
ಬೆಂಗಳೂರು: ಮತದಾರರ ಪಟ್ಟಿಯನ್ನು ಹೆಚ್ಚು ಪಾರದರ್ಶಕ ಹಾಗೂ ನಿಖರಗೊಳಿಸುವ ಉದ್ದೇಶದಿಂದ ಭಾರತೀಯ ಚುನಾವಣಾ ಆಯೋಗವು ಜೂನ್ 30ರಿಂದ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಮೂರನೇ ಹಂತವನ್ನು ಆರಂಭಿಸುತ್ತಿದೆ. ಕರ್ನಾಟಕ ಸೇರಿದಂತೆ ದೇಶದ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಅಭಿಯಾನ ಏಕಕಾಲದಲ್ಲಿ ಜಾರಿಯಾಗಲಿದೆ.
ಜೂನ್ 30ರಿಂದ ಜುಲೈ 29ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ ಪರಿಶೀಲನೆ ನಡೆಸಲಿದ್ದಾರೆ. ಈ ವೇಳೆ ಮತದಾರರ ವಿವರಗಳ ದೃಢೀಕರಣದ ಜೊತೆಗೆ ಕುಟುಂಬ ಆಧಾರಿತ ಪ್ರೊಜೆನಿ ಮ್ಯಾಪಿಂಗ್ ವಿಧಾನವನ್ನು ಬಳಸಲಾಗುತ್ತದೆ. ವೋಟರ್ ಐಡಿ ಹಾಗೂ ಆಧಾರ್ ವಿವರಗಳ ಪರಿಶೀಲನೆಯೂ ನಡೆಯಲಿದೆ.
ಸಮೀಕ್ಷೆ ವೇಳೆ ಮನೆಗೆ ಲಭ್ಯವಿರದವರು ಅಥವಾ ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಗೊಂಡಿರುವವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮಾಹಿತಿ ಪರಿಶೀಲನೆಗೆ ಸಹಕರಿಸುವಂತೆ ಸೂಚಿಸಲಾಗಿದೆ.
ಹೊಸದಾಗಿ 18 ವರ್ಷ ಪೂರೈಸಿದವರು ಅಥವಾ ಹೆಸರು ನೋಂದಾಯಿಸದವರು ಫಾರಂ–6 ಮೂಲಕ ಅರ್ಜಿ ಸಲ್ಲಿಸಬಹುದು. ಹೆಸರು, ವಿಳಾಸ ಅಥವಾ ಇತರೆ ತಿದ್ದುಪಡಿಗಳಿಗೆ ಫಾರಂ–8 ಬಳಸಬೇಕು. ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಆಕ್ಷೇಪಣೆಗಳ ಪರಿಶೀಲನೆ ಬಳಿಕ ಅಕ್ಟೋಬರ್ 7ರಂದು ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ.
ಕರ್ನಾಟಕ, ದೆಹಲಿ, ಪಂಜಾಬ್, ಹರಿಯಾಣ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಒಟ್ಟು 19 ಪ್ರಮುಖ ಪ್ರದೇಶಗಳಲ್ಲಿ ಈ ಪರಿಷ್ಕರಣೆ ಜಾರಿಯಾಗಲಿದೆ.
ಇನ್ನೊಂದೆಡೆ, ದೇಶದ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ 5.18 ಕೋಟಿಗೂ ಅಧಿಕ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ವರದಿಯಾಗಿದೆ. ಈ ಕ್ರಮ ರಾಜಕೀಯ ಚರ್ಚೆಗೆ ಕಾರಣವಾದರೂ, ಚುನಾವಣಾ ಆಯೋಗದ ಪ್ರಕ್ರಿಯೆಗೆ ಸಂಬಂಧಿಸಿದ ಕಾನೂನು ಸವಾಲುಗಳ ನಡುವೆಯೂ ಸುಪ್ರೀಂ ಕೋರ್ಟ್ ಅದರ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿದಿದೆ.


































