26.9 C
Udupi
Tuesday, July 7, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 573

ಭರತೇಶ್ ಶೆಟ್ಟಿ , ಎಕ್ಕಾರು

ತಾಮ್ರಧ್ವಜ ಹೀಗೆ ಅರ್ಜುನನನ್ನು ಸಂರಕ್ಷಿಸಿಕೊಳ್ಳುವಂತೆ ಎಚ್ಚರಿಕೆ ನೀಡಿ ಏಕ ಕಾಲದಲ್ಲಿ ಕೃಷ್ಣ ಹಾಗು ಅರ್ಜುನರ ದಾಳಿಯನ್ನು ಎದುರಿಸುತ್ತಾ, ಅರ್ಜುನನ್ನೇ ಗುರಿಯಾಗಿ ಉಗ್ರ ಆಕ್ರಮಣ ಮುಂದುವರಿಸಿದನು. ಶ್ರೀಕೃಷ್ಣನ ಶರಗಳನ್ನು ತಡೆದು ಖಂಡಿಸುತ್ತಾ ಅರ್ಜುನನಿಗೆ ಚೇತರಿಸಿಕೊಳ್ಳಲು ಅವಕಾಶವನ್ನೇ ನೀಡದೆ ಮೂರ್ಛೆ ಹೋಗುವಂತೆ ಮಾಡಿ ಬಿಟ್ಟನು.

ತನ್ನ ಕಣ್ಣೆದುರೇ ಅರ್ಜುನ ತಾಮ್ರಧ್ವಜನ ಶರಾಘಾತಗಳನ್ನು ತಡೆದು ಹೋರಾಡುವಲ್ಲಿ ವಿಫಲನಾಗಿ ಮೂರ್ಛಿತನಾದಾಗ ಶ್ರೀಕೃಷ್ಣ ಅತ್ಯುಗ್ರನಾದನು. ಕೋಪಗೊಂಡು ಸುದರ್ಶನ ಚಕ್ರವನ್ನೇ ಧರಿಸಿ ಪ್ರಯೋಗಿಸಿಯೇ ಬಿಟ್ಟನು. ಸುದರ್ಶನ ಚಕ್ರ ಗಿರಗಿರನೆ ತಿರುಗುತ್ತ ಬಂದರೂ ರತ್ನಪುರದ ಸೇನೆ ಕಿಂಚಿತ್ ಹೆದರಲೂ ಇಲ್ಲ, ಭಯಭೀತವೂ ಆಗಲಿಲ್ಲ. ಎಲ್ಲರೂ ಹರಿ ಭಕ್ತರೇ! ಯುದ್ಧವನ್ನೇ ಮಾಡುತ್ತಿದ್ದರೂ ದೇವರ ನಾಮಸ್ಮರಣೆ ನಿರಂತರ ಮಾಡುತ್ತಲೇ ಹೋರಾಡುತ್ತಿದ್ದ ಭಕ್ತಿ ಶಕ್ತಿಯ ಯೋಧರು. ಸುದರ್ಶನ ಚಕ್ರ ತಿರುಗುತ್ತಾ ಇಡೀ ರತ್ನ ಪುರದ ಸೈನ್ಯಕ್ಕೆ ಪ್ರದಕ್ಷಿಣೆ ಹಾಕಿತೇ ಹೊರತು ಯಾರ ಸಂಹಾರವನ್ನೂ ಮಾಡಲಿಲ್ಲ. ದಿವ್ಯವಾದ ಸುದರ್ಶನ ವಿಶೇಷ ಪ್ರಕಾಶ, ತೇಜಸ್ಸಿನಿಂದ ಪ್ರಜ್ವಲಿಸಿ ಪ್ರಭೆಯೊಳಗೆ ಲೀನವಾಗಿ ಕಾಣದಾಗಿ ಹೋಯಿತು. ಇಲ್ಲೊಂದು ಸತ್ಯ ಮತ್ತೆ ಸಾಬೀತಾಗುತ್ತದೆ. ಧರ್ಮ, ನ್ಯಾಯ, ಭಕ್ತಿ ಈ ಮೂರನ್ನು ಗೆಲ್ಲಬಲ್ಲ ಶಕ್ತಿ ಯಾರಿಗೂ, ಯಾವ ಆಯುಧಕ್ಕೂ ಇಲ್ಲ ಸ್ವಯಂ ದೇವರೇ ಆಗಿದ್ದರೂ ಶ್ರೀಕೃಷ್ಣನೇ ಪ್ರಯೋಗಿಸಿದ ಸುದರ್ಶನ ಚಕ್ರ ತಾಮ್ರಧ್ವಜ ಮತ್ತು ಅವನ ಸೇನೆಯನ್ನು ಏನೂ ಮಾಡದೆ ಧರ್ಮ, ನ್ಯಾಯ ಮತ್ತು ಭಕ್ತಿಯ ಶಕ್ತಿಗೆ ಮಣಿದು ಅಂತರ್ಧಾನವಾಯಿತು.

ತಾಮ್ರಧ್ವಜನಿಗೆ ತನ್ನ ದೇವರು ಶ್ರೀಚಕ್ರವನ್ನೇ ಪ್ರಯೋಗಿಸುವವರೆಗೆ ಮುಂದಾದ ಎಂದರೆ ದೇವರ ಇಚ್ಚೆ ಏನೆಂದು ಗೊಂದಲವಾಯಿತೋ? ಅಥವಾ ತನ್ನನ್ನು ವಧಿಸಲೇ ಬೇಕೆಂದು ಭಗವಂತ ಸಂಕಲ್ಪ ಮಾಡಿದ್ದಾನೋ? ನಾನು ಆತನ ಇಚ್ಚೆಗೆ ವಿರುದ್ಧವಾಗಿ ಹೋರಾಡುತ್ತಿದ್ದೇನೋ ಎಂಬ ಆತಂಕವೂ ಒಮ್ಮೆಗೆ ಮನ ಮಾಡಿತು. ಮನದಲ್ಲಿ ನುಸುಳಿದ ಚಿಂತೆಯೊಳಗೆ ಒಂದು ಸುತ್ತು ಯೋಚಿಸಿದ ತಾಮ್ರಧ್ವಜ, ತಕ್ಷಣವೇ ಒಂದು ತೀರ್ಮಾನಕ್ಕೆ ಬಂದನು. ಏನೆಂದರೆ ತನ್ನ ಕರ್ತವ್ಯವನ್ನು ಮಾಡುತ್ತಿರುವ ನನಗೆ ದೇವರ ದಯೆಯಿದೆ. ಹಾಗಾಗಿಯೇ ಸುದರ್ಶನ ಚಕ್ರವೂ ಹಾನಿ ಮಾಡದೆ ಹಿಂದಿರುಗಿದೆ. ಹಾಗಾಗಿ ನಾನು ಯುದ್ಧವನ್ನು ಮುಂದುವರಿಸಿ ನನ್ನ ತಂದೆ ಕೈಗೊಂಡಿರುವ ಯಾಗ ಮತ್ತು ಕೃಷ್ಣ ದರ್ಶನದ ಆಸೆ ಎರಡನ್ನೂ ಪೂರೈಸಿಕೊಡುತ್ತೇನೆ. ಸದ್ಯ ನನಗದೇ ಕರ್ತವ್ಯವೂ ಧರ್ಮವೂ ಆಗಿದೆ. ಮತ್ತೇನಾಗಲಿದೆಯೋ ಅದು ದೇವರ ಇಚ್ಚೆಯಂತೆಯೇ ಆಗಲಿ ಎಂದು ತೀರ್ಮಾನಿಸಿ ಯುದ್ಧ ನಿರತನಾಗಿಯೇ ಮುಂದುವರಿದ.

ಹೀಗೆ ನಿರ್ಧರಿಸಿದ ತಾಮ್ರಧ್ವಜ ವೀರಾವೇಶದಿಂದ ಹೋರಾಡುತ್ತಿರುವಾಗ ಶ್ರೀಕೃಷ್ಣ ಮತ್ತಷ್ಟು ಕ್ರೋಧಾವೇಶಕ್ಕೊಳಗಾದನು. ನೋಡುತ್ತಿದ್ದಂತೆಯೇ ರಥದಿಂದ ಇಳಿದು ಸರಸರನೆ ತಾಮ್ರಧ್ವಜನ ರಥದತ್ತ ಹೆಜ್ಜೆ ಹಾಕ ತೊಡಗಿದ. ತಾಮ್ರಧ್ವಜನೂ ರಥದಿಂದ ಇಳಿದು ಕೃಷ್ಣನಿಗೆ ಎದುರಾಗಿ ರಣಭೂಮಿಗಿಳಿದು ನಡೆದು ಮುಂದೆ ಬಂದನು. ತಾಮ್ರಧ್ವಜ ಶ್ರೀಕೃಷ್ಣನನ್ನು ಸಮೀಪಿಸುತ್ತಿದ್ದಂತೆಯೇ ಶ್ರೀಕೃಷ್ಣ ಬಲಗಾಲನ್ನೆತ್ತಿ ತಾಮ್ರಧ್ವಜನ ಎದೆಗೆ ಒದ್ದು ಕೆಡಹಾಕಿದನು. ಶ್ರೀಕೃಷ್ಣನ ಪಾದ ಕೆಳಗೆ ಬಿದ್ದಿರುವ ತಾಮ್ರಧ್ವಜನ ಎದೆಯ ಮೇಲಿದೆ. ತಾಮ್ರಧ್ವಜ ಎರಡೂ ಕೈಗಳಿಂದ ಶ್ರೀಕೃಷ್ಣನ ಪಾದವನ್ನು ಬಲವಾಗಿ ಎದೆಗೊತ್ತಿ ಹಿಡಿದಿದ್ದಾನೆ. ನೂರಾರು ವರುಷ ತಪಸ್ಸು ಮಾಡಿದರೂ ಕಾಣ ಸಿಗದ ಶ್ರೀಹರಿಯ ಪಾದ ತಾನಾಗಿ ಎನ್ನ ಎದೆಯ ಮೇಲೆ, ನನ್ನ ಕೈಯೊಳಗೆ ಸಿಕ್ಕಿದೆ. ಭಕ್ತನಿಗೆ ಬಿಟ್ಟು ಬಿಡುವ ಮನಸ್ಸು ಬಂದೀತೇ? ತಾಮ್ರಧ್ವಜ ಹಿಡಿದ ಪಟ್ಟು ಸಡಿಲಿಸಲಿಲ್ಲ. ಕೃಷ್ಣ ಒಂಟಿಕಾಲಿನಲ್ಲಿ ನಿಂತು ಬಿಡಿಸಲು ಸೆಳೆದಾಡುತ್ತಿದ್ದಾನೆ. ಇದೇ ಸಮಯ ಮೂರ್ಛಿತನಾಗಿ ಬಿದ್ದಿದ್ದ ಅರ್ಜುನ ಎಚ್ಚರಗೊಂಡಿದ್ದಾನೆ.

ಅರ್ಜುನ ಮೂರ್ಛೆಯಿಂದ ಚೈತನ್ಯ ಹೊಂದಿ ನೋಡಿದರೆ ಕೃಷ್ಣ ಮತ್ತು ತಾಮ್ರಧ್ವಜ ರಣಭೂಮಿಯಲ್ಲಿ ಪದಾತಿಗಳಾಗಿ ಮಲ್ಲ ಯುದ್ಧ ನಿರತರಾದಂತೆ ಕಾಣಿಸುತ್ತಿದ್ದಾರೆ. ತಾಮ್ರಧ್ವಜ ಶ್ರೀಕೃಷ್ಣನ ಪಾದವನ್ನು ಬಿಡದೆ ಹಿಡಿದಿರುವಾಗ, ಬಿಡಿಸಲು ಎಳೆದಾಡಿದ ಶ್ರೀಕೃಷ್ಣನೂ ಬಿದ್ದು ಬಿಟ್ಟ. ಇಬ್ಬರೂ ನೆಲದ ಮೆಲೆ ಬಿದ್ದು ಹೊರಳಾಡುತ್ತಿದ್ದಾರೆ. ಅರ್ಜುನ ತಕ್ಷಣ ಶ್ರೀಕೃಷ್ಣನನ್ನು ರಕ್ಷಿಸಲೆಂದು ತಾಮ್ರಧ್ವಜನನ್ನು ಗುರಿಯಾಗಿ ಬಾಣ ಪ್ರಯೋಗಿಸಿದ. ಅರ್ಜುನನ ಬಾಣ ಬರುತ್ತಿರುವುದನ್ನು ಗ್ರಹಿಸಿದ ವೀರ ತಾಮ್ರಧ್ವಜ ಹೊರಳಿ ತಪ್ಪಿಸಿದ. ಶ್ರೀಕೃಷ್ಣನ ಪಾದ ಬಿಡದೆ ಹೊರಳಾಡುತ್ತಲೇ ಕೃಷ್ಣನನ್ನು ಎಳೆದುಕೊಂಡೇ ಪಾರ್ಥನ ರಥದತ್ತ ಧಾವಿಸಿದ. ಅರ್ಜುನನ ರಥ ಸಮೀಪಿಸುತ್ತಿದ್ದಂತೆಯೇ ಎದ್ದು ನಿಂತು ಶ್ರೀಕೃಷ್ಣನ ಪಾದವನ್ನು ಆಧಾರವಾಗಿ ಹಿಡಿದು ನೆಗೆದು ಅರ್ಜುನನನ್ನು ಒದ್ದು ರಥದಿಂದ ಕೆಳ ಹಾಕಿದ. ಅರ್ಜುನನೂ ನೆಲದ ಮೇಲೆ ಬಿದ್ದು ಬಿಟ್ಟನು. ಬಿದ್ದವನು ಎದ್ದು ಓಡಿಬಂದು ತಾಮ್ರಧ್ವಜನ ಕೈಯಿಂದ ಶ್ರೀಕೃಷ್ಣನನ್ನು ಬಿಡಿಸಲು ಶ್ರಮಿಸತೊಡಗಿದ. ಈಗ ತಾಮ್ರಧ್ವಜನೋರ್ವನ ಮೇಲೆ ಕೃಷ್ಣನಾರ್ಜುನರಿಬ್ಬರ ಕುಸ್ತಿ ಕಾಳಗದ ರೀತಿ ಕಾಣಿಸುತ್ತಿದೆ. ಏನೇ ಮಾಡಿದರೂ, ಎಷ್ಟೇ ಸೆಳೆದಾಡಿದರೂ, ಗುದ್ದಿದರೂ, ಒದ್ದರೂ ತಾಮ್ರಧ್ವಜ ಕೃಷ್ಣನ ಪಾದ ಬಿಡುತ್ತಿಲ್ಲ. ಹರಸಾಹಸ ಪಟ್ಟು ಎದ್ದು ನಿಲ್ಲುವುದು ಮತ್ತೆ ಒದೆಯುದು, ಎಳೆಯುದು, ಬೀಳುವುದು, ಹೊರಳಾಡುವುದು. ಹೀಗೆ ನಿರಂತರವಾದ ಈ ಸೆಣಸಾಟ ಮುಗಿಯದ ಕಥೆಯಾಗಿ ಹೋರಾಟ ಮುಂದುವರಿದಿದೆ. ಈಗ ಅರ್ಜುನನ ರಟ್ಟೆ ತಾಮ್ರಧ್ವಜ ಬಾಹುಗಳೆಡೆ ಬಂಧಿಯಾಗಿದೆ. ಆತನನ್ನೂ ಹಿಡಿದುಕೊಂಡೆ ಬಲವಾಗಿ ಇಬ್ಬರನ್ನೂ ಹಿಡಿದಿಟ್ಟಿದ್ದಾನೆ. ಕೃಷ್ಣಾರ್ಜುನರಿಬ್ಬರೂ ಪೂರ್ಣಬಲದಿಂದ ತಾಮ್ರಧ್ವಜನ ಹಿಡಿತ ಸಡಿಲಿಸಲು ಹೋರಾಡುತ್ತಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page