ಆಗಸ್ಟ್ 1 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯವು 2026–27ನೇ ಶೈಕ್ಷಣಿಕ ಸಾಲಿಗೆ ವಿವಿಧ ಸ್ನಾತಕೋತ್ತರ (PG) ವಿಭಾಗಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ (Guest Faculty) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದು.
ವಿಶ್ವವಿದ್ಯಾನಿಲಯದ ಕನ್ನಡ, ಇಂಗ್ಲಿಷ್, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಪತ್ರಿಕೋದ್ಯಮ, ಜಿಯೋಗ್ರಫಿ, ಲೈಬ್ರರಿ ಸೈನ್ಸ್, ಬಯೋಕೆಮಿಸ್ಟ್ರಿ, ಫಿಸಿಕ್ಸ್, ಕೆಮಿಸ್ಟ್ರಿ, ಬಾಟನಿ, ಪ್ರಾಣಿಶಾಸ್ತ್ರ, ಗಣಿತ, ಮೈಕ್ರೋಬಯಾಲಜಿ, ಕಂಪ್ಯೂಟರ್ ಸೈನ್ಸ್, ಎಂಸಿಎ, ಎಂಬಿಎ, ಕಾಮರ್ಸ್, ಎಂ.ಎಡ್ ಸೇರಿದಂತೆ ಹಲವು ಸ್ನಾತಕೋತ್ತರ ವಿಭಾಗಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕ ನಡೆಯಲಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ ಕನಿಷ್ಠ ಶೇ.55 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಹೊಂದಿರಬೇಕು. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ಶೇ.50 ಅಂಕಗಳು ಸಾಕಾಗುತ್ತವೆ. ಅರ್ಜಿಯನ್ನು ನೀಡಲಾದ ಆನ್ಲೈನ್ ಲಿಂಕ್ ಮೂಲಕ ಆಗಸ್ಟ್ 1, 2026ರೊಳಗೆ ಸಲ್ಲಿಸಬೇಕು.
ಸಾಮಾನ್ಯ ಅಭ್ಯರ್ಥಿಗಳಿಗೆ ₹250 ಹಾಗೂ ಎಸ್ಸಿ/ಎಸ್ಟಿ/ವರ್ಗ-1 ಅಭ್ಯರ್ಥಿಗಳಿಗೆ ₹125 ಅರ್ಜಿ ಶುಲ್ಕ ನಿಗದಿಯಾಗಿದೆ. ಒಂದಕ್ಕಿಂತ ಹೆಚ್ಚು ವಿಷಯಗಳಿಗೆ ಅರ್ಜಿ ಸಲ್ಲಿಸಿದರೆ ಪ್ರತಿ ಹೆಚ್ಚುವರಿ ಅರ್ಜಿಗೆ ₹100 ಪಾವತಿಸಬೇಕು. ಶುಲ್ಕವನ್ನು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ಸೈಟ್ನಲ್ಲಿ http://www.mangaloreuniversity.ac.in ಆನ್ಲೈನ್ ಮೂಲಕ ಪಾವತಿಸಿ ಇ-ರಶೀದಿಯನ್ನು ಅರ್ಜಿಯೊಂದಿಗೆ ಅಪ್ಲೋಡ್ ಮಾಡಬೇಕು.
ಯುಜಿಸಿ ಮಾನದಂಡಗಳು ಹಾಗೂ ರಾಜ್ಯ ಸರ್ಕಾರದ ಮೀಸಲಾತಿ ನಿಯಮಗಳಂತೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಸಂದರ್ಶನದ ವೇಳೆ ಅಗತ್ಯ ಶೈಕ್ಷಣಿಕ ದಾಖಲೆಗಳ ಮೂಲಪ್ರತಿಗಳು ಮತ್ತು ಸ್ವಯಂ ದೃಢೀಕರಿಸಿದ ಪ್ರತಿಗಳನ್ನು ಸಲ್ಲಿಸುವುದು ಕಡ್ಡಾಯವಾಗಿದ್ದು, ಸಂದರ್ಶನದ ದಿನಾಂಕವನ್ನು ಶೀಘ್ರದಲ್ಲೇ ವಿಶ್ವವಿದ್ಯಾನಿಲಯದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ.






























































































































