ಭಾಗ -604
ಭರತೇಶ ಶೆಟ್ಟಿ, ಎಕ್ಕಾರು

ಮಂತ್ರಿ ಕುಮಾರ ಮದನ ತನ್ನ ಸೋದರಿ ವಿಷಯೆಯನ್ನು ಕರೆಸಿ, ಪಿತಾಶ್ರೀಯವರು ಕಳುಹಿಸಿರುವ ಓಲೆಯನ್ನು ಕೈಗಿತ್ತು ಮಂದಸ್ಮಿತನಾಗಿ ನಿಂತನು. ವಿಷಯೆ ತುಸು ದೂರದಲ್ಲಿ ನಿಂತಿದ್ದ ಚಂದ್ರಹಾಸನನ್ನು ಇಣುಕಿ ಅಣ್ಣನ ಕಣ್ತಪ್ಪಿಸಿ ಓರೆ ಕಣ್ಣಿಂದ ನೋಡುತ್ತಿದ್ದಳು. ಮೊದಲೇ ತಾನು ಮನಸೋತಿದ್ದ ಗಂಡು, ಈಗ ನಮ್ಮ ಮನೆಯಲ್ಲೇ ಇದ್ದಾನೆ. ಈಗ ಅಣ್ಣ ಓಲೆಯನ್ನು ತನ್ನ ಕೈಗಿತ್ತಿದ್ದಾನೆ. ಮೊದಲೇ ಎಲ್ಲಾ ವಿಷಯ ತಿಳಿದಿದ್ದರೂ, ಏನೂ ಗೊತ್ತಿಲ್ಲದೆ ಓಲೆ ಓದುವಂತೆ ಕುತೂಹಲದಿಂದ ಓದಿದಳು. ಬಳಿಕ ನಾಚುತ್ತಾ, ಓಲೆಯನ್ನು ನೆಲ ನೋಟಕಳಾಗಿಯೇ ಅಣ್ಣನ ಕೈಗಿತ್ತು, ಕರವಸ್ತ್ರದಿಂದ ನಾಚಿದ ಮುಖವನ್ನು ಮರೆ ಮಾಡಿ ತನ್ನ ಅಂತಃಪುರದತ್ತ ಓಡಿದಳು. ಅವಳಿಗೆ ನಾಚಿಗೆಯಾಗಿತ್ತೋ ಅಲ್ಲ ತನ್ನ ಕೈಚಳಕಕ್ಕೆ ಸಂತಸದ ನಗೆ ಬಂದಿತ್ತೋ! ಅವಳಿಗೇ ಗೊತ್ತು.
ಇತ್ತ ಏನೂ ಉತ್ತರ ನೀಡದೆ ನಿಂತಿದ್ದ ಚಂದ್ರಹಾಸನ ಬಳಿ ಬಂದ ಮಂತ್ರಿ ಕುಮಾರ ಮದನ “ಚಂದನಾವತಿಯ ಯುವರಾಜರೇ, ನನ್ನ ಪಿತಾಶ್ರೀಯವರು ಕಳುಹಿಸಿರುವ ಓಲೆಯಿದು, ವಿವರಗಳನ್ನು ಈಗಾಗಲೇ ತಿಳಿಯಪಡಿಸಿದ್ದೇನೆ ಎಂದು ಓಲೆಯನ್ನು ಚಂದ್ರಹಾಸನ ಕೈಗಿತ್ತನು. ಓದಿ ನೋಡಿದ ಚಂದ್ರಹಾಸನು ಮನಸಾರೆ ಶ್ರೀಹರಿಯನ್ನು ಸ್ಮರಿಸಿ ” ನನ್ನ ಜೀವನದಲ್ಲಿ ಏನೇ ನಡೆದಿದ್ದರೂ ಅದೆಲ್ಲವನ್ನೂ ದೇವರಿಗೇ ಸಮರ್ಪಿಸಿದ್ದೇನೆ. ಈ ಕಲ್ಯಾಣವೂ ದೈವೇಚ್ಚೆಯೇ ಎಂದು ತಿಳಿಯುತ್ತೇನೆ. ಮಂತ್ರಿಗಳ ಆದೇಶಕ್ಕೆ ಬದ್ದನಾಗಿ ನಡಕೊಳ್ಳಬೇಕಾದುದು ನಮ್ಮ ಜವಾಬ್ದಾರಿ. ಉಲ್ಲಂಘಿಸಿ ತಿರಸ್ಕರಿಸುವ ಸ್ವಾತಂತ್ರ್ಯ ನಮಗಿಲ್ಲ. ಆಗುವುದೆಲ್ಲ ಒಳ್ಳೆಯದಕ್ಕೆ ಎಂದು ತಿಳಿದು ಅವರ ಆಜ್ಞಾನುವರ್ತಿಯಾಗಿ ಒಪ್ಪಿಕೊಳ್ಳುತ್ತೇನೆ. ದೈವ ಸಂಕಲ್ಪವಿಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲುಗಾಡದು ಎಂದು ಶಾಸ್ತ್ರಗಳೇ ಹೇಳಿವೆ. ಅಂತಹದರಲ್ಲಿ ಈ ಮದುವೆಯೂ ಶ್ರೀಹರಿಯ ಸಂಕಲ್ಪದಂತೆಯೇ ನಿಶ್ಚಿತವಾಗಿದೆ ಎಂದು ನಂಬುತ್ತೇನೆ” ಎಂದು ಸಮ್ಮತಿಯಿತ್ತನು. ಸಂತೋಷದಿಂದ ಚಂದ್ರಹಾಸನಿಗೆ ಅಭಿನಂದನೆ ಸಲ್ಲಿಸಿದ ಮದನ ಕುಮಾರ ಪರಿಚಾರಕರನ್ನು ಕರೆದು “ಇವರು ನಮ್ಮ ಮನೆಗೆ ಬಂದಿರುವ ಆದರಣೀಯ ಅತಿಥಿಗಳೂ, ನನ್ನ ಸೋದರಿಯನ್ನು ವರಿಸಲಿರುವ ವರನೂ ಆಗಿದ್ದಾರೆ. ಯಾವ ರೀತಿಯ ಕುಂದು ಕೊರತೆಗಳೂ ಆಗದಂತೆ ಇವರ ಸ್ನಾನ, ಊಟೋಪಚಾರಗಳ, ವಿಶ್ರಾಂತಿಯ ವ್ಯವಸ್ಥೆ ಮಾಡಿಸಿ. ನಾನು ಮದುವೆಯ ಸಿದ್ಧತೆಯಲ್ಲಿ ವ್ಯಸ್ಥನಾಗುತ್ತೇನೆ” ಎಂದು ಆದೇಶ ನೀಡಿದನು.
ಮದನನು ಸೇವಕ ವರ್ಗದವರನ್ನು ಕರೆದು ಮನೆಯ ಮುಂದೆ ಭವ್ಯವಾದ ಚಪ್ಪರ ನಿರ್ಮಾಣ, ಅಲಂಕಾರ, ಅತಿಥಿ ಸತ್ಕಾರದ ವ್ಯವಸ್ಥೆಗಳು ಇತ್ಯಾದಿ ಎಲ್ಲಾ ತಯಾರಿಗಳನ್ನು ಈಗಿಂದೀಗಲೇ ಪ್ರಾರಂಭಿಸಲು ಆಜ್ಞೆ ಮಾಡಿದನು. ತಾನು ನೇರವಾಗಿ ರಾಜ ಪುರೋಹಿತರನ್ನು ಕಾಣಲು ಅವರ ಮನೆಯತ್ತ ಹೊರಟನು. ಪುರೋಹಿತರನ್ನು ಕಂಡು ವಂದಿಸಿ, ತಂದೆ ಕಳುಹಿಸಿದ ತುರ್ತು ಆದೇಶದ ಓಲೆಯ ವಿಚಾರ ವಿವರಿಸಿದ. ತಂಗಿಯ ಮದುವೆಗೆ ಅತಿ ಶೀಘ್ರದಲ್ಲಿ ಸುಮುಹೂರ್ತವಿದ್ದರೆ ತಿಳಿಸಬೇಕು ಎಂದು ಬೇಡಿಕೊಂಡನು. ಅಂತೆಯೇ ಅವರು ಒಂದು ದಿನ ಕಳೆದು ಇರುವ ಶುಭ ದಿನ – ಶುಭಗಳಿಗೆಯ ಬಗ್ಗೆ ತಿಳಿಸಿದರು. ವಿವಾಹದ ದಿನ ನಿಗದಿಯಾಯಿತು.
ಮರುದಿನ ಮುಂಜಾನೆ ಮದನ ಕುಮಾರ ಕುಂತಳ ದೇಶದ ಅರಸನಿಗೆ ಮದುವೆಯ ಮೊದಲ ಕರೆಯೋಲೆಯನ್ನಿತ್ತು ಆಶೀರ್ವಾದ ಪಡೆದನು. ನಂತರ ಪ್ರಜಾಪರಿವಾರ, ಪ್ರಮುಖರೆಲ್ಲರನ್ನೂ ಮದುವೆಗೆ ಆಮಂತ್ರಿಸುವ ಸಕಲ ವ್ಯವಸ್ಥೆ ಮಾಡಿಸಿದನು.
ಉಟ್ಟ ಬಟ್ಟೆಯಲ್ಲೇ ಮಂತ್ರಿಗಳ ಓಲೆ ತಲುಪಿಸುವ ದೂತನಂತೆ ಚಂದನಾವತಿಯಿಂದ ಹೊರಟು ಬಂದಿದ್ದ ಚಂದ್ರಹಾಸನೀಗ ಮದುಮಗನಾಗಿ ಕಂಗೊಳಿಸುತ್ತಿದ್ದಾನೆ. ಕೋಮಲೆ ವಿಷಯೆ ಮದುಮಗಳಾಗಿದ್ದಾಳೆ. ವಿವಾಹ ಮಹೋತ್ಸವದಂತೆ ವಿಜ್ರಂಭಣೆಯಿಂದ ನೆರವೇರಿತು. ನೂತನ ವಧುವರರು ಹಿರಿಯೆರಲ್ಲರ ಆಶೀರ್ವಾದ ಪಡೆದರು. ಸತ್ಕಾರ ಕೂಟ, ಯಥೋಚಿತ ದಾನ ಧರ್ಮ, ದಕ್ಷಿಣೆಗಳೊಂದಿಗೆ ವಿವಾಹ ಕಾರ್ಯ ನಿರ್ವಿಘ್ನವಾಗಿ ಸಂಪನ್ನಗೊಂಡಿತು. ಈಗ ಚಂದನಾವತಿಯ ಚಂದ್ರಹಾಸ ಕುಂತಳ ದೇಶದ ಮಂತ್ರಿಕುಮಾರಿ ವಿಷಯೆ ಲಕ್ಷ್ಮೀನಾರಾಯಣರಂತೆ ದಂಪತಿಗಳಾಗಿದ್ದಾರೆ.
ಮಂತ್ರಿ ದುಷ್ಟಬುದ್ದಿ ಚಂದನಾವತಿಯಲ್ಲಿ ಕೆಲದಿನಗಳ ಕಾಲ ಇರುತ್ತೇನೆ ಎಂದು ಹೇಳಿದ್ದನಾದರೂ, ಏನೋ ಗೊಂದಲ. ತಾನು ಪತ್ರ ಕಳುಹಿಸಿರುವ ಕೆಲಸ ಏನಾಯಿತೋ? ಅಂದುಕೊಂಡಂತೆ ಮಗ ಮದನ ಕುಮಾರ ಮಾಡಿ ಪೂರೈಸಿದ್ದಾನೋ! ಇಲ್ಲಾ ಅವಸರದಲ್ಲಿ ಏನಾದರು ಗಂಡಾಂತರ ಆಗಿರಬಹುದೇ? ಹೀಗೆ ಅಡಿಗಡಿಗೂ ಅದೇ ಯೋಚನೆಗಳು ಸುಡುತ್ತಿವೆ. ನಿಂತಲ್ಲಿ ನಿಲ್ಲಲು, ಕುಳಿತಲ್ಲಿ ಕೂರಲೂ ಆಗದೆ ವಿಲವಿಲ ಒದ್ದಾಡತೊಡಗಿದ್ದಾನೆ. ನಾಲ್ಕೈದು ದಿನ ಹೇಗೋ ಸುಧಾರಿಸಿ ಕೊಂಡನಾದರೂ ಮತ್ತೆ ಅಲ್ಲೇ ಉಳಿಯುವ ತಾಳ್ಮೆ ಬರಿದಾಗಿ ಹೋಯಿತು. ಏನೋ ನೆಪವನ್ನೊಡ್ಡಿ ಕುಳಿಂದಕನಿಗೆ ತಿಳಿಸಿ ತಾನು ಕುಂತಳ ದೇಶಕ್ಕೆ ಮರಳಿ ಬಂದನು. ಕುಂತಳದ ರಾಜಧಾನಿಯ ರಾಜಗೋಪುರಗಳನ್ನು ದಾಟಿ, ಮಂತ್ರಿ ನಿವಾಸದತ್ತ ಸಾಗುತ್ತಿದ್ದಂತೆ ಸಮಾರಂಭದ ವಾತಾವರಣವಿದೆ. ಅಲಂಕಾರ, ಚಪ್ಪರ, ಹೂ ಶೃಂಗಾರಗಳು, ಏನಿದು ವಿಶೇಷ! ಒಂದೂ ಅರ್ಥವಾಗುತ್ತಿಲ್ಲ. ವಿಷ ಸೇವಿಸಿದ ಚಂದ್ರಹಾಸನ ಸಾವಿನ ಸುದ್ದಿಯ ನಿರೀಕ್ಷೆಯಲ್ಲಿ ನಾನು ಬರುತ್ತಿದ್ದೇನೆ. ಆದರೆ ಇಲ್ಲೇನು ನನಗೆ ತಿಳಿಸದೆ ನಾಲ್ಕೈದು ದಿನಗಳಲ್ಲಿ ಸಡಗರದ ಕಾರ್ಯಕ್ರಮ ಆಯೋಜನೆಯಾಗಿದೆ. ಒಂದೂ ಅರ್ಥವಾಗದೆ ಮಂತ್ರಿ ದುಷ್ಟಬುದ್ದಿಗೆ ವಿಚಿತ್ರವಾಯಿತು. ತನ್ನ ನಿವಾಸದೊಳಗೆ ಬಂದರೆ ಎದುರಿನಲ್ಲೆ ಚಂದ್ರಹಾಸ ಜೊತೆಗೆ ಮಗಳು ವಿಷಯೆ ಸತಿಪತಿಗಳಂತೆ ಜೊತೆಯಾಗಿ ಕುಳಿತಿದ್ದಾರೆ. ಚಂದ್ರಹಾಸನನ್ನು ನೋಡಿದಾಕ್ಷಣ ದುಷ್ಟಬುದ್ದಿಯ ಎದೆಗೆ ಶೂಲ ಇರಿದಷ್ಟು ವೇದನೆಯೂ, ದಿಗ್ಭ್ರಮೆಯೂ ಆಯಿತು. ಎಲಾ ಈತನ ಯೋಗವೇ? ಎಂದು ವಿಸ್ಮಯವೂ ಆಯಿತು. ನೋಡುತ್ತಿದ್ದಂತೆಯೇ ಕೋಪ ನೆತ್ತಿಗೇರಿತು. ಆರ್ಭಟಿಸಿ ಕಿರುಚಿ ಮದನನ್ನು ಕರೆಯಬೇಕೆಂಬಷ್ಟು ಆವೇಶದಿಂದ ಒಮ್ಮೆ ಮುಖ ರೌದ್ರತೆಯನ್ನು ಆವರಿಸಿಕೊಂಡರೂ, ಚಾಣಾಕ್ಷನಲ್ಲವೇ ಮಂತ್ರಿ ದುಷ್ಟಬುದ್ದಿ! ಗೋಮುಖ ವ್ಯಾಘ್ರನೇ ಆದರೂ, ಉಗ್ರ ಮನಸ್ಥಿತಿಯನ್ನು ಅಲ್ಲೇ ಅದುಮಿಟ್ಟನು. ಪರಿಸ್ಥಿತಿ ಏನು ಎಂದು ತಿಳಿಯೋಣವೆಂದು ಸಾವರಿಸಿಕೊಂಡು ಕೋಪದ ಮುಖವನ್ನು ನಗುಮೊಗವಾಗಿ ಅಭಿನಯದಿಂದ ಪರಿವರ್ತಿಸಿ, ಕಪಟನಗೆ ಬೀರುತ್ತಾ “ಮದನಾ….” ಎಂದು ಕರೆದನು. ಅಪ್ಪನ ಸ್ವರ ಕೇಳಿ ಮದನ ಕುಮಾರ ಅತ್ತ ಬರುತ್ತಿರುವಂತೆಯೇ,ಚಂದ್ರಹಾಸ ಮತ್ತು ವಿಷಯೆಯರೂ ಮಂತ್ರಿ ದುಷ್ಟಬುದ್ದಿ ಬಂದುದನ್ನು ಕಂಡು, ಎದ್ದು ಬಳಿ ಬಂದು ಪಾದ ಸ್ಪರ್ಶಿಸಿ ನಮಿಸಿ ಆಶೀರ್ವಾದ ಬೇಡಿದರು. ಏನೊಂದೂ ಅರ್ಥವಾಗದಿದ್ದರೂ ಇವರಿಬ್ಬರಿಗೆ ಮದುವೆಯಾಗಿದೆ, ನನ್ನ ಶತ್ರು, ಸಾಯಬೇಕಾದವನು ನನ್ನ ಮಗಳ ಗಂಡನಾಗಿದ್ದಾನೆ. ಅಳಿಯಬೇಕಾಗಿತ್ತು ಆದರೆ ಈಗ ಉಳಿದು ನನಗೆ ಅಳಿಯನಾಗಿದ್ದಾನೆ. ಏನಿದು ವಿಪರ್ಯಾಸ! ಎಂದು ಮನದಲ್ಲಿ ಶಪಿಸುತ್ತಾ, ನಮಿಸಿದ ವಧುವರರಿಗೆ ಕೈಯೆತ್ತಿ ಆಶೀರ್ವಾದ ಮಾಡಿದಂತೆ ಮಾಡಿದನು.
ಏಕಾಂತವಾಗಿ ಮಗ ಮದನನ್ನು ಕರೆದು “ನಾನು ಹೇಳಿದ್ದೇನು! ನೀನು ಮಾಡಿದ್ದೇನು? ಎಂದು ಗುಡುಗಿ ಗದರಿಸಿದನು. ” ಅಪ್ಪಾ! ಏನಾದರೂ ಕೊರತೆಯಾಯಿತೇ? ಅವಸರವಾದರೂ ನೀವು ನೀಡಿದ ತುರ್ತು ಸಂದೇಶವನ್ನು ಶಕ್ತಿ ಮೀರಿ ಮಾಡಿ ಪೂರೈಸಿದ್ದೇನೆ. ಎಲ್ಲವೂ ಅಂದುಕೊಂಡದ್ದಕ್ಕಿಂತಲೂ ಅಚ್ಚುಕಟ್ಟಾಗಿ ನೆರವೇರಿದೆ. ಯಾವ ಸಮಸ್ಯೆಯೂ ತಲೆದೋರಲಿಲ್ಲ” ಎಂದು ಮದನ ಹೇಳಿದ.
ಮಗನ ಮಾತು ಕೇಳುವಾಗ ಇವನೇನು ಬಡಬಡಿಸುತ್ತಿದ್ದಾನೆ? ಎಂದೇ ದುಷ್ಟಬುದ್ಧಿಗೆ ಅರ್ಥವಾಗಲಿಲ್ಲ. “ಹೇ! ಏನಯ್ಯಾ ನಿನ್ನ ಪ್ರಲಾಪ? ನಾನು ಕಳುಹಿಸಿದ ಓಲೆ ನಿನ್ನ ಕೈ ಸೇರಲಿಲ್ಲವೇ? ನಾನು ಹೇಳಿದ್ದೇನು?” ಎಂದು ಕೇಳಿದಾಗ, ಮದನ ಒಳ ಹೋಗಿ ಓಲೆಯನ್ನು ತಂದು ತನ್ನ ಅಪ್ಪನ ಕೈಗಿತ್ತನು. “ಅಪ್ಪಾಜಿ, ಮೊದಲಾಗಿ ನೀವು ನನ್ನ ಮೇಲೆ ವಿಶ್ವಾಸವಿರಿಸಿ ದೊಡ್ಡ ಜವಾಬ್ದಾರಿ ನಿಭಾಯಿಸುವ ಅವಕಾಶ ನೀಡಿದ್ದಕ್ಕಾಗಿ ವಂದನೆಗಳು. ಸೋದರಿಯ ವಿವಾಹವನ್ನು ಅಲ್ಪ ಅವಧಿಯಲ್ಲೇ ಮಹಾ ಉತ್ಸವದಂತೆ ನೆರವೇರಿಸಿದ್ದೇನೆ” ಎಂದು ಹೇಳಿ ಓಲೆಯನ್ನು ಅಪ್ಪನ ಕೈಗಿತ್ತನು.
ದುಷ್ಟಬುದ್ದಿ ಓಲೆ ಕೈಗೆತ್ತಿಕೊಂಡು ಬಿಡಿಸಿದ್ದಾನೆ, ಓದತೊಡಗಿದ್ದಾನೆ…
ಮುಂದುವರಿಯುವುದು…

























































