
ಬೆಂಗಳೂರು: ಹಿಂದೂ ವಿವಾಹ ಕಾಯ್ದೆಯಡಿ ವಿವಾಹವು ಕೇವಲ ಕರಾರು (ಕಾಂಟ್ರಾಕ್ಟ್) ಅಲ್ಲ, ಅದು ಪವಿತ್ರವಾದ ಸಂಸ್ಕಾರಯುತ ಧಾರ್ಮಿಕ ಬಂಧನವಾಗಿದೆ. ಹೀಗಾಗಿ, ಜೀವನ ಸಂಗಾತಿಯಲ್ಲಿ ಆಸಕ್ತಿ ಕಳೆದುಕೊಂಡಿದ್ದೇನೆ ಎಂಬ ಕಾರಣವೊಂದನ್ನೇ ಮುಂದಿಟ್ಟು ವಿಚ್ಛೇದನ ಪಡೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮೈಸೂರಿನ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ಕೋರಿ 49 ವರ್ಷದ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನೂ ನ್ಯಾಯಮೂರ್ತಿ ಡಿ.ಕೆ. ಸಿಂಗ್ ನೇತೃತ್ವದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ.
ಪ್ರೇಮ ವಿವಾಹವಾಗಿದ್ದ ದಂಪತಿಗೆ ಪದವಿ ವ್ಯಾಸಂಗ ಮಾಡುತ್ತಿರುವ ಮಗಳಿದ್ದಾಳೆ. ಆದರೂ, ಪತಿ ಮದುವೆಯಲ್ಲಿ ಆಸಕ್ತಿ ಕಳೆದುಕೊಂಡಿದ್ದೇನೆ ಎಂದು ಹೇಳಿ ತಮ್ಮದೇ ತಪ್ಪಿನ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಕೇವಲ ಪರಸ್ಪರ ಆಸಕ್ತಿ ಕಡಿಮೆಯಾಗಿದೆ ಎಂಬ ಕಾರಣಕ್ಕೆ ದಾಂಪತ್ಯದಿಂದ ಹಿಂದೆ ಸರಿಯಲು ಅವಕಾಶ ನೀಡಲಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರಕರಣದ ವಿವರಗಳ ಪ್ರಕಾರ, 2003ರಲ್ಲಿ ವಿವಾಹವಾಗಿದ್ದ ದಂಪತಿ ಬಳಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪತಿ ವಿಚ್ಛೇದನ ಕೋರಿದ್ದರೆ, ಪತ್ನಿ ದಾಂಪತ್ಯ ಹಕ್ಕುಗಳ ಮರುಸ್ಥಾಪನೆಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯ ಪತ್ನಿಯ ಅರ್ಜಿಯನ್ನು ಮಾನ್ಯ ಮಾಡಿ, ಪತಿಯ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿತ್ತು.
ಬಳಿಕ ಕಲಂ 13(1ಎ) ಅಡಿಯಲ್ಲಿ ಮತ್ತೆ ಅರ್ಜಿ ಸಲ್ಲಿಸಿದ ಪತಿ, ‘ವೈವಾಹಿಕ ಸಂಬಂಧ ಮರುಸ್ಥಾಪನೆ ಆದೇಶದ ಹೊರತಾಗಿಯೂ ಪತ್ನಿ ಸಹಬಾಳ್ವೆಯನ್ನು ಪುನರ್ ಆರಂಭಿಸಿಲ್ಲ’ ಎಂದು ವಿಚ್ಛೇದನ ಕೋರಿದ್ದರು. ಆದರೆ, ಈ ವಾದವನ್ನು ಹೈಕೋರ್ಟ್ ಒಪ್ಪದೆ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.

















































