
ಬೆಂಗಳೂರು: ಆರ್ಎಸ್ಎಸ್ ದಾಖಲೆಗಳನ್ನು ನೀಡದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಕಾನೂನು ಚೌಕಟ್ಟನ್ನು ಮೀರುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ರಮೇಶ್ ಜಿಗಜಿಣಗಿ ಆಡಿಯೋ ವಿಚಾರಕ್ಕೆ ಪ್ರತಿಕ್ರಿಯಿಸಿ, ದಾಖಲೆಗಳು ಯಾರ ಬಳಿಯಿದ್ದರೂ ಹೊರತರುವ ಅವಕಾಶ ನೀಡಬೇಕು. ದಾಖಲೆಗಳಿದ್ದರೆ ಕಾನೂನು ತನ್ನ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಕಾನೂನಾತ್ಮಕ ಪ್ರಶ್ನೆ ಕೇಳಿದ್ದಕ್ಕೆ ಬಿಜೆಪಿ ನಾಯಕರು ಹಾಗೂ ಆರ್ಎಸ್ಎಸ್ ಬೆಂಬಲಿಗರಿಂದ ಬೆದರಿಕೆ ಬರುತ್ತಿದೆ ಎಂದು ಆರೋಪಿಸಿದ ಅವರು, ಇಂತಹ ಒತ್ತಡಗಳಿಗೆ ತಾವು ಹೆದರುವುದಿಲ್ಲ. ಈ ಹಿಂದೆಯೂ ಬೆದರಿಕೆ ಎದುರಿಸಿದ್ದೇನೆ.
ಒಟ್ಟಾರೆ ಆರೆಸ್ಸೆಸ್ಗೆ ಯಾರೂ ಪ್ರಶ್ನೆ ಮಾಡಬಾರದು, ಮನಸ್ಮೃತಿ, ಚತುರ್ವರ್ಣದಲ್ಲಿ ಅವರಿಗೆ ನಂಬಿಕೆ. ಬಿಜೆಪಿಯಲ್ಲಿ ದಲಿತರು ಆಳು ಮಕ್ಕಳಾಗಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಅವರು ವಿಪಕ್ಷ ನಾಯಕನ ಸ್ಥಾನ ಪಡೆಯಲು ಬುಟ್ಟಿಯಲ್ಲಿ ಆರೆಸ್ಸೆಸ್ನವರ ಚಡ್ಡಿಗಳನ್ನು ಹೊತ್ತರು. ಅಲ್ಲಿ ಆಳು ಮನಃಸ್ಥಿತಿ ಇದೆ. ಈ ದೇಶಕ್ಕೂ ಸಮಾಜಕ್ಕೂ ಆರೆಸ್ಸೆಸ್ ಅಗತ್ಯವೇ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ರಮೇಶ್ ಜಿಗಜಿಣಗಿ ಆಡಿಯೋ ಕುರಿತು ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ಅವರು ಬಿಜೆಪಿಗೆ ಸ್ಪಷ್ಟನೆ ಕೊಡಲಿ ಎಂದು ಹೇಳಿದರು.


































