
ಮೂಡುಬಿದಿರೆ : ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಜವಬ್ದಾರಿಯ ಪ್ರಜ್ಞೆ ಹಾಗೂ ಪ್ರಜಾಪ್ರಭುತ್ವದ
ಮೌಲ್ಯಗಳನ್ನು ಬೆಳೆಸುವಲ್ಲಿ ಶಾಲಾ ಸಂಸತ್ತು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂದು ವಿವೇಕಾನಂದ
ವಿದ್ಯಾವರ್ಧಕ ಸಂಘ, ಪುತ್ತೂರು ಇದರ ನಿರ್ದೇಶಕರಾದ ರವೀಂದ್ರ ಪುತ್ತೂರು ಹೇಳಿದರು.
ಅವರು ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾದ
ನೂತನ ಶಾಲಾ ಸಂಸತ್ತಿನ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
“ಶಾಲಾ ಸಂಸತ್ತು ಎಂಬುದು ಕೇವಲ ವಿದ್ಯಾರ್ಥಿಗಳಿಗೆ ಹುದ್ದೆ ನೀಡುವ ಕಾರ್ಯಕ್ರಮವಲ್ಲ; ಅದು ಭವಿಷ್ಯದ ಉತ್ತಮ
ನಾಯಕರು, ಜವಾಬ್ದಾರಿಯುತ ನಾಗರಿಕರು ಹಾಗೂ ಸಮಾಜಮುಖಿ ವ್ಯಕ್ತಿತ್ವಗಳನ್ನು ರೂಪಿಸುವ ಪ್ರಜಾಪ್ರಭುತ್ವದ
ಪಾಠಶಾಲೆಯಾಗಿದೆ. ವಿದ್ಯಾರ್ಥಿಗಳು ಇಂದು ಶಾಲಾ ಸಂಸತ್ತಿನ ಮೂಲಕ ಕಲಿಯುವ ನಾಯಕತ್ವ, ಶಿಸ್ತು, ಸಮಯಪಾಲನೆ,
ಸೇವಾ ಮನೋಭಾವ ಮತ್ತು ಜವಬ್ದಾರಿಯ ಗುಣಗಳು ಇರುವವರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಪ್ರಭಾವ
ಬೀರುತ್ತಾರೆ. ಜಗತ್ತಿನ ಅತ್ಯುತ್ತಮ ನಾಯಕನ ಆಡಳಿತ ವ್ಯವಸ್ಥೆಯಲ್ಲಿ ನಾವಿದ್ದೇವೆ ಅದು ನಮಗೆ ಹೆಮ್ಮೆಯ ಸಂಗತಿ.
ಲಾಲ್ ಬಹದ್ದೂರ್ ಶಾಸ್ತ್ರಿಯವರ ನಾಯಕನ ಬದ್ಧತೆಯಂತೆ ನಾಯಕರು ಇರಬೇಕು. ನಮ್ಮ ಮೌಲ್ಯಗಳಿಗೆ ನಮ್ಮ
ಯೋಚನೆಗಳಿಗೆ, ನಮ್ಮ ಕೆಲಸಗಳಿಗೆ ನಾವು ಗೌರವ ನೀಡಿದರೆ ನಾವು ಹೆಮ್ಮೆಯ ಭಾರತದ ರಾಯಭಾರಿಗಳಾಗುತ್ತೇವೆ
ಎಂದರು.

ಮುಂದುವರಿದು ಅವರು, “ ಎಕ್ಸೆಲೆಂಟ್ ಶಿಕ್ಷಣ ಸಂಸ್ಥೆ ಶಿಕ್ಷಣದಲ್ಲಿ ಮಾತ್ರವಲ್ಲದೆ ಸಂಸ್ಕಾರ, ನೈತಿಕ ಮೌಲ್ಯಗಳು, ಕ್ರೀಡೆ,
ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ನಾಯಕತ್ವ ಬೆಳೆಸುವ ಕಾರ್ಯಕ್ರಮಗಳ ಮೂಲಕ ರಾಜ್ಯದಲ್ಲೇ ಮಾದರಿ ಶಿಕ್ಷಣ
ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಪ್ರಜಾಪ್ರಭುತ್ವದ ಸುಖವನ್ನು ವಿದ್ಯಾರ್ಥಿಗಳು ಅನುಭವಿಸುವಂತೆ ಮಾಡುತ್ತಿರುವ ಶಿಕ್ಷಣ
ಸಂಸ್ಥೆಗಳಲ್ಲಿ ಈ ಶಿಕ್ಷಣ ಸಂಸ್ಥೆ ಮುಂಚೂಣಿಯಲ್ಲಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಸಂಸ್ಥೆ ನೀಡುತ್ತಿರುವ
ಒತ್ತು ನಿಜಕ್ಕೂ ಶ್ಲಾಘನೀಯವಾಗಿದೆ. ಶಾಲಾ ಸಂಸತ್ತಿಗೆ ಆಯ್ಕೆಯಾದ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಹುದ್ದೆಯನ್ನು
ಅಧಿಕಾರದ ಸಂಕೇತವಾಗಿ ಅಲ್ಲ, ಸೇವೆಯ ಅವಕಾಶವಾಗಿ ಪರಿಗಣಿಸಿ ಕಾರ್ಯನಿರ್ವಹಿಸಬೇಕು. ಸಹಪಾಠಿಗಳ ಸಮಸ್ಯೆಗಳಿಗೆ
ಸ್ಪಂದಿಸಿ, ಶಿಕ್ಷಕರೊಂದಿಗೆ ಸಮನ್ವಯ ಸಾಧಿಸಿ ಶಾಲೆಯ ಶಿಸ್ತು, ಸ್ವಚ್ಛತೆ ಮತ್ತು ಉತ್ತಮ ವಾತಾವರಣ ಕಾಪಾಡುವಲ್ಲಿ
ಮುಂಚೂಣಿಯಲ್ಲಿರಬೇಕು” ಎಂದು ಕರೆ ನೀಡಿದರು. ಬೇರೆ ಬೇರೆ ಜಿಲ್ಲೆಗಳಿಂದ ಬಂದಿರುವ ವಿದ್ಯಾರ್ಥಿಗಳು ಇಲ್ಲಿಗೆ
ಬಂದಿರುವ ಉದ್ದೇಶವನ್ನು ಮರೆಯಬಾರದು. ಜೀವನದಲ್ಲಿ ಒಮ್ಮೆ ಸೋಲಿನ ಇಳಿಜಾರಿಗೆ ಇಳಿದರೆ ನಾವು ಜೀವನದಲ್ಲಿ
ಸೋಲುತ್ತೇವೆ.
“ಇಂದಿನ ವಿದ್ಯಾರ್ಥಿಗಳೇ ನಾಳಿನ ಜನಪ್ರತಿನಿಧಿಗಳು, ಆಡಳಿತಗಾರರು, ವಿಜ್ಞಾನಿಗಳು ಮತ್ತು ರಾಷ್ಟ್ರ ನಿರ್ಮಾತೃಗಳು.
ಆದ್ದರಿಂದ ಶಾಲಾ ದಿನಗಳಲ್ಲಿಯೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ. ಎಕ್ಸಲೆಂಟ್ ಶಿಕ್ಷಣ
ಸಂಸ್ಥೆಯಂತಹ ಮೌಲ್ಯಧಾರಿತ ಶಿಕ್ಷಣ ನೀಡುವ ಸಂಸ್ಥೆಗಳು ಸಮಾಜಕ್ಕೆ ಉತ್ತಮ ನಾಗರಿಕರನ್ನು ಕೊಡುಗೆಯಾಗಿ
ನೀಡುತ್ತಿವೆ. ನೂತನ ಶಾಲಾ ಸಂಸತ್ತಿನ ಎಲ್ಲಾ ಸದಸ್ಯರು ತಮ್ಮ ಜವಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ ಶಾಲೆಗೆ
ಮತ್ತಷ್ಟು ಕೀರ್ತಿತರಲಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ಮತದಾನ ಪ್ರತಿಯೊಬ್ಬರ ಹಕ್ಕು ಅಂತಹ ಹಕ್ಕನ್ನು ನಾವು
ಸರಿಯಾದ ವ್ಯಕ್ತಿಗೆ ನೀಡಬೇಕು. ವಿದ್ಯಾರ್ಥಿಗಳು ಒಳ್ಳೊಳ್ಳೆ ನಾಯಕರುಗಳನ್ನು ಮಾದರಿಯಾಗಿ ತೆಗೆದುಕೊಂಡು ಅತ್ಯುತ್ತಮ
ನಾಯಕರಾಗಬೇಕು, ಒಳ್ಳೆಯ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ತಂದೆ ತಾಯಿಯರ ಕಷ್ಟ ಯಾರಿಗೆ
ಗೊತ್ತಿರುತ್ತದೆಯೋ ಅವರು ಯಾವತ್ತೂ ಕೆಟ್ಟ ದಾರಿ ಹಿಡಿಯುವುದಿಲ್ಲ ಹೆತ್ತವರು ಹೆಮ್ಮೆ ಪಡುವಂತಹ ವ್ಯಕ್ತಿಗಳು
ನೀವಾಗಬೇಕು ಎಂದು ವಿದ್ಯಾರ್ಥಿಗಳು ಹಾಗೂ ನೂತನವಾಗಿ ಆಯ್ಕೆಯಾದ ಶಾಲಾ ಸಂಸತ್ ಸದಸ್ಯರಿಗೆ ಶುಭ ಹಾರೈಸಿ,
ತಮ್ಮ ಜವಬ್ದಾರಿಗಳನ್ನು ಪ್ರಾಮಾಣಿಕತೆ ಹಾಗೂ ಸಮರ್ಪಣಾ ಮನೋಭಾವದಿಂದ ನಿರ್ವಹಿಸಿ ಶಾಲೆಗೆ ಉತ್ತಮ ಹೆಸರು
ತರುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಮಾತನಾಡಿ. ಶಾಲಾ ಸಂಸತ್ತಿನ ಸದಸ್ಯರು
ವಿದ್ಯಾರ್ಥಿಗಳ ಧ್ವನಿಯಾಗಿ ಜವಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ತಾಯಿ ಮನೆಯಲ್ಲಿ ಹೇಗೆ ಎಲ್ಲಾ
ಜವಬ್ದಾರಿಗಳನ್ನು ನಿಭಾಯಿಸುತ್ತಾಳೋ ಹಾಗೇ ನಾಯಕರಾದವರು ಇರಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ
ಒಳ್ಳೊಳ್ಳೆಯ ಸಾಮಾರ್ಥ್ಯ ಇರುತ್ತದೆ. ಅದನ್ನು ನಿಮ್ಮ ಸಾಧನೆಗೆ ಪೂರಕವಾಗಿ ಉಪಯೋಗಿಸಿಕೊಳ್ಳಿ ಜೀವನದಲ್ಲಿ ಸಿಗುವ
ಅವಕಾಶಗಳನ್ನು ಒಳ್ಳೆಯದಕ್ಕೆ ಬಳಸಿಕೊಳ್ಳಿ ಎಂದು ಹೇಳುತ್ತಾ ಶಿಸ್ತು, ಸಮಯಪಾಲನೆ, ಸೇವಾ ಮನೋಭಾವ ಹಾಗೂ
ನಾಯಕತ್ವದ ಗುಣಗಳನ್ನು ಅಳವಡಿಸಿಕೊಂಡು ಶಾಲೆಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ತಿಳಿಸಿ ಶುಭ
ಹಾರೈಸಿದರು.
ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ. ಬಿ.ಪಿ ಸಂಪತ್ ಕುಮಾರ್, ಸಿಬಿಎಸ್ಸಿ
ಶಾಲೆಯ ಪ್ರಾಂಶುಪಾಲರಾದ ಶ್ರೀಪ್ರಸಾದ್, ಶಿಕ್ಷಕ-ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ಸಂಸತ್ತಿನ ನಾಯಕನಾಗಿ ಋಷಿಕೇಶ್ ಎ ಮಿನಾಚೆ, ಉಪನಾಯಕ ನಿಶಾಂತ್ ರಾಜ್, ಸ್ಪೀಕರ್ ನಿಹಾರಿಕ, ಶಿಕ್ಷಣ ಮತ್ತು
ಸಾಂಸ್ಕೃತಿಕ ಮಂತ್ರಿ ಸಯ್ಯದಾ ಆನಂ, ಶಿಸ್ತು ಮಂತ್ರಿ ದೃಷ್ಠಿ, ಕ್ರೀಡಾ ಮಂತ್ರಿ ಚೇತನ್, ಜಲಶಕ್ತಿ ಮಂತ್ರಿ ಸಾನ್ವಿಕಾ ಹಾಗೂ
ವಿರೋಧ ಪಕ್ಷದ ನಾಯಕಿಯಾಗಿ ತನ್ವಿ ಪೂಜಾರಿ ತಮ್ಮ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಉಪಮುಖ್ಯೋಪಾಧ್ಯಾಯರಾದ
ಜಯಶೀಲ ಬೆಳ್ತಂಗಡಿ ಕ್ಷೇತ್ರದ ಜನಪ್ರಿಯ ಶಾಸಕರಾದ ಹರೀಶ್ ಪೂಂಜಾ ಅವರು ಕಾರ್ಯಕ್ರಮದ ಕುರಿತಾಗಿ ಕಳುಹಿಸಿದ
ಶುಭ ನುಡಿಗಳ ಸಂದೇಶವನ್ನು ವಾಚಿಸಿದರು. ಶಿಕ್ಷಕಿ ರಶ್ಮಿ ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕಿ ಸ್ವರ್ಣಲತಾ ಸಂಸತ್ತಿನ
ನೂತನ ನಾಯಕರ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಶಿಕ್ಷಕಿ ವನಿತಾ ಪ್ರತಿಜ್ಞಾವಿಧಿ ಬೋಧಿಸಿದರು. ಶಾಲಾ
ಸಂಸತ್ತಿನ ನಾಯಕ ಋಷಿಕೇಶ್ ನಾಯಕನ ಜವಬ್ದಾರಿಗಳನ್ನು, ಶಿಸ್ತು ಮಂತ್ರಿ ದೃಷ್ಠಿ, ವಿರೋಧ ಪಕ್ಷದ ನಾಯಕಿ ತನ್ವಿ
ಪೂಜಾರಿ ತಮ್ಮ ತಮ್ಮ ಜವಬ್ದಾರಿಗಳನ್ನು ವಾಚಿಸಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್
ಸ್ವಾಗತಿಸಿದರು ಶಿಕ್ಷಕಿ ಜಯಲಕ್ಷ್ಮಿನಿರೂಪಿಸಿದರು. ಸ್ಪೀಕರ್ ನಿಹಾರಿಕ ವಂದಿಸಿದರು.
ನೂತನ ಸಂಸತ್ ಸದಸ್ಯರ ಪದಗ್ರಹಣದೊಂದಿಗೆ ಕಾರ್ಯಕ್ರಮವು ಸಂಭ್ರಮ, ಶಿಸ್ತು ಹಾಗೂ ರಾಷ್ಟ್ರಭಕ್ತಿಯ
ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು.

















































