
ನವದೆಹಲಿ: ರೈತರಿಗೆ ಕೇಂದ್ರ ಸರ್ಕಾರವು ಮಹತ್ವದ ಸಿಹಿಸುದ್ದಿ ನೀಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು, ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ ₹6,000 ಆರ್ಥಿಕ ನೆರವು ನೀಡುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು 2030-31ನೇ ಆರ್ಥಿಕ ವರ್ಷದವರೆಗೆ ಮುಂದುವರಿಸಲು ಅನುಮೋದನೆ ನೀಡಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
2019ರ ಫೆಬ್ರವರಿ 24ರಂದು ಆರಂಭವಾದ ಈ ಯೋಜನೆಯಡಿ ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ ₹6,000 ನೆರವನ್ನು ಮೂರು ಸಮಾನ ಕಂತುಗಳಲ್ಲಿ, ತಲಾ ₹2,000ರಂತೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ಈ ಯೋಜನೆ ಮುಂದುವರಿಸಲು 2026-27ರಿಂದ 2030-31ರವರೆಗೆ ಒಟ್ಟು ₹3,15,614 ಕೋಟಿ ಮೀಸಲಿಡಲಾಗಿದೆ. ಯೋಜನೆ ಆರಂಭವಾದ ಬಳಿಕ ಇದುವರೆಗೆ 23 ಕಂತುಗಳ ಮೂಲಕ ₹4.47 ಲಕ್ಷ ಕೋಟಿಗೂ ಅಧಿಕ ಮೊತ್ತವನ್ನು ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಫಲಾನುಭವಿಗಳಲ್ಲಿ ಸುಮಾರು ನಾಲ್ಕನೇ ಒಂದು ಭಾಗ ಮಹಿಳಾ ರೈತರಾಗಿದ್ದು, ಅವರಿಗೆ ಮಾತ್ರವೇ ₹1.06 ಲಕ್ಷ ಕೋಟಿಗೂ ಹೆಚ್ಚು ಹಣ ಜಮೆಯಾಗಿದೆ ಎಂದು ನೀತಿ ಆಯೋಗ ಮಾಹಿತಿ ನೀಡಿದೆ.























































