
ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇರ ಹೊಣೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಕಳೆದ ತಿಂಗಳು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳನ್ನು ಬುಧವಾರ ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಜುಲೈ 20ರ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಬೆದರಿಕೆ ಮತ್ತು ದೌರ್ಜನ್ಯ ನಡೆದಿರುವ ಬಗ್ಗೆ ಅವರು ತಮ್ಮೊಂದಿಗೆ ಹಂಚಿಕೊಂಡಿದ್ದಾರೆ ಎಂದು ಹೇಳಿದರು.
ದೇಶದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಧ್ವನಿ ಎತ್ತುವುದು ಅಪರಾಧವಲ್ಲ. ಸಂವಿಧಾನ, ಶಿಕ್ಷಣ ಮತ್ತು ದೇಶದ ಭವಿಷ್ಯಕ್ಕಾಗಿ ಹೋರಾಡಿದ ಸಾವಿರಾರು ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆ ಇದೆ. ವಿದ್ಯಾರ್ಥಿಗಳು ಹಿಂಸಾಚಾರ ಬಯಸುತ್ತಿಲ್ಲ ಬದಲಿಗೆ, ಸುಧಾರಣೆಯನ್ನು ಬಯಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ತಿಳಿಸಿದರು.
ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಪಡೆ ಬಳಸಲು ಕೇಂದ್ರ ಗೃಹ ಸಚಿವರೇ ಕಾರಣ ಎಂದು ನೇರವಾಗಿ ಆರೋಪಿಸಿದ ರಾಹುಲ್ ಗಾಂಧಿ ಶಾ ಅವರು ಅಪರಾಧಿ ಪ್ರಜ್ಞೆಯಿಂದ ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಅವರಿಗೆ ಸಂಸತ್ತಿಗೆ ಬರುವ ಧೈರ್ಯ ಇಲ್ಲ. ಏನಾಯಿತು ಎಂಬುದರ ಕುರಿತು ಪ್ರತಿಕ್ರಿಯಿಸುವ ಸಭ್ಯತೆ ಅಥವಾ ಧೈರ್ಯ ಎರಡೂ ಇಲ್ಲ ಎಂದು ಟೀಕಿಸಿದರು.

























































