ಕ್ಯೂಆರ್ ಕೋಡ್‌ನಲ್ಲೇ ವಾಹನದ ಹೊಗೆ ಪರೀಕ್ಷೆಯ ಸಂಪೂರ್ಣ ಮಾಹಿತಿ

ಬೆಂಗಳೂರು: ವಾಹನಗಳ ವಾಯು ಮಾಲಿನ್ಯದ ಪರೀಕ್ಷೆ ಪ್ರಮಾಣ ಪತ್ರದ ಅವಧಿ ಮುಗಿಯುವ ಮುನ್ನವೇ ವಾಹನ ಮಾಲಕರ ಮೊಬೈಲ್‌ಗೆ ಎಚ್ಚರಿಕೆ ಸಂದೇಶ ಕಳುಹಿಸುವ ಹೊಸ ವ್ಯವಸ್ಥೆಯನ್ನು ಸಾರಿಗೆ ಇಲಾಖೆ ಜಾರಿಗೆ ತಂದಿದೆ.
ಪ್ರಮಾಣ ಪತ್ರದ ಅವಧಿ ಮುಗಿಯಲು 15 ದಿನ ಬಾಕಿ ಇರುವಾಗಲೇ ಎಸ್‌ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತದೆ. ಅವಧಿ ಮುಗಿದ ಬಳಿಕವೂ 15 ದಿನಗಳೊಳಗೆ ಪರೀಕ್ಷೆ ಮಾಡಿಸದಿದ್ದರೆ ಮತ್ತೊಮ್ಮೆ ಎಚ್ಚರಿಕೆ ಸಂದೇಶ ರವಾನೆಯಾಗಲಿದೆ. ಇದಾದ ಬಳಿಕವೂ ನಿಯಮ ಪಾಲಿಸದ ವಾಹನಗಳು ತಪಾಸಣೆಯಲ್ಲಿ ಸಿಕ್ಕರೆ ದಂಡ ವಿಧಿಸಲಾಗುವುದು. ದಂಡ ಪಾವತಿಸದ ವಾಹನಗಳಿಗೆ ಸಾರಿಗೆ ಇಲಾಖೆಯ ಸೇವೆಗಳು ಸ್ಥಗಿತಗೊಳ್ಳಲಿವೆ.
ರಾಜ್ಯದಲ್ಲಿ ಹೊಸ ಕರ್ನಾಟಕ ಇ-ಟಿಸಿ ಪೊಲ್ಯೂಷನ್ ಅಂಡರ್ ಕಂಟ್ರೋಲ್ ಸೆಂಟರ್ (PUCC) ತಂತ್ರಾಂಶವನ್ನು ಜಾರಿಗೆ ತರಲಾಗಿದ್ದು, ಇದು ಕೇಂದ್ರ ಸರ್ಕಾರದ ಪರಿವಾಹನ್ ವ್ಯವಸ್ಥೆಯೊಂದಿಗೆ ಸಂಯೋಜನೆಯಾಗಿದೆ. ಇದರ ಮೂಲಕ ರಾಜ್ಯದ ಎಲ್ಲಾ ವಾಹನಗಳ ವಾಯು ಮಾಲಿನ್ಯ ಪರೀಕ್ಷೆಯ ಮಾಹಿತಿ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ. ಈ ವ್ಯವಸ್ಥೆ ಕರ್ನಾಟಕದಲ್ಲಿ ಏಪ್ರಿಲ್ 1ರಿಂದಲೇ ಜಾರಿಯಲ್ಲಿದೆ.
ಕ್ಯೂಆರ್ ಕೋಡ್‌ನಲ್ಲಿ ವಾಹನದ ಹೊಗೆ ಪರೀಕ್ಷೆ ವಿವರ
ಹೊಸ ಹೊಗೆ ಪರೀಕ್ಷೆ ಪ್ರಮಾಣ ಪತ್ರದಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗುತ್ತದೆ. ಇದನ್ನು ಸ್ಕ್ಯಾನ್ ಮಾಡಿದರೆ ವಾಹನದ ಎಮಿಷನ್ ಪರೀಕ್ಷೆ, ಮುಂದಿನ ಪರೀಕ್ಷೆಯ ದಿನಾಂಕ, ಎಂಜಿನ್ ಸ್ಥಿತಿ, ವಾಹನದ ವಯಸ್ಸು, ಮಾಲಕರ ಮಾಹಿತಿ ಸೇರಿದಂತೆ ಸಂಪೂರ್ಣ ವಿವರಗಳು ಲಭ್ಯವಾಗಲಿವೆ ಎಂದು ಸಾರಿಗೆ ಇಲಾಖೆಯ ಅಪರ ಆಯುಕ್ತ ಜೆ. ಜ್ಞಾನೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ.


















































