
ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. 19 ಕೆಜಿ ಕಮರ್ಷಿಯಲ್ LPG ಸಿಲಿಂಡರ್ ಬೆಲೆಯನ್ನು ₹200ಕ್ಕೂ ಹೆಚ್ಚು ಇಳಿಸಲಾಗಿದ್ದು, ಪರಿಷ್ಕೃತ ದರಗಳು ಆಗಸ್ಟ್ 1ರಿಂದಲೇ ಜಾರಿಗೆ ಬಂದಿವೆ ಎಂದು ಎಎನ್ಐ ವರದಿ ತಿಳಿಸಿದೆ.
ದೆಹಲಿಯಲ್ಲಿ 19 ಕೆಜಿ ಕಮರ್ಷಿಯಲ್ ಸಿಲಿಂಡರ್ ಬೆಲೆ ₹202 ಇಳಿಕೆಯಾಗಿದ್ದು, ಕೋಲ್ಕತ್ತಾದಲ್ಲಿ ₹209 ಕಡಿತಗೊಳಿಸಲಾಗಿದೆ. ಪರಿಷ್ಕೃತ ದರದಂತೆ ಕೋಲ್ಕತ್ತಾದಲ್ಲಿ ಒಂದು ಸಿಲಿಂಡರ್ ಬೆಲೆ ₹2,872.50 ಆಗಿದೆ.
ಇದು ಸತತ ಎರಡನೇ ತಿಂಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ದರ ಇಳಿಕೆಯಾಗಿದೆ. ಜುಲೈ 1ರಂದು ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ ₹183.50 ಕಡಿಮೆಯಾಗಿದ್ದರೆ, 5 ಕೆಜಿ ಫ್ರೀ ಟ್ರೇಡ್ LPG (FTL) ಸಿಲಿಂಡರ್ ದರವೂ ₹13 ಇಳಿಕೆಯಾಗಿ ₹808.50 ಆಗಿತ್ತು.
ಆದರೆ, ಗೃಹ ಬಳಕೆಯ 14.2 ಕೆಜಿ LPG ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಹೊಸ ದರ ಪರಿಷ್ಕರಣೆಯಿಂದ ಹೋಟೆಲ್, ರೆಸ್ಟೋರೆಂಟ್, ಕ್ಯಾಟರಿಂಗ್ ಸೇರಿದಂತೆ ವಾಣಿಜ್ಯ ಬಳಕೆದಾರರಿಗೆ ಸ್ವಲ್ಪ ಮಟ್ಟಿನ ನಿರಾಳತೆ ಸಿಗುವ ನಿರೀಕ್ಷೆಯಿದೆ. ಕಳೆದ ಕೆಲವು ತಿಂಗಳುಗಳಿಂದ ಜಾಗತಿಕ ಪೂರೈಕೆ ಸಮಸ್ಯೆ ಹಾಗೂ ಪಶ್ಚಿಮ ಏಷ್ಯಾದ ಉದ್ವಿಗ್ನತೆಯಿಂದ ಇಂಧನ ವೆಚ್ಚ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಈ ಇಳಿಕೆ ಅವರಿಗೆ ಅನುಕೂಲಕರವಾಗಿದೆ.
ಇದೇ ವೇಳೆ, ಪಶ್ಚಿಮ ಏಷ್ಯಾದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ದೇಶದ ಇಂಧನ ಸನ್ನದ್ಧತೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಎರಡು ದಿನಗಳ ಬಳಿಕ ಈ ದರ ಪರಿಷ್ಕರಣೆ ಪ್ರಕಟವಾಗಿದೆ.






















































