
ಅಜೆಕಾರು ಪದ್ಮಗೋಪಾಲ ಶಿಕ್ಷಣ ಸಂಸ್ಥೆಯ ಆಡಳಿತಕ್ಕೊಳಪಟ್ಟಿರುವ ಮಣಿಪಾಲ ಜ್ಞಾನಸುಧ ಶಿಕ್ಷಣ ಸಂಸ್ಥೆಯ ಪ್ರೌಢ ಶಾಲಾ ವಿಭಾಗದ ಉಪಪ್ರಾಂಶುಪಾಲ (ಮುಖ್ಯ ಶಿಕ್ಷಕ)ರಾಗಿ, ಪ್ರಸ್ತುತ ಅಜೆಕಾರು ಜ್ಞಾನಸುಧ ಶಿಕ್ಷಣ ಸಂಸ್ಥೆಯಲ್ಲಿ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಉಡುಪಿ ಜಿಲ್ಲೆಯ ಖ್ಯಾತ ಹಾಗೂ ಆದರ್ಶ ಶಿಕ್ಷಕರಾದ ನವೀನ್ ಎ. ಅವರು ನೇಮಕಗೊಂಡಿದ್ದಾರೆ.
ಶೈಕ್ಷಣಿಕ, ಆಡಳಿತಾತ್ಮಕ ಹಾಗೂ ಪಠ್ಯೇತರ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗಳನ್ನು ದಾಖಲಿಸಿರುವ ನವೀನ್ ಎ. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ವಾಣಿ ವಿಲಾಸ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಎಸ್.ವಿ.ವಿ.ಹೆಚ್. ಶಾಲೆ, ಮೀಯಾಪದವು, ಪದವಿಪೂರ್ವ ಶಿಕ್ಷಣವನ್ನು ಗಣಪತಿ ಪದವಿಪೂರ್ವ ಕಾಲೇಜು ಹಾಗೂ ಪದವಿ ಶಿಕ್ಷಣವನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ.
ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿ ಪ್ರವೀಣ ಪದವಿಯನ್ನು ಪಡೆದಿರುವ ಅವರು, ಇಂದಿರಾ ಗಾಂಧಿ ವಿದ್ಯಾಲಯದಿಂದ ಎಂ.ಎ. (ಹಿಂದಿ), ಬಿ.ಎಡ್. ಪದವಿಗಳನ್ನು ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಪಡೆದಿದ್ದಾರೆ. ಇದರೊಂದಿಗೆ ಕಂಪ್ಯೂಟರ್ ಡಿಪ್ಲೊಮಾ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಅತ್ಯುನ್ನತ ತರಬೇತಿಗಳಲ್ಲೊಂದಾದ ಹಿಮಾಲಯ ವುಡ್ ಬ್ಯಾಡ್ಜ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ವಿದ್ಯಾರ್ಥಿ ಜೀವನದಿಂದಲೇ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಿರುವ ಶ್ರೀ ನವೀನ್ ಎ. ಅವರು ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ಜಿಲ್ಲಾ ಪ್ರಶಸ್ತಿಯನ್ನು ಪಡೆದಿದ್ದು, 400 ಮೀ. ಹಾಗೂ 800 ಮೀ. ಓಟ ಸ್ಪರ್ಧೆಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿದ್ದಾರೆ. ಭಾಷಣ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದು, ಸಂತ ಅಲೋಶಿಯಸ್ ಕಾಲೇಜಿನ ‘ಬೆಸ್ಟ್ ಔಟ್‌ಗೋಯಿಂಗ್ ಸ್ಟೂಡೆಂಟ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಲ್ಲದೆ, ಮಂಡ್ಯದ ವೀರಣ್ಣಗೌಡ ಕಾಲೇಜಿನಲ್ಲಿ ನಡೆದ ಗಾಂಧಿ ವಿಚಾರಧಾರೆ ಕುರಿತ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಎನ್.ಎಸ್.ಎಸ್. ವಿಭಾಗವನ್ನು ಪ್ರತಿನಿಧಿಸಿ ಭಾಗವಹಿಸಿದ್ದಾರೆ.
ಸಾಮಾಜಿಕ ಪಿಡುಗುಗಳ ಕುರಿತ ಪ್ರಬಂಧ ಮಂಡನೆ, ರಾಜ್ಯಮಟ್ಟದ ಎನ್.ಎಸ್.ಎಸ್. ಶಿಬಿರಗಳು, ವಿಚಾರ ಸಂಕಿರಣಗಳು ಹಾಗೂ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಅವರು, ಮಂಗಳೂರು ವಿಶ್ವವಿದ್ಯಾಲಯದ ಚಿನ್ನದ ಪದಕಕ್ಕೂ ಭಾಜನರಾಗಿದ್ದಾರೆ.
2018–19ನೇ ಸಾಲಿನ ಎಸ್.ಎಸ್.ಎಲ್.ಸಿ. ಹಿಂದಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ರೂಪಿಸಿದ ಸಾಧನೆಗಾಗಿ ‘ಉಡುಪಿ ಜಿಲ್ಲಾ ಸಾಧಕ ಶಿಕ್ಷಕ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಅನೇಕ ವಿದ್ಯಾರ್ಥಿಗಳು ರಾಜ್ಯ ಪುರಸ್ಕಾರ ಪ್ರಶಸ್ತಿ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಇವರ ಶಿಕ್ಷಣ ಸೇವೆಯನ್ನು ಗುರುತಿಸಿ ಹಲವಾರು ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.
ಕಳೆದ 15 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸಮರ್ಪಣಾಭಾವದಿಂದ ಸೇವೆ ಸಲ್ಲಿಸುತ್ತಿರುವ ನವೀನ್ ಎ. ಅವರು ವಿವಿಧ ಶಾಲೆಗಳಲ್ಲಿ ಎಜುಕಾಂ ಸ್ಮಾರ್ಟ್ ಕ್ಲಾಸ್ ಸಂಪನ್ಮೂಲ ಶಿಕ್ಷಕರಾಗಿ, ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಂದಿ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತುದಾರರಾಗಿ ಕಾರ್ಯನಿರ್ವಹಿಸಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿನ ಅವರ ಸಾಧನೆಗಳು, ನಾಯಕತ್ವ ಗುಣ, ಸಂಘಟನಾ ಕೌಶಲ್ಯ ಹಾಗೂ ಆಡಳಿತಾತ್ಮಕ ಅನುಭವವನ್ನು ಪರಿಗಣಿಸಿ ಮಣಿಪಾಲ ಜ್ಞಾನಸುಧ ಶಿಕ್ಷಣ ಸಂಸ್ಥೆಯ ಉಪಪ್ರಾಂಶುಪಾಲ (ಮುಖ್ಯ ಶಿಕ್ಷಕ) ಹುದ್ದೆಗೆ ನೇಮಕಗೊಳಿಸಿದ್ದಾರೆ .
ಈ ನೇಮಕಾತಿಗೆ ಸಂಸ್ಥೆಯ ಅಧ್ಯಕ್ಷರು, ಟ್ರಸ್ಟ್‌ನ ಪದಾಧಿಕಾರಿಗಳು, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಶಿಕ್ಷಣ ಕ್ಷೇತ್ರದ ಗಣ್ಯರು, ಸಹೋದ್ಯೋಗಿಗಳು, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಹಿತೈಷಿಗಳು ಹರ್ಷ ವ್ಯಕ್ತಪಡಿಸಿ ನವೀನ್ ಎ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.






















































