆ ಸಂದಿಗ್ಧ ಪರಿಸ್ಥಿತಿ. ಒಂದೆಡೆ ನನ್ನ ಅಪ್ಪನ ಮಾತಿನಂತೆ ಚಂದ್ರಹಾಸ ದೇವಸ್ಥಾನಕ್ಕೆ ತೆರಳಿದ್ದಾನೆ. ಇತ್ತ ರಾಜಾಜ್ಞೆಯಾಗಿದೆ. ಚಂದ್ರಹಾಸ ಈ ಕೂಡಲೇ ಕುಂತಳದ ಅರಮನೆಗೆ ಬರಬೇಕೆಂದು. ಏನು ಮಾಡೋಣ ಈಗ ಎಂಬ ದ್ವಂದ್ವಕ್ಕೆ ಸಿಲುಕಿ ಯೋಚಿಸುತ್ತಿದ್ದಾನೆ.
ಮುಂದುವರಿಯುವುದು…

























































