
ಬೆಂಗಳೂರು: ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯ ಪ್ರಭಾವಿ ಹುದ್ದೆಗಳ ವರ್ಗಾವಣೆಯಲ್ಲಿ ರಾಜಕೀಯ ಶಿಫಾರಸು ಮತ್ತು ಲಾಬಿಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಮಹತ್ವದ ಕ್ರಮ ಕೈಗೊಂಡಿದೆ. ಗೃಹ ಇಲಾಖೆ ಪೊಲೀಸ್ ಇನ್‌ಸ್ಪೆಕ್ಟರ್ (PI) ಹಾಗೂ ಡಿವೈಎಸ್ಪಿ (DySP) ಹುದ್ದೆಗಳ ವರ್ಗಾವಣೆ ಮಾರ್ಗಸೂಚಿಗಳನ್ನು ಪರಿಷ್ಕರಿಸಿದ್ದು, ಐದು ವರ್ಷದ ಕಡ್ಡಾಯ ‘ಕೂಲಿಂಗ್-ಆಫ್’ ಅವಧಿ ಸೇರಿದಂತೆ ಹಲವು ಹೊಸ ನಿಯಮಗಳನ್ನು ಜಾರಿಗೊಳಿಸಿದೆ.
ಹೊಸ ನಿಯಮದಂತೆ, ಬಡ್ತಿ ಪಡೆದ ಡಿವೈಎಸ್ಪಿ ಮತ್ತು ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಕಾರ್ಯನಿರ್ವಾಹಕ ಹುದ್ದೆಗೆ ನೇಮಕವಾಗುವ ಮೊದಲು ಕಾರ್ಯನಿರ್ವಾಹಕೇತರ ಹುದ್ದೆಯಲ್ಲಿ ಕನಿಷ್ಠ ಎರಡು ವರ್ಷ ಸೇವೆ ಸಲ್ಲಿಸಿರಬೇಕು. ಜೊತೆಗೆ, ಬಡ್ತಿ ಪಡೆದ ಎರಡು ವರ್ಷದೊಳಗೆ ನಾಲ್ಕು ವಾರಗಳ ಪುನರ್‌ತರಬೇತಿಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ತರಬೇತಿ ಪೂರ್ಣಗೊಳಿಸದ ಅಧಿಕಾರಿಗಳಿಗೆ ಕಾರ್ಯನಿರ್ವಾಹಕ ಹುದ್ದೆ ನೀಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಅಂತರ ಘಟಕ ವರ್ಗಾವಣೆಗೂ ಹೊಸ ನಿಯಮ ಜಾರಿಯಾಗಿದ್ದು, ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಸತತ ಐದು ವರ್ಷ ಸೇವೆ ಸಲ್ಲಿಸಿದ ಅಧಿಕಾರಿಗಳನ್ನು ಅದೇ ಘಟಕಕ್ಕೆ ಮರು ನೇಮಕ ಮಾಡುವುದಿಲ್ಲ. ಅವರು ಬೇರೆ ಘಟಕದಲ್ಲಿ ಐದು ವರ್ಷದ ‘ಕೂಲಿಂಗ್-ಆಫ್’ ಅವಧಿ ಪೂರ್ಣಗೊಳಿಸಿದ ಬಳಿಕವೇ ಹಿಂದಿನ ಘಟಕಕ್ಕೆ ವರ್ಗಾವಣೆಗೆ ಅರ್ಹರಾಗುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಸಂಬಂಧಿತ ಪ್ರಾಧಿಕಾರದ ಅನುಮತಿಯೊಂದಿಗೆ ಈ ನಿಯಮವನ್ನು ಸಡಿಲಿಸಬಹುದು.
ಪರಿಷ್ಕೃತ ಮಾರ್ಗಸೂಚಿಯಲ್ಲಿ ರೈಲ್ವೆ ಪೊಲೀಸ್, ಸೈಬರ್ ಪೊಲೀಸ್ ಹಾಗೂ ಮಹಿಳಾ ಪೊಲೀಸ್ ಘಟಕಗಳನ್ನು ಕಾರ್ಯನಿರ್ವಾಹಕ ವಿಭಾಗದ ವ್ಯಾಪ್ತಿಗೆ ಸೇರಿಸಲಾಗಿದೆ. ಅಲ್ಲದೆ, ಇಲಾಖಾ ವಿಚಾರಣೆ, ಲೋಕಾಯುಕ್ತ ಪ್ರಕರಣ ಅಥವಾ ಕ್ರಿಮಿನಲ್ ತನಿಖೆ ಎದುರಿಸುತ್ತಿರುವ ಹಾಗೂ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಬೋರ್ಡ್‌ನಿಂದ ಅನರ್ಹರೆಂದು ಘೋಷಿಸಲ್ಪಟ್ಟಿರುವ ಡಿವೈಎಸ್ಪಿ ಮತ್ತು ಪೊಲೀಸ್ ಇನ್‌ಸ್ಪೆಕ್ಟರ್‌ಗಳಿಗೆ ಕಾರ್ಯನಿರ್ವಾಹಕ ಹುದ್ದೆ ನೀಡುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
ಈ ಪರಿಷ್ಕೃತ ವರ್ಗಾವಣೆ ನೀತಿಯು ಪೊಲೀಸ್ ಇಲಾಖೆಯಲ್ಲಿ ಪಾರದರ್ಶಕತೆ, ಸಮಾನ ಅವಕಾಶ ಮತ್ತು ಆಡಳಿತಾತ್ಮಕ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಗೊಂಡಿದ್ದು, ಪ್ರಭಾವಿ ಹುದ್ದೆಗಳ ನೇಮಕಾತಿಯಲ್ಲಿ ಅನಗತ್ಯ ಹಸ್ತಕ್ಷೇಪವನ್ನು ತಡೆಯಲು ಸಹಕಾರಿಯಾಗಲಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.























































