
ಬೆಂಗಳೂರು: ವಾಟ್ಸಾಪ್ನಲ್ಲಿ ಎಪಿಕೆ (APK) ಫೈಲ್ ರೂಪದಲ್ಲಿ ಬಂದಿದ್ದ ನಕಲಿ ಮದುವೆ ಆಮಂತ್ರಣವನ್ನು ಕ್ಲಿಕ್ ಮಾಡಿದ ಪರಿಣಾಮ ಅರಣ್ಯ ಇಲಾಖೆಯ ನೌಕರರೊಬ್ಬರು 9.96 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಸಂಬಂಧ ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಿಚಿತ ವಂಚಕರ ಪತ್ತೆಗೆ ತನಿಖೆ ಆರಂಭಿಸಲಾಗಿದೆ.
ದೂರುದಾರ ರಮೇಶ್ ಅವರಿಗೆ ಅಪರಿಚಿತ ಸಂಖ್ಯೆಯಿಂದ ಮದುವೆ ಆಮಂತ್ರಣದ ಹೆಸರಿನಲ್ಲಿ ಎಪಿಕೆ ಫೈಲ್ ಬಂದಿತ್ತು. ಅದನ್ನು ಸಾಮಾನ್ಯ ಆಹ್ವಾನ ಪತ್ರಿಕೆ ಎಂದು ಭಾವಿಸಿ ತೆರೆದ ತಕ್ಷಣ ಫೈಲ್ ಡೌನ್ಲೋಡ್ ಆಗಿ, ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಹಣ ವರ್ಗಾವಣೆಯಾಗಿದೆ.
ಒಟ್ಟು 9.96 ಲಕ್ಷ ರೂ. ಖಾತೆಯಿಂದ ಕಡಿತವಾದ ಬಳಿಕ ತಾವು ಸೈಬರ್ ವಂಚನೆಗೆ ಒಳಗಾಗಿರುವುದು ಅವರಿಗೆ ಗೊತ್ತಾಗಿದೆ. ಬಳಿಕ ಅವರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪರಿಚಿತರಿಂದ ಬರುವ ಎಪಿಕೆ ಫೈಲ್ಗಳು, ಲಿಂಕ್ಗಳು ಅಥವಾ ಮದುವೆ ಆಮಂತ್ರಣದ ಹೆಸರಿನಲ್ಲಿರುವ ಅಪ್ಲಿಕೇಶನ್ಗಳನ್ನು ಯಾವುದೇ ಕಾರಣಕ್ಕೂ ಡೌನ್ಲೋಡ್ ಮಾಡಬಾರದು ಎಂದು ಸೈಬರ್ ತಜ್ಞರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಬ್ಯಾಂಕ್ ಹಾಗೂ ಟ್ರಾಫಿಕ್ ಚಲನ್ ಹೆಸರಿನಲ್ಲಿ ಎಪಿಕೆ ಫೈಲ್ ಕಳುಹಿಸಿ ವಂಚಿಸುತ್ತಿದ್ದ ಸೈಬರ್ ಕಳ್ಳರು, ಇದೀಗ ಮದುವೆ ಆಮಂತ್ರಣದ ಹೆಸರಿನಲ್ಲಿ ಹೊಸ ತಂತ್ರ ಬಳಸುತ್ತಿದ್ದಾರೆ. ಇಂತಹ ಫೈಲ್ಗಳನ್ನು ತೆರೆದರೆ ಮೊಬೈಲ್ ಹ್ಯಾಕ್ ಆಗುವ ಸಾಧ್ಯತೆ ಇದ್ದು, ವೈಯಕ್ತಿಕ ಮಾಹಿತಿ ಹಾಗೂ ಬ್ಯಾಂಕ್ ಖಾತೆಯ ಹಣ ಕಳವಾಗುವ ಅಪಾಯವಿದೆ ಎಂದು ಸೈಬರ್ ತಜ್ಞರು ಎಚ್ಚರಿಸಿದ್ದಾರೆ.

















































