
ಪುಣೆ: ಈ ವರ್ಷದ ಕೊನೆಯಲ್ಲಿ ರಾಜಸ್ಥಾನದ ಉದಯಪುರ ಅರಮನೆಯಲ್ಲಿ ಅದ್ಧೂರಿಯಾಗಿ ಮದುವೆಯಾಗಲು ಸಿದ್ಧವಾಗಿದ್ದ ಜೋಡಿಯ ಬದುಕು ದುರಂತ ಅಂತ್ಯ ಕಂಡಿದೆ. 26 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ಅವರ ಭಾವಿ ಪತ್ನಿ ಸಿಯಾ ಗೋಯಲ್ ಹಾಗೂ ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿರುವ ಆರೋಪ ಬೆಳಕಿಗೆ ಬಂದಿದೆ.
ಮೊದಲಿಗೆ ಪ್ರಕರಣವನ್ನು ಅಪಘಾತ ಎಂದು ಹೇಳಲಾಗಿತ್ತು. ಆದರೆ ತನಿಖೆ ಮುಂದುವರಿದಂತೆ ಕೊಲೆ ಸಂಚಿನ ಅಂಶಗಳು ಹೊರಬಿದ್ದಿವೆ. ಮೃತನ ತಂದೆ ವಿಶಾಲ್ ಅಗರ್ವಾಲ್ ನೀಡಿದ ಮಾಹಿತಿಯ ಪ್ರಕಾರ, ಜೂನ್ 18ರ ಕೊಲೆಗೆ ನಾಲ್ಕು ದಿನಗಳ ಮೊದಲು ಸಿಯಾ ಮೊದಲ ಬಾರಿಗೆ ಕೇತನ್‌ನನ್ನು ಕೊಲ್ಲಲು ಯತ್ನಿಸಿದ್ದಳು.
ವಿವಾಹಪೂರ್ವ ಪ್ರವಾಸಕ್ಕೆಂದು ಬಾಲಿಗೆ ಹೋಗುವ ವೇಳೆ ಕೇತನ್‌ನ ಪಾಸ್‌ಪೋರ್ಟ್ ನಾಪತ್ತೆಯಾಗಿ ಪ್ರಯಾಣ ರದ್ದಾಗಿತ್ತು. ಬಳಿಕ ಸಿಯಾ ಕೇತನ್‌ನನ್ನು ಲೋಹಗಡ್ ಕೋಟೆಗೆ ಕರೆದುಕೊಂಡು ಹೋಗಿ ಅಲ್ಲಿಂದ ತಳ್ಳಲು ಯತ್ನಿಸಿದ್ದಾಳೆ ಎನ್ನಲಾಗಿದೆ. ಆದರೆ ಪೊದೆ ಹಿಡಿದು ಕೇತನ್ ಪ್ರಾಣಾಪಾಯದಿಂದ ಪಾರಾಗಿದ್ದರು. ನಂತರ ತಾನು ತಳ್ಳಿದ ರಹಸ್ಯ ಬಯಲಾಗಬಹುದು ಎಂದು ಹೆದರಿದ ಸಿಯಾ, ತಕ್ಷಣವೇ ‘ಹಾವು ಹಾವು’ ಎಂದು ಜೋರಾಗಿ ಕೂಗುತ್ತಾ ಓಡಿ ಬಂದು ಕೇತನ್‌ನನ್ನು ಬಿಗಿಯಾಗಿ ತಬ್ಬಿಕೊಂಡು ನಾಟಕವಾಡಿ ಪರಿಸ್ಥಿತಿಯನ್ನು ಮರೆಮಾಚಿದ್ದಾಳೆ ಎಂದು ಆರೋಪಿಸಲಾಗಿದೆ.
ಇದಾದ ಕೆಲ ದಿನಗಳ ಬಳಿಕ, ಜೂನ್ 18ರಂದು ಸಿಯಾ ತನ್ನ ಪ್ರಿಯಕರ ಚೇತನ್ ಚೌಧರಿಯೊಂದಿಗೆ ಮತ್ತೆ ಕೋಟೆಗೆ ಕರೆದೊಯ್ದು ಕೇತನ್‌ನನ್ನು ಸುಮಾರು 400 ಅಡಿ ಆಳದ ಕಂದಕಕ್ಕೆ ತಳ್ಳಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ತೀವ್ರ ಗಾಯಗೊಂಡ ಕೇತನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ಬಳಿಕ ಸಿಯಾ ಇದನ್ನು ಆಕಸ್ಮಿಕ ಬಿದ್ದು ಸಾವು ಎಂದು ಪೊಲೀಸರಿಗೆ ಹೇಳಿದ್ದಳು. ಆದರೆ ತಂದೆಯ ಅನುಮಾನ ಮತ್ತು ಪೊಲೀಸರ ತನಿಖೆಯಿಂದ ಚೇತನ್ ಸಿಕ್ಕಿಬಿದ್ದಿದ್ದು, ವಿಚಾರಣೆಯಲ್ಲಿ ಕೊಲೆ ಸಂಚು ಬಯಲಾಗಿದೆ. ನಂತರ ಸಿಯಾಳನ್ನೂ ಬಂಧಿಸಲಾಗಿದೆ.
ಪುಣೆ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ಮಾಹಿತಿ ಪ್ರಕಾರ, ಇಬ್ಬರು ಆರೋಪಿಗಳನ್ನು ನ್ಯಾಯಾಲಯ 7 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.


































