
ನವದೆಹಲಿ: ಪೆಟ್ರೋಲ್ನಲ್ಲಿ ಎಥೆನಾಲ್ (E20) ಮಿಶ್ರಣ ಹೆಚ್ಚಿರುವುದರಿಂದ ವಾಹನಗಳ ಎಂಜಿನ್ಗೆ ಹಾನಿಯಾಗುತ್ತದೆ ಅಥವಾ ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತದೆ ಎಂಬ ಆತಂಕಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದು, ದೇಶಾದ್ಯಂತ E20 ಇಂಧನ ಜಾರಿಗೆ ಮುನ್ನ ಐಒಸಿಎಲ್ (IOCL), ಐಐಪಿ (IIP), ಎಸ್ಐಎಎಂ (SIAM) ಹಾಗೂ ಎಆರ್ಎಐ (ARAI) ಸೇರಿದಂತೆ ಹಲವು ಸಂಸ್ಥೆಗಳ ಸಹಯೋಗದಲ್ಲಿ ವ್ಯಾಪಕ ಅಧ್ಯಯನ ಮತ್ತು ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಹೇಳಿದರು.
ಪರೀಕ್ಷೆಗಳ ಪ್ರಕಾರ, ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ಎಂಜಿನ್ನಲ್ಲಿ ಯಾವುದೇ ಪ್ರಮುಖ ಬದಲಾವಣೆ ಅಗತ್ಯವಿಲ್ಲ. E20 ಇಂಧನದಿಂದ ಎಂಜಿನ್, ಇಂಧನ ವ್ಯವಸ್ಥೆ ಅಥವಾ ಲೋಹದ ಭಾಗಗಳಿಗೆ ಹಾನಿಯಾಗುವುದಿಲ್ಲ. ಹಳೆಯ ವಾಹನಗಳಲ್ಲಿಯೂ ಅಸಹಜ ಸವೆತ ಅಥವಾ ಕಾರ್ಯಕ್ಷಮತೆಯ ಕುಸಿತ ಕಂಡುಬಂದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಆದರೆ 2005ರಿಂದ 2016ರ ನಡುವೆ ತಯಾರಾದ ಕೆಲವು BS-III ವಾಹನಗಳಲ್ಲಿ ರಬ್ಬರ್ ಭಾಗಗಳು ಮತ್ತು ಗ್ಯಾಸ್ಕೆಟ್ಗಳನ್ನು ಬದಲಾಯಿಸುವ ಅಗತ್ಯ ಉಂಟಾಗಬಹುದು. ಇದನ್ನು ಸಾಮಾನ್ಯ ಸರ್ವೀಸಿಂಗ್ ವೇಳೆ ಸುಲಭವಾಗಿ ನಿರ್ವಹಿಸಬಹುದು ಎಂದು ಅವರು ಹೇಳಿದ್ದಾರೆ.
ಮೈಲೇಜ್ ಬಗ್ಗೆ ಸ್ಪಷ್ಟನೆ ನೀಡಿದ ಗಡ್ಕರಿ, ಇಂಧನದ ಜೊತೆಗೆ ಚಾಲನಾ ಶೈಲಿ, ರಸ್ತೆ ಪರಿಸ್ಥಿತಿ, ವಾಹನದ ನಿರ್ವಹಣೆ ಹಾಗೂ ಟೈರ್ ಒತ್ತಡದಂತಹ ಹಲವು ಅಂಶಗಳು ಮೈಲೇಜ್ ಮೇಲೆ ಪರಿಣಾಮ ಬೀರುತ್ತವೆ ಎಂದು ತಿಳಿಸಿದ್ದಾರೆ.
ನೀತಿ ಆಯೋಗದ 2020-25ರ ಎಥೆನಾಲ್ ಮಾರ್ಗಸೂಚಿಯನ್ನು ಆಧರಿಸಿ ಈ ನೀತಿ ರೂಪಿಸಲಾಗಿದೆ. 2001ರಲ್ಲಿ ಪೈಲಟ್ ಯೋಜನೆಯಾಗಿ ಆರಂಭವಾದ ಎಥೆನಾಲ್ ಮಿಶ್ರಣವು E5 ಮತ್ತು E10 ಹಂತಗಳ ಯಶಸ್ವಿ ಪರೀಕ್ಷೆಗಳ ಬಳಿಕ 2026ರಿಂದ ದೇಶಾದ್ಯಂತ E20 ರೂಪದಲ್ಲಿ ಜಾರಿಯಾಗಿದೆ ಎಂದು ವಿವರಿಸಿದರು.
E20 ಇಂಧನ ಎಂದರೇನು?
E20 ಎಂದರೆ ಶೇ.80ರಷ್ಟು ಪೆಟ್ರೋಲ್ ಮತ್ತು ಶೇ.20ರಷ್ಟು ಕಬ್ಬು ಹಾಗೂ ಧಾನ್ಯಗಳಿಂದ ಉತ್ಪಾದಿಸಲಾದ ಎಥೆನಾಲ್ ಮಿಶ್ರಣ. ಇದರ ಬಳಕೆಯಿಂದ ವಾಹನಗಳ ಮಾಲಿನ್ಯ ಕಡಿಮೆಯಾಗುವುದರ ಜೊತೆಗೆ ಕಚ್ಚಾ ತೈಲ ಆಮದಿನ ಮೇಲಿನ ಅವಲಂಬನೆ ಇಳಿಯಲಿದ್ದು, ರೈತರಿಗೆ ಹೆಚ್ಚುವರಿ ಆದಾಯದ ಅವಕಾಶವೂ ಸಿಗಲಿದೆ.






















































