
ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು “ದೇಶ ಕಂಡ ಅತ್ಯಂತ ಯುವಜನ ವಿರೋಧಿ ಪ್ರಧಾನಿ” ಎಂದು ಟೀಕಿಸಿದ್ದಾರೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯಲು ಕೂಡ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನ ನೀಟ್ ಹಗರಣ ವಿರೋಧಿಸಿ ಸಂಸತ್ ಚಲೋ ಮೆರವಣಿಗೆ ನಡೆಸುತ್ತಿದ್ದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಬೆಂಬಲಿಗರ ಮೇಲೆ ನಡೆದ ಲಾಠಿ ಚಾರ್ಜ್ ಅನ್ನು ರಾಹುಲ್ ಖಂಡಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ 152 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಂದ 7.5 ಕೋಟಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಆದರೆ ಇದುವರೆಗೆ ಯಾವುದೇ ತಪ್ಪಿತಸ್ಥರಿಗೆ ಶಿಕ್ಷೆಯಾಗಿಲ್ಲ, ಅದರ ಪರಿಣಾಮವನ್ನು ಅನುಭವಿಸುತ್ತಿರುವವರು ವಿದ್ಯಾರ್ಥಿಗಳೇ ಎಂದು ಅವರು ಹೇಳಿದ್ದಾರೆ.
ವಿಡಿಯೊ ಹಂಚಿಕೊಂಡಿರುವ ರಾಹುಲ್, ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರು ಮುಕ್ತವಾಗಿ ಓಡಾಡುತ್ತಿದ್ದರೆ, ನ್ಯಾಯಯುತ ಬೇಡಿಕೆಗಳೊಂದಿಗೆ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗ ಮಾಡಲಾಗುತ್ತಿದೆ. ಇದು ಯುವಜನರ ಮೇಲಿನ ದಾಳಿಯಾಗಿದೆ ಎಂದು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳಿಗೆ ನ್ಯಾಯಯುತ ಶಿಕ್ಷಣ ವ್ಯವಸ್ಥೆ ದೊರೆಯುವುದು ಅವರ ಹಕ್ಕು. ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಅಶ್ರುವಾಯು ಮತ್ತು ಲಾಠಿ ಚಾರ್ಜ್ ನಡೆಸುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಅವರ ಬೇಡಿಕೆಗಳನ್ನು ಸರ್ಕಾರ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಹುಲ್ ಆಗ್ರಹಿಸಿದ್ದಾರೆ.

















































